ಸೊನ್ನ ಬ್ಯಾರೇಜಿಗೆ ನೀರು: ಪೋಲಾಗದಂತೆ ನಿಗಾ ವಹಿಸಿ

| Published : Mar 29 2024, 12:47 AM IST

ಸಾರಾಂಶ

ನಾರಾಯಪುರ ಜಲಾಶಯದಿಂದ ಅಫಜಲ್ಪುರ ತಾಲೂಕಿನ ಸೊನ್ನ ಬ್ಯಾರೇಜಿಗೆ 1 ಟಿಎಂಸಿ ನೀರು ಬಿಡುಗಡೆ ಮಾಡಿದ್ದು, ಸೊನ್ನ ಬ್ಯಾರೇಜ್ ತಲುಪವವರೆಗೆ ಕಾಲುವೆ ಮಧ್ಯೆದಲ್ಲಿ ಎಲ್ಲಿಯೂ ನೀರು ಪೋಲಾಗದಂತೆ ತಾಲೂಕು ಆಡಳಿತ ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯ ಕುಡಿವ ನೀರು ಸಮಸ್ಯೆ ನಿವಾರಣೆಗೆ ನಾರಾಯಪುರ ಜಲಾಶಯದಿಂದ ಅಫಜಲ್ಪುರ ತಾಲೂಕಿನ ಸೊನ್ನ ಬ್ಯಾರೇಜಿಗೆ 1 ಟಿಎಂಸಿ ನೀರು ಬಿಡುಗಡೆ ಮಾಡಿದ್ದು, ಸೊನ್ನ ಬ್ಯಾರೇಜ್ ತಲುಪವವರೆಗೆ ಕಾಲುವೆ ಮಧ್ಯೆದಲ್ಲಿ ಎಲ್ಲಿಯೂ ನೀರು ಪೋಲಾಗದಂತೆ ತಾಲೂಕು ಆಡಳಿತ ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಕೆಸ್ವಾನ್ ಮೂಲಕ ತಹಸೀಲ್ದಾರ್‌, ತಾಪಂ ಇಓ, ನಗರ ಸ್ಥಳೀಯ ಸಂಸ್ಥೆ ಮಖ್ಯಸ್ಥರು ಹಾಗೂ ಇತರೆ ಸಂಬಂಧಿತ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿ ಮಾತನಾಡಿದ ಅವರು, ನಾರಾಯಣಪುರದಿಂದ ಬಿಡುಗಡೆಯಾದ ನೀರು ಸೊನ್ನ ಬ್ಯಾರೇಜ್‌ ತಲುಪಲು ಅಂದಾಜು 10-12 ದಿನಗಳು ಬೇಕಾಗುತ್ತದೆ. ಸೊನ್ನ ಬ್ಯಾರೇಜಿಗೆ ನೀರು ತಲುಪುವವರೆಗೆ ಸಂಬಂಧಪಟ್ಟ ತಹಸೀಲ್ದಾರರು ಇದರ ಮೇಲೆ 24x7 ನಿಗಾ ಇಡಲು ಅಧಿಕಾರಿ-ಸಿಬ್ಬಂದಿ ನಿಯೋಜಿಸಬೇಕು ಎಂದರು.

ಎಲ್ಲಿಯೂ ನೀರು ಪೋಲಾಗದಂತೆ ಮತ್ತು ಅಕ್ರಮವಾಗಿ ಪಂಪ್‌ಸೆಟ್, ಇತರೆ ಮಾರ್ಗದ ಮೂಲಕ ನೀರು ಪಡೆಯದಂತೆ ಎಚ್ಚರ ವಹಿಸಬೇಕು. ಕಟ್ಟುನಿಟ್ಟಿನ ವಿಜಿಲೆನ್ಸ್ ಇಲ್ಲಿ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಒತ್ತಿ ಹೇಳಿದರು.

ಬರಗಾಲ ಹಿನ್ನೆಲೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅಡಿಯಲ್ಲಿ ಕುಡಿವ ನೀರು ಕಾಮಗಾರಿಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಜಿಲ್ಲಾ ಚುನಾವಣಾಧಿಕಾರಿ ಅನುಮತಿ ಪಡೆದು ಮುಂದುವರೆಯಬಹುದು. ಅಧಿಕಾರಿಗಳು ಇದನ್ನರಿತು ಕೆಲಸ ಮಾಡಬೇಕು. ಇದಲ್ಲದೆ ಜೆಜೆಎಂ ಸೇರಿ ಇತರೆ ಕುಡಿವ ನೀರಿನ ಯೋಜನೆ ಸಂಬಂಧಪಟ್ಟಂತೆ ಮಾಹಿತಿ ನೀಡಿದಲ್ಲಿ ಅದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಲಾಗುವುದು. ಜನ-ಜಾನುವಾರುಗಳಿಗೆ ಕುಡಿವ ನೀರು ಪೂರೈಕೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದರು.

ಜಿಲ್ಲೆಯಲ್ಲಿ ತೀವ್ರ ಬರ ಎದುರಾಗಿದೆ. ಕುಡಿವ ನೀರು ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅನುದಾನದ ಯಾವುದೆ ಕೊರತೆಯಿಲ್ಲ. ಈಗಾಗಲೆ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕುಡಿವ ನೀರಿನ ಬಿಲ್ಲು ಪಿಡಿಓ, ಆರ್‌ಐ, ವಿಎ ಅವರ ಸಹಿ ಮತ್ತು ತಾಪಂ ಇಓ ಅವರ ಒಪ್ಪಿಗೆ ಪಡೆದು ಬಿಲ್ಲು ತೀರ್ಣಗೊಳಿಸಬೇಕು ಎಂದು ತಹಸೀಲ್ದಾರರಿಗೆ ಖಡಕ್ ಸೂಚನೆ ನೀಡಿದರು.

