ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೆರೆ ತುಂಬಿಸುವುದು ಒಂದೇ ಪರಿಹಾರ. ಮಲಪ್ರಭಾ ನೀರು ಬರುತ್ತಿದ್ದು ಕೆರೆ ತುಂಬಿಸಲು ಅಧಿಕಾರಿಗಳು ತತ್‌ಕ್ಷಣದಿಂದಲೇ ಕ್ರಮಕಗೊಳ್ಳಬೇಕು ಎಂದು ಸಚಿವ ಜಾರಕಿಹೊಳಿ ಹೇಳಿದರು.
ಧಾರವಾಡ:
ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಕುಡಿಯುವ ನೀರು, ಮೇವಿನ ಕೊರತೆ ಆಗುವ ಸಾಧ್ಯತೆ ಇದ್ದು ಮುನ್ನಚ್ಚರಿಕೆ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಮಾತನಾಡಿದ ಅವರು, ಮಳೆ ಇಲ್ಲದೆ ಬೆಳೆಗಳಿಗೆ ತೊಂದರೆಯಾಗಿದ್ದು ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ ಮೇಲೆ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದರು.
ಕೆರೆ ತುಂಬಿಸಿ:ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೆರೆ ತುಂಬಿಸುವುದು ಒಂದೇ ಪರಿಹಾರ. ಮಲಪ್ರಭಾ ನೀರು ಬರುತ್ತಿದ್ದು ಕೆರೆ ತುಂಬಿಸಲು ಅಧಿಕಾರಿಗಳು ತತ್‌ಕ್ಷಣದಿಂದಲೇ ಕ್ರಮಕಗೊಳ್ಳಬೇಕು ಎಂದ ಸಚಿವರು, ಅವಳಿ ನಗರದಲ್ಲಿರುವ ಲೋಕೋಪಯೋಗಿ ಇಲಾಖೆಯ ಕಾಮಗಾರಿ ಶೀಘ್ರ ಕಾರ್ಯರೂಪಕ್ಕೆ ತರಬೇಕು ಹಾಗೂ ಎಲ್ ಆ್ಯಂಡ್ ಟಿ ಕಂಪನಿಗೆ ಸಂಬಂಧಿಸಿದ ಸಮಸ್ಯೆ ಶೀಘ್ರವೇ ಬಗೆಹರಿಸಿ, ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ರೈತರಿಗೆ ಬೆಳೆ ವಿಮೆ ಮಾಡಿಸುವ ಏಜೆಂಟರ್ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಶಾಸಕರಾದ ಅಬ್ಬಯ್ಯ ಪ್ರಸಾದ, ಎನ್.ಎಚ್. ಕೋನರಡ್ಡಿ ಮಾತನಾಡಿ, ಬೆಳೆವಿಮೆ ಪರಿಹಾರ ಪ್ರಕರಣಗಳಲ್ಲಿ ಬೆಳೆ ಮಿಸ್ ಮ್ಯಾಚ್‌ನಿಂದ ರೈತರಿಗೆ ಪರಿಹಾರ ವಿಳಂಬವಾಗುತ್ತಿದೆ. ಏಜೆಂಟರು ಬೆಳೆ ವಿಮೆ ನೋಂದಣಿಗೆ ಹೆಚ್ಚಿನ ಪರಿಹಾರ ಕೊಡಿಸುತ್ತೇವೆ ಎಂದು ರೈತರನ್ನು ಮೋಸಗೊಳಿಸುವ ಪ್ರಕರಣ ನಡೆದಿವೆ. ಇಂಥ ಪ್ರಕರಣಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಳೆ- ಬೆಳೆ ವಿವರ ನೀಡಿದರು. ಸಭೆಯಲ್ಲಿ ಶಾಸಕರಾದ ಎಂ.ಆರ್. ಪಾಟೀಲ, ಎಫ್.ಎಚ್. ಜಕಪ್ಪನವರ, ಅರವಿಂದ ಬೆಲ್ಲದ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ವಿನಯ ಕುಲಕರ್ಣಿ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಜಿಪಂ ಸಿಇಒ ಭುವನೇಶ ಪಾಟೀಲ,ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಎಸ್ಪಿ ಗುಂಜನ್ ಆರ್ಯ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮತ್ತಿತರರು ಉಪಸ್ಥಿತರಿದ್ದರು.