ಸಾರಾಂಶ
ಬಾದನಹಟ್ಟಿ ಪಂಪನಗೌಡ
ಕುರುಗೋಡು: ತುಂಗಭದ್ರಾ ಜಲಾಶಯದಿಂದ ಮುಖ್ಯ ನಾಲೆಗಳಿಗೆ ಹಾಗೂ ನದಿಗೆ ನೀರು ಹರಿಸಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.ಕೆಳಮಟ್ಟದ ಕಾಲುವೆ ವ್ಯಾಪ್ತಿಯ ರೈತರು ಭತ್ತ, ಹತ್ತಿ, ಮೆಕ್ಕೆಜೋಳ, ಮೆಣಿಸಿನಕಾಯಿ, ಸೂರ್ಯಕಾಂತಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ಕೆಳಮಟ್ಟದ ಕಾಲುವೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಬಹುತೇಕ ರೈತರು ಮುಂಗಾರು ಮತ್ತು ಬೇಸಿಗೆಯಲ್ಲಿ ಭತ್ತ ಬೆಳೆಯುತ್ತಾರೆ. ಅದಕ್ಕೆ ಪೂರಕವಾಗಿ ಗದ್ದೆ ಸ್ವಚ್ಛಗೊಳಿಸಿ, ಕೊಟ್ಟಿಗೆ ಗೊಬ್ಬರ ಬೆರೆಸುವ ಕಾರ್ಯ ಪೂರ್ಣಗೊಳಿಸಿದ್ದಾರೆ. ಇನ್ನು ಕೆಲವು ರೈತರು ತಮಗೂ ಮತ್ತು ಇತರ ರೈತರಿಗೆ ಅನುಕೂಲವಾಗುವ ಬೆಳೆಗಳನ್ನು ಬೆಳೆಯುತ್ತಿದ್ದಾರೆ.ಕುರುಗೋಡು ಹೋಬಳಿಯಲ್ಲಿ 9200 ಹೆಕ್ಟೇರ್ ನೀರಾವರಿ ಪ್ರದೇಶ, ಕೊಳವೆಬಾವಿ ಅವಲಂಬಿತ 500 ಎಕರೆಯಲ್ಲಿ ನಾಟಿ ಕಾರ್ಯ ಮುಗಿದಿದೆ. ಕೋಳೂರು ಹೋಬಳಿ ವ್ಯಾಪ್ತಿಯಲ್ಲಿ 15550 ಹೆಕ್ಟೇರ್, ತೆಕ್ಕಲಕೋಟೆ ಹೋಬಳಿಯಲ್ಲಿ ಕಾಲುವೆ ನೀರು ನಂಬಿ 3500 ಹೆಕ್ಟೇರ್ ಹಾಗೂ ನದಿ ದಂಡೆ ವ್ಯಾಪ್ತಿಯಲ್ಲಿ 8500 ಹೆಕ್ಟೇರ್ ಭತ್ತ ನಾಟಿ ಕಾರ್ಯ ಆರಂಭವಾಗಿದೆ.