ಮುಂದಿನ ದಿನದಲ್ಲಿ ಸಮಸ್ಯಾತ್ಮಕ ಹಳ್ಳಿ, ಬಡವಟಣೆಗಳ ಪಟ್ಟಿ ಈಗಿನಿಂದಲೆ ಸಿದ್ಧತೆ ಮಾಡಿಕೊಂಡು ಟ್ಯಾಂಕರ್, ಬೋರವೆಲ್ ಬಾಡಿಗೆ ಮೇಲೆ ಪಡೆದು ಕುಡಿವ ನೀರು ಪೂರೈಸಬೇಕು ಎಂದರು.

ಯಾದಗಿರಿ-ವಿಜಯಪುರ ಡಿಸಿ ಜೊತೆ ಚರ್ಚೆ: ಇದೇ ಸಂದರ್ಭದಲ್ಲಿ ಬಿ.ಫೌಜಿಯಾ ತರನ್ನುಮ್ ಅವರು ವಿಜಯಪುರ ಡಿಸಿ ಟಿ.ಭೂಬಾಲನ್ ಮತ್ತು ಯಾದಗಿರಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟೆಪ್ಪಗೊಳ ಹಾಗೂ ಎಸ್ಪಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಿ ಯಾದಗಿರಿ ನಾರಾಯಣಪುರದಿಂದ ಬಿಡುಗಡೆಯಾಗುವ ನೀರು ಕೆಂಭಾವಿ-ಯಡ್ರಾಮಿ-ಹೊನ್ನಳ್ಳಿ-ಬಳಗಾನೂರ ಕೆರೆ ಮಾರ್ಗವಾಗಿ ಭೀಮಾ ನದಿಗೆ ಸೇರಿ ಅಲ್ಲಿಂದ ಅಫಜಲ್ಪುರ ತಾಲೂಕಿನ ಸೊನ್ನ ಬ್ಯಾರೇಜಿಗೆ ನೀರು ತಲುಪಲಿದೆ. ಈ ಮಾರ್ಗದಲ್ಲಿ ವಿವಿಧ ತಂಡಗಳನ್ನು ನಿಯೋಜಿಸಿ ನೀರು ಕೃಷಿಗೆ ಬಳಕೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ತಮ್ಮ ಸಹಕಾರ ಅಗತ್ಯವಾಗಿದೆ ಎಂದರು.

ಶುದ್ಧ ಕುಡಿಯುವ ನೀರು ಪೂರೈಸಿ: ಕಲಬುರಗಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ನಗರಕ್ಕೆ ನೀರು ಪೂರೈಕೆ ಮಾಡುವ ಜಲಮೂಲಗಳಲ್ಲಿ ಲಭ್ಯ ನೀರಿನ ಪ್ರಮಾಣ ಕುರಿತು ಮಾಹಿತಿ ಪಡೆದುಕೊಂಡರು. ಕಲಬುರಗಿ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ ಎಂಬ ದೂರು ಸರ್ವೆ ಸಾಮನ್ಯವಾಗಿದ್ದು, ಶುದ್ಧ ಕುಡಿವ ನೀರು ಪೂರೈಸಬೇಕು ಎಂದು ಪಾಲಿಕೆ, ಜಲ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ಇದಲ್ಲದೆ ಆಗಾಗ ಕುಡಿವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ತಪಾಸಣೆ ಮಾಡಬೇಕು ಎಂದರು.

ಉಷ್ಣ ಅಲೆ; ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ

ಮುಂದಿನ 3 ದಿನಗಳಲ್ಲಿ ಅಂದರೆ ಮಾ.30ರ ವರೆಗೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಉಷ್ಣ ಅಲೆ ಮತ್ತು ಗರಿಷ್ಠ ತಾಪಮಾನ ಹೆಚ್ಚಾಗುವ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದ್ದು, ಇಂತಹ ಬಿಸಲಿನ ಪ್ರಖರತೆ ಸಂದರ್ಭದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಮತ್ತು ತಾಲೂಕಾ ಆರೋಗ್ಯಾಧಿಕಾರಿಗಳು ಆರೋಗ್ಯ ಸಲಹೆ ಮಾರ್ಗಸೂಚಿ ಹೊರಡಿಸಬೇಕು ಮತ್ತು ಇದನ್ನು ವ್ಯಾಪಕವಾಗಿ ಪ್ರಚಾರಗೊಳಿಸಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಡಿ.ಎಚ್.ಓ ಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಎಸ್ಪಿ ಅಕ್ಷಯ್ ಹಾಕೈ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಜೆಸ್ಕಾಂ ಎಂಡಿ ರವೀಂದ್ರ, ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್, ಡಿಯುಡಿಸಿ ಯೋಜನಾ ನಿರ್ದೇಶಕ ಮುನಾವರ ದೌಲಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರ್, ತಾಪಂ ಇಓ ಮತ್ತಿತರರು ಭಾಗವಹಿಸಿದ್ದರು.