ಖಾಸಗಿ ಟ್ಯಾಂಕರ್‌ಗೆ ನೀರು; ಹೊಸಪೇಟೆ ನಗರಸಭೆಯಲ್ಲಿ ಠರಾವು ಪಾಸ್

| Published : May 28 2024, 01:09 AM IST

ಖಾಸಗಿ ಟ್ಯಾಂಕರ್‌ಗೆ ನೀರು; ಹೊಸಪೇಟೆ ನಗರಸಭೆಯಲ್ಲಿ ಠರಾವು ಪಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕುಡಿಯುವ ಸರಬರಾಜು ಮಾಡುತ್ತಿದ್ದ ಖಾಸಗಿ ಟ್ಯಾಂಕರ್‌ಗಳಿಗೆ ನೀರು ಪೂರೈಕೆಯನ್ನು ನಗರಸಭೆ ಭಾನುವಾರ ಸ್ಥಗಿತಗೊಳಿಸಿತ್ತು.

ಹೊಸಪೇಟೆ:ನಗರದ ಕುಡಿಯುವ ನೀರು ಶುದ್ಧೀಕರಣದಿಂದ ಖಾಸಗಿ ಟ್ಯಾಂಕರ್‌ಗಳಿಗೆ ನೀರು ಪೂರೈಕೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ನಗರಸಭೆ ಸದಸ್ಯರು ಒಕ್ಕೊರಲಿನ ತೀರ್ಮಾನ ಕೈಗೊಂಡು, ತಕ್ಷಣಕ್ಕೆ ಸಭೆಯಲ್ಲಿ ಠರಾವ್ ಪಾಸ್ ಮಾಡುವಂತೆ ಆಗ್ರಹಿಸಿದರು. ಇದಕ್ಕೆ ಕೆಲ ಸದಸ್ಯರ ಪ್ರತಿರೋಧದ ನಡುವೆ ಸಭೆಯಲ್ಲಿ ಠರಾವ್ ಪಾಸ್ ಮಾಡಲಾಯಿತು.

ನಗರ ಸೇರಿದಂತೆ ತಾಲೂಕಿನ ಗ್ರಾಮಗಳಿಗೆ ಇಲ್ಲಿನ ಕುಡಿಯುವ ನೀರು ಶುದ್ಧೀಕರಣ ಘಟಕದಿಂದ ಕುಡಿಯುವ ಸರಬರಾಜು ಮಾಡುತ್ತಿದ್ದ ಖಾಸಗಿ ಟ್ಯಾಂಕರ್‌ಗಳಿಗೆ ನೀರು ಪೂರೈಕೆಯನ್ನು ನಗರಸಭೆ ಭಾನುವಾರ ಸ್ಥಗಿತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಆನಂದ ಸಿಂಗ್ ಧರಣಿ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆ ನಗರಸಭೆ ಅಧ್ಯಕ್ಷೆ ಎ.ಲತಾ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ತುರ್ತು ಸಭೆಯಲ್ಲಿ ಸದಸ್ಯರಾದ ರೋಹಿಣಿ ವೆಂಕಟೇಶ್, ಎಲ್.ಎಸ್. ಆನಂದ್, ರೂಪೇಶ್, ರಮೇಶ್ ಗುಪ್ಪ, ಹನುಮಂತ (ಬುಜ್ಜಿ) ತಾರಿಹಳ್ಳಿ ಜಂಬುನಾಥ, ಕೆ. ಗೌಸ್ ಮಾತನಾಡಿ, ಖಾಸಗಿ ಟ್ಯಾಂಕರ್‌ಗಳಿಗೆ ಏಕಾಏಕಿ ನೀರು ಪೂರೈಕೆ ನಿಲ್ಲಿಸಿದ್ದು ಏಕೆ? ಎಂದು ಪ್ರಶ್ನಿಸಿದರು.