ಸಣ್ಣರೈತರಿಗೆ ಸಸಿಗಳ ಕೊರತೆ: ಬೇಸಿಗೆ ಬೆಳೆ ಬೆಳೆಯದೇ ಸುಮ್ಮನಿದ್ದ ರೈತರು ಈ ಬಾರಿ ನೀರಾವರಿ ಪ್ರದೇಶಗಳಲ್ಲಿ ಭತ್ತ ನಾಟಿ ಕಾರ್ಯಕ್ಕೆ ಮುಂದಾಗಿದ್ದಾರೆ. ಸಸಿಗಳು ಕೂಡ ಸರಿಯಾಗಿ ರೈತರಿಗೆ ಸಿಗುತ್ತಿಲ್ಲ. ಕಾಲುವೆ ಭಾಗದ ಕೆಲ ರೈತರು ನದಿಗೆ ನೀರು ಬರುವ ಮುಂಚೆ ಬೋರ್‌ವೆಲ್ ಭಾಗದಲ್ಲಿ ಸಸಿ ಮಾಡಿ ಹಾಕಿದ್ದಾರೆ. ಇನ್ನು ಕೆಲ ರೈತರು ನದಿಗೆ ನೀರು ಬಂದ ಮೇಲೆ ಬೇರೆ ಕಡೆಯಿಂದ ತಂದು ಭತ್ತ ನಾಟಿ ಮಾಡಿದರೆ ಆಯ್ತು ಎಂಬ ಆಶಾಭಾವನೆಯಲ್ಲಿದ್ದಾರೆ.ಕೂಲಿ ಕಾರ್ಮಿಕರಿಗೆ ಡಿಮ್ಯಾಂಡ್: ಒಂದೆಡೆ ನದಿಗೆ ನೀರು ಹರಿದು ಬರುತ್ತಿರುವ ಹರ್ಷದಲ್ಲಿ ರೈತರು ಗದ್ದೆಗಳನ್ನು ಹಸನಗೊಳಿಸಿ ಭತ್ತ ನಾಟಿಗೆ ಸಿದ್ಧತೆ ಮಾಡಿದ್ದಾರೆ. ಇತ್ತ ನಾಟಿ ಮಾಡಲು ಕೂಲಿಕಾರರು ಸಿಗದೇ ರೈತರು ಪರದಾಡುತ್ತಿದ್ದಾರೆ. ಬೇರೆ ಗ್ರಾಮದ ಕಾರ್ಮಿಕರನ್ನು ಕರೆದುಕೊಂಡು ಬಂದು ಭತ್ತ ನಾಟಿ ಮಾಡಬೇಕಾಗಿದೆ. ಪ್ರತಿ ಎಕರೆಗೆ ಸಸಿಗೆ ₹೩೦೦೦ ಕೊಟ್ಟು ಜೊತೆಗೆ ಆಟೋ ಅಥವಾ ಟ್ರ್ಯಾಕ್ಟರ್ ಬಾಡಿಗೆ ನೀಡಿ ಕಾರ್ಮಿಕರನ್ನು ಕರೆತರಬೇಕಾದ ಅನಿವಾರ್ಯತೆ ರೈತರಿಗೆ ಎದುರಾಗಿದೆ.
ಕೂಲಿಕಾರರ ನಡುವೆಯೇ ಕೂಲಿಯಲ್ಲಿ ಪೈಪೋಟಿ ಇದೆ. ಈ ಹಿಂದೆ ಒಬ್ಬ ಕೂಲಿಯಾಳಿಗೆ ಮಧ್ಯಾಹ್ನಕ್ಕೆ ₹೨೫೦ ಇದ್ದ ಕೂಲಿ ಪ್ರಸಕ್ತ ವರ್ಷ ₹೩೦೦ಗೆ ಏರಿಕೆಯಾಗಿದೆ.ಜಲಾಶಯದಿಂದ ಕಾಲುವೆಗೆ ನೀರು ಬಂದಿರುವುದರಿಂದ ಈಗಾಗಲೇ ನೀರಾವರಿ ತಗ್ಗು ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಜೋರಾಗಿದೆ. ಇನ್ನು ೧೫ ದಿನದ ಒಳಗೆ ನಾಟಿ ಕಾರ್ಯ ಮುಗಿಯಬಹುದು ಎನ್ನುತ್ತಾರೆ ಕುರುಗೋಡು ಹಿರಿಯ ಕೃಷಿ ಅಧಿಕಾರಿ ಎಂ.ದೇವರಾಜ.
ಭತ್ತ ನಾಟಿಗೆ ಕೂಲಿ ಕಾರ್ಮಿಕರ ಸಮಸ್ಯೆ ಇದೆ. ಬರಗಾಲ ಇರುವುದರಿಂದ ಗುಳೆ ಹೋದ ಕೆಲವರು ಇನ್ನು ಊರಿಗೆ ವಾಪಸಾಗಿಲ್ಲ. ಬೇರೆ ಗ್ರಾಮದ ಕಾರ್ಮಿಕರಿಗೆ ದುಪ್ಪಟ್ಟು ಹಣ ನೀಡಿ ಭತ್ತ ನಾಟಿ ಮಾಡಿಸಬೇಕಾಗಿದೆ. ಸದ್ಯ ಎಕರೆಗೆ ಭತ್ತ ನಾಟಿ ಮಾಡಲು ₹೩೭೦೦ ನೀಡುತ್ತಿದ್ದೇವೆ ಎನ್ನುತ್ತಾರೆ ಬಾದನಹಟ್ಟಿ ರೈತ ದೇವರಾಜಗೌಡ.