ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭವಾರ್ತೆ ಚಿತ್ರದುರ್ಗಭದ್ರಾ ಜಲಾಶಯದಿಂದ ನೀರು ಲಿಫ್ಟ್ ಮಾಡಿ ವಿವಿ ಸಾಗರ ಜಲಾಶಯ ಕೋಡಿ ಬೀಳುವ ಕನಸು ಕಂಡಿದ್ದವರಿಗೆ ಕೆಲ ಸಾಂದರ್ಭಿಕ ವೈಪರಿತ್ಯಗಳು ತಡೆ ನೀಡಿವೆ. ನೀರು ಹರಿವಿನ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ಕಾಟನಗೆರೆ-ಅಬ್ಬಿನಹೊಳಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದ ಕಾರಣಕ್ಕೆ ತಾತ್ಕಾಲಿಕವಾಗಿ ನೀರು ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಶನಿವಾರದಿಂದ ವಿವಿ ಸಾಗರಕ್ಕೆ ಒಳ ಹರಿವು ಸ್ಥಗಿತಗೊಳ್ಳಲಿದೆ.ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣದ ಕಾಮಗಾರಿ ಪೂರ್ಣಗೊಳ್ಳದ ಕಾರಣ ಬೆಟ್ಟದಾವರೆಕೆರೆ ಬಳಿ ಲಿಫ್ಟ್ ಮಾಡಿದ ನೀರನ್ನು ಅಜ್ಜಂಪುರ ತಾಲೂಕಿನ ಹೆಬ್ಬೂರು ಗ್ರಾಮದ ವ್ಯಾಪ್ತಿಯ ವೈ. ಜಂಕ್ಷನ್ ಹತ್ತಿರವಿರುವ ಹಳ್ಳದ ಮೂಲಕ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುತ್ತಿದೆ. ಹಳ್ಳದಲ್ಲಿ ಸತತವಾಗಿ ನೀರು ಹರಿಯುವ ಕಾರಣ ಮಣ್ಣು ಸವಕಳಿಯಾಗಿ ದಂಡೆ ವಿಸ್ತಾರವಾಗುತ್ತಿದೆ. ಹಳೆ ಕಾಲದ ಸೇತುವೆ ಶಿಥಿಲಗೊಂಡು ಕುಸಿದಿದೆ. ಜನ ಓಡಾಡಲು ತಾತ್ಕಾಲಿಕ ವ್ಯವಸ್ಥೆ ಮಾಡಿದ ನಂತರವೇ ಭದ್ರೆ ಲಿಫ್ಟ್ ಮಾಡಬೇಕಿದೆ. ಇದಕ್ಕಾಗಿ ಕನಿಷ್ಟ 20 ದಿನಗಳ ಕಾಲಾವಕಾಶ ಬೇಕಿದೆ.ಈ ಮೊದಲು ಕಳೆದ ಆಗಸ್ಟ್ ನಾಲ್ಕರಿಂದ ಭದ್ರಾ ನೀರನ್ನು ಲಿಪ್ಟ್ ಮಾಡಿ, ಮೂರು ತಿಂಗಳ ಕಾಲ ವಿವಿ ಸಾಗರ ಜಲಾಶಯಕ್ಕೆ ಪ್ರತಿ ನಿತ್ಯ 700 ಕ್ಯೂಸೆಕ್ಸ್ ಹರಿಸಲು ಜಲ ಸಂಪನ್ಮೂಲ ಇಲಾಖೆ ಆದೇಶಿಸಿತ್ತು. ಮತ್ತೆ ಮುಂದುವರೆದು ಕಳೆದ ಎರಡು ದಿನಗಳ ಹಿಂದೆಯಷ್ಟೇ ಮತ್ತೊಂದು ಆದೇಶ ಹೊರಡಿಸಿ ಪ್ರತಿ ನಿತ್ಯ 700 ಕ್ಯೂಸೆಕ್ಸ್ ನಂತರ ಜನವರಿ 25 ರವರೆಗೆ ಭದ್ರಾ ಜಲಾಶಯದಿಂದ ನೀರು ಲಿಫ್ಟ್ ಮಾಡುವಂತೆ ಆದೇಶಿಸಲಾಗಿತ್ತು. ಆದೇಶ ಹೊರ ಬಿದ್ದ ಎರಡು ದಿನಗಳ ನಂತರ ಸೇತುವೆ ಕುಸಿತದ ಕಾರಣಕ್ಕೆ ಮತ್ತೆ ನಿಲ್ಲಿಸಲಾಗಿದೆ. ವಿವಿ ಸಾಗರ ಜಲಾಶಯ ಕೋಡಿ ಬೀಳಲು ಕೇವಲ ಒಂದು ಅಡಿಯಷ್ಟು ಮಾತ್ರ ಬಾಕಿ ಇತ್ತು.
ಭದ್ರೆ ಲಿಪ್ಟ್ ನಿಂದಾಗಿ ಹಳ್ಳದಲ್ಲಿ ಸತತವಾಗಿ ನೀರು ಹರಿದು ಕಾಟಿನಗೆರೆಯಿಂದ ಅಬ್ಬಿನಹೊಳಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬರುವ ಬ್ರಿಡ್ಜ್ ಕುಸಿದಿದೆ.ಕಾಟಿಗನೇರಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ಆರೋಗ್ಯ ಕೇಂದ್ರ ಇದೆ. ಸೊಲ್ಲಾಪುರ ತಮ್ಮಟದಹಳ್ಳಿಗೇಟ್ ಗ್ರಾಮಗಳ ಸುಮಾರು 5 ರಿಂದ 6 ಶಾಲಾವಾಹನಗಳು ಶಾಲಾ ಮಕ್ಕಳನ್ನು ಕರೆತರಲು ಇದೇ ಮಾರ್ಗ ಅವಲಂಬಿತರಾಗಿದ್ದರು.ಅಬ್ಬಿನಹೊಳಲು, ಮೆಣಸಿನಕಾಯಿ ಹೊಸಳ್ಳಿ, ಜಾವೂರು ಇನ್ನಿತರೇ ಗ್ರಾಮಗಳ ಜನಗಳು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಗೆ ಕಾಟಿಗನೇರಿ ಗ್ರಾಮವನ್ನೇ ಅವಲಂಬಿಸಿದ್ದಾರೆ. ಕುಸಿದಿರುವ ಸೇತುವೆ ಕಾಟಿಗನೇರಿ-ಅಬ್ಬಿನಹೊಳಲು-ಮೆಣಸಿಕಾಯಿಹೊಸಳ್ಳಿ-ಜಾವೂರು ಗ್ರಾಮಕ್ಕೆ ಸಂಪರ್ಕಿಸುವ ಏಕೈಕ ಮಾರ್ಗವಾಗಿದೆ. ಬೇರೆ ಯಾವುದೇ ಪರ್ಯಾಯ ಹಾದಿಗಳಿಲ್ಲ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಅನಾನುಕೂಲ ಉಂಟಾಗಿದೆ.
ತರಿಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಶುಕ್ರವಾರ ಶಿಥಿಲಗೊಂಡ ಸೇತುವೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು, ನೀರು ಲಿಫ್ಟ್ ಮಾಡಿ ಹರಿಸುವುದರಿಂದ ರೈತರ ಜಮೀನುಗಳು ಕೊಚ್ಚಿಕೊಂಡು ಹೋಗಿವೆ. ಪರಿಹಾರ ನೀಡಿಲ್ಲ. ಸಾಲದೆಂಬಂತೆ ಈಗ ಸೇತುವೆ ಕುಸಿದಿದೆ. ಮಕ್ಕಳು ಶಾಲೆಗೆ ಹೇಗೆ ಹೋಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.ಕೋಟ್ ವಿವಿ ಸಾಗರ ಜಲಾಶಯ ಭರ್ತಿಯಾಗಿದೆ. ಸದ್ಯಕ್ಕೆ ನೀರು ಲಿಫ್ಟ್ ಮಾಡಬೇಡಿ. ರೈತರ ಜಮೀನುಗಳಿಗೆ ಹಾನಿಯಾಗುತ್ತದೆ ಎಂದು ಜಲ ಸಂಪನ್ಮೂಲ ಇಲಾಖೆಗೆ ಕೋರಿ ಕೊಂಡಿದ್ದೆವು. ಈಗ ಸೇತುವೆ ಮುರಿದು ಬಿದ್ದಿದೆ. ರೈತರು, ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿದೆ. ವಿವಿ ಸಾಗರ ಜಲಾಶಯ ಭರ್ತಿಯಾಗಲು ಒಂದು ಅಡಿ ಬಾಕಿ ಇದೆ. ಹೇಗೋ ಮುಂದೆ ಮಳೆ ಬಂದು ಭರ್ತಿಯಾಗುತ್ತಿತ್ತು. ಈಗಲೇ ಕೋಡಿ ಬೀಳಿಸಬೇಕೆಂಬ ಹಠ ಯಾಕೆ. ನಮ್ ಭಾಗದ ರೈತರಿಗೆ ಆಗಿರುವ ಸಮಸ್ಯೆಗೆ ಯಾರು ಹೊಣೆ. ಸಚಿವ ಡಿ.ಸುಧಾಕರ್ ಅರ್ಥ ಮಾಡಿಕೊಳ್ಳಬೇಕು.ಜಿ.ಎಚ್. ಶ್ರೀನಿವಾಸ್, ಶಾಸಕ, ತರಿಕೆರೆ.
ಕಾಟಿಗನೇರಿಯಿಂದ ಅಬ್ಬಿನಹೊಳಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಹಾಗೂ ಸಂಪರ್ಕ ಕಡಿತಗೊಂಡಿರುವ ಗ್ರಾಮಸ್ಥರಿಗೆ ಹಾಗೂ ಶಾಲಾಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಲೇ ಬೇಕಿದೆ. ಪರ್ಯಾಯ ಮಾರ್ಗ ನಿರ್ಮಾಣದ ಕಾಮಗಾರಿಗೆ ₹36.50 ಲಕ್ಷ ಅಂದಾಜು ಪಟ್ಟಿ ತಯಾರಿಸಿ