ಬೇಸಿಗೆಯಲ್ಲಿ ನಗರಸಭೆಯಿಂದ ಟ್ಯಾಂಕರ್ ಮೂಲಕ ಕೆಲ ವಾರ್ಡ್ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದಕ್ಕೆ ಎಷ್ಟು ಹಣ ಖರ್ಚಾಗಿದೆ ಎಂದು ೨೬ನೇ ವಾರ್ಡ್ ಸದಸ್ಯ ಕೆ.ಗೌಸ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಎಇಇ ಭಾರತಿ, ಕಳೆದ ಎರಡು ತಿಂಗಳಿಂದ ₹೧೪ ಲಕ್ಷ ಖರ್ಚು ಮಾಡಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳಾ ಸದಸ್ಯರು, ಯಾವ ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದ್ದಿರಿ. ನಮ್ಮ ವಾರ್ಡ್ಗಳಲ್ಲಿ ನೀರಿಗಾಗಿ ನಾಗರಿಕರು ನಿತ್ಯ ಪರದಾಡುತ್ತಿದ್ದಾರೆ. ಯಾವ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ್ದಿರಿ ಎಂದು ತರಾಟೆಗೆ ತೆಗೆದುಕೊಂಡು ಯಾರೋ ದಾನಿಗಳು ಉಚಿತವಾಗಿ ನೀರು ಪೂರೈಕೆ ಮಾಡುತ್ತಿದ್ದಾರೆ. ಇದಕ್ಕೆ ವಿರೋಧ ಮಾಡುವುದು ಎಷ್ಷು ಸರಿ. ನಮಗೆ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ನಮ್ಮ ಸಹಮತ ಇದೆ ಎಂದು ತಿಳಿಸಿದರು.

ಪೌರಾಯಕ್ತರು ರಾಜಕೀಯ ಮಾಡುವುದು ಬಿಟ್ಟು ಜನರಿಗೆ ಸಮರ್ಪಕ ಕುಡಿಯುವ ನೀರು ಕ್ರಮ ಕೈಗೊಳ್ಳಬೇಕು. ಕೂಡಲೇ ಸದಸ್ಯರ ಒಮ್ಮತದ ನಿರ್ಣಯಕ್ಕೆ ಠರಾವ್ ಪಾಸ್ ಮಾಡಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಮಾತನಾಡಿದ ಪೌರಾಯುಕ್ತ ಚಂದ್ರಪ್ಪ ಮಾತನಾಡಿ, ಜೂನ್ ೪ ವರೆಗೆ ನೀತಿ ಸಂಹಿತೆ ಜಾರಿ ಇರುವುದರಿಂದ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವುದು ಬರುವುದಿಲ್ಲ. ನೀತಿ ಸಂಹಿತೆ ತೆರವು ಆದ ಬಳಿಕ ಈ ಬಗ್ಗೆ ಜಿಲ್ಲಾಧಿಕಾರಿಗೆ ಸಭೆಯ ನಿರ್ಣಯ ಮಂಡಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ ಪರಿಣಾಮ, ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದೆ. ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದಕ್ಕೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು. ಠರಾವ್ ಪಾಸ್ ಮಾಡಬೇಕು ಇಲ್ಲವಾದಲ್ಲಿ ಪೌರಾಯುಕ್ತರು ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದು ಕುಳಿತರು. ಇದಕ್ಕೆ ಮಣಿದ ಪೌರಾಯುಕ್ತರು, ಠರಾವ್ ಓದಿ ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಕಳಹಿಸುವುದಾಗಿ ತಿಳಿಸಿ, ಸಮಸ್ಯೆಗೆ ಇತಿಶ್ರೀ ಹಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶೇಕ್ಷಾವಲಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಮತ್ತಿತರರು ಇದ್ದರು.

ಬಿಗಿ ಪೊಲೀಸ್ ಬಂದೋಬಸ್ತ್:ಹಾಲಿ, ಮಾಜಿ ಶಾಸಕರ ಜಟಾಪಟಿ ಹಿನ್ನೆಲೆಯಲ್ಲಿ ಇಬ್ಬರ ನಾಯಕರ ಬೆಂಬಲಿಗರು ನಗರಸಭೆ ಮುಂದೆ ಜಮಾವಣೆಗೊಂಡಿದ್ದರು. ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ನೂರಾರು ಸಂಖ್ಯೆಯಲ್ಲಿ ಸೇರಿದ್ದರು.