ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಬರದ ಛಾಯೆ ಎಲ್ಲೆಡೆ ಆವರಿಸಿದ ಪರಿಣಾಮ, ಬಿಸಿಲಿನ ತಾಪಕ್ಕೆ ನೀರಿಲ್ಲದೆ ನದಿಪಾತ್ರಗಳು ಬತ್ತಿ ಹೋಗುತ್ತಿವೆ. ಜೀವಜಲಕ್ಕಾಗಿ ಪರದಾಡುತ್ತಿರುವ ಸಾವಿರಾರು ಜಲಚರಗಳು ನೀರು ಸಿಗದೆ ಜೀವ ಬಿಡುತ್ತಿವೆ. ಅಂತರ್ಜಲ ಕುಸಿತದ ಪರಿಣಾಮ ಬಾವಿ ಬೋರ್ವೆಲ್‌ಗಳಲ್ಲಿ ನೀರಿನ ಸೆಲೆ ಕರಗಿದ್ದು, ಕುಡಿಯುವ ನೀರಿಗಾಗಿನ ತತ್ವಾರ ಮಾರ್ಚ್ ಆರಂಭದಲ್ಲೇ ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಜೋಳದಡಗಿ ಬ್ಯಾರೇಜಿನ ಕೆಳಭಾಗದ ನದಿಪಾತ್ರದಲ್ಲಿ ನೀರು ಬತ್ತಿದ ಪರಿಣಾಮ, ಸಾವಿರಾರು ಮೀನುಗಳು ಉಸಿರು ಚೆಲ್ಲಿ ದಡದಲ್ಲಿ ನಿಶ್ಚೆಲವಾಗಿ ಬಿದ್ದಿವೆ. ನದಿಪಾತ್ರದಿಂದ ಕೂಗಳತೆ ದೂರದಲ್ಲಿರುವ ಗ್ರಾಮಗಳಲ್ಲಿ ದುರ್ನಾತಕ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ.
ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜೋಳದಡಗಿ ಬ್ರಿಡ್ಜ್ ಕಮ್ ಬ್ಯಾರೇಜ್ ಕೆಳವ್ಯಾಪ್ತಿಯ ಸೂಗೂರು, ಕೊಂಗಂಡಿ, ಅಗ್ನಿಹಾಳ್ ಹಾಗೂ ಗುಂಡ್ಲೂರು ಗ್ರಾಮಗಳಲ್ಲಿ ಇಂತಹ ಸಮಸ್ಯೆ ಕಣ್ಣಿಗೆ ರಾಚುತ್ತದೆ. ಬ್ಯಾರೇಜಿನಿಂದ ನೀರು ಬಿಡದಿರುವುದು ಹಾಗೂ ಆಹಾರ ಸಮಸ್ಯೆ ಕಾರಣಕ್ಕೆ ನದಿಯಲ್ಲಿದ್ದ ಜಲಚರಗಳು, ಸಾವಿರಾರು ಮೀನುಗಳು ದಡದಲ್ಲಿ ರಾಶಿಗಟ್ಟಲೇ ಸತ್ತುಬಿದ್ದಿವೆ.ಒಣಗುತ್ತಿರುವ ನೂರಾರು ಎಕರೆ ಭತ್ತದ ಬೆಳೆ
ಈ ಮಧ್ಯೆ, ಹೊಲಗಳಲ್ಲಿ ಬಿತ್ತನೆ ಮಾಡಿದ ಬೆಳೆ ನೀರಿನ ಅಭಾವದಿಂದ ಹಚ್ಚ ಹಸಿರಾಗಿದ್ದ ಭತ್ತದ ಫಸಲು ಬಿಸಲಿನ ತಾಪಕ್ಕೆ ಒಣಗುತ್ತಿರುವುದು ರೈತರ ಆತಂಕ್ಕೆ ಕಾರಣವಾಗಿದೆ. ಕಟಾವಿಗೆ ಬಂದಿರುವ ಭತ್ತದ ಪೈರಿಗೆ ತೇವಾಂಶ ಕೊರತೆ ಉಂಟಾಗಿ ಇಳುವರಿ ಕುಸಿಯುವ ಆತಂಕ ರೈತರ ನಿದ್ದೆಗೆಡಿಸಿದೆ. ಸುಮಾರು 400 ಎಕರೆಯಷ್ಟು ಪ್ರದೇಶದಲ್ಲಿನ ಭತ್ತದ ಬೆಳೆಗೆ ಇದು ಕಾಡುತ್ತಿದೆ.ಬ್ಯಾರೇಜ್‌ನಿಂದ ಬಿಡುವ ನೀರಿನ ಪ್ರಮಾಣ ಅವಲಂಬಿಸಿ ಭತ್ತ ಬಿತ್ತನೆ ಮಾಡಲಾಗುತ್ತದೆ. ಆದರೆ, ಈ ಬಾರಿ ಕುಡಿಯುವ ನೀರಿನ ಅಭಾವ ಸಾಧ್ಯತೆ ಅಂದಾಜಿನಿಂದಾಗಿ ಮುಂಜಾಗ್ರತಾ ಕ್ರಮವಾಗಿ ಬ್ಯಾರೇಜಿನ ಎಲ್ಲ ಗೇಟ್‌ಗಳನ್ನು ಬಂದ್ ಮಾಡಿ ಆದೇಶಿಸಿದ ಜಿಲ್ಲಾಡಳಿತ, ಕುಡಿಯುವ ನೀರಿಗಾಗಿ ಸಂಗ್ರಹ ಮಾಡಿದೆ.
ಇದರಿಂದಾಗಿ, ಬ್ಯಾರೇಜ್ ಕೆಳಗಡೆಯ ಗ್ರಾಮಗಳಿಗೆ ನೀರಿಲ್ಲ. 10-15 ದಿನಗಳಲ್ಲಿ ಕಟಾವು ಆಗಬೇಕಾಗಿರುವ ಭತ್ತದ ಪೈರು ತೇವಾಂಶದ ಕೊರತೆಯಿಂದ ಬಾಡುತ್ತಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.ಬ್ಯಾರೇಜ್‌ನಲ್ಲಿ ನೀರಿದ್ದು ಸರ್ಕಾರ ನೀರು ಬಿಡಬಹುದೆಂಬ ಲೆಕ್ಕಾಚಾರದ ಮೇಲೆ ರೈತರು ಬಿತ್ತನೆ ಮಾಡಿದ್ದಾರೆ. ಹಾಗೇ ನೋಡಿದರೆ ಈ ಅವಧಿಯಲ್ಲಿ ನಿಷೇಧವಿದೆ. ಆದರೂ, ಸರ್ಕಾರದ ನಿರ್ಧಾರ ಬದಲಾಗಬಹುದು ಎಂದು ನಿರೀಕ್ಷಿಸಿ ರೈತರು ಭತ್ತ ಬೆಳೆದಿದ್ದಾರೆ. ಪೈರು ಕಟಾವಿಗೆ ಬರುವ ಹಂತದಲ್ಲಿ ಬ್ಯಾರೇಜ್ ಗೇಟ್‌ಗಳನ್ನು ಹಾಕುವ ಮೂಲಕ ಕೆಳಗಡೆ ಪ್ರದೇಶಕ್ಕೆ ನೀರು ಇಲ್ಲದಂತಾಗಿ ಬೆಳೆ ಬಾಡುತ್ತಿವೆ. ಆತಂಕದಲ್ಲಿರುವ ರೈತರು ನೀರು ಬಿಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಒಂದು ವೇಳೆ, ಇನ್ನೊಂದು ವಾರಕಾಲ ಬ್ಯಾರೇಜಿನಿಂದ ನೀರು ಹರಿಸಿದರೆ ಭತ್ತದ ಒಳ್ಳೆಯ ಫಸಲು ಬರಬಹುದು ಅನ್ನೋದು ರೈತರ ಮನವಿ.ಜೋಳದಡಗಿ ಬ್ಯಾರೇಜಿನ ಮೂಲಕ ಕೆಳಭಾಗದ ಪ್ರದೇಶದ ನದಿಪಾತ್ರಕ್ಕೆ ನೀರು ಹರಿಸಿದರೆ ಜಲಚರಗಳು ಬದುಕುವ ಜೊತೆಗೆ, ರೈತರ ಭತ್ತದ ಬೆಳೆ ಒಣಗುವುದನ್ನು ತಡೆಯಬಹುದು. ಜಿಲ್ಲಾಡಳಿತಕ್ಕೆ ಈ ಬಗ್ಗೆ ಮನವಿ ಮಾಡಿದ್ದೇವೆ. ರೈತರ ಹಿತದೃಷ್ಟಿಯಿಂದ ನೀರು ಬಿಡಲಿ.
ಸಿದ್ದು ಪಾಟೀಲ್, ರೈತರು ಹಾಗೂ ಸಮಾಜ ಸೇವಕರು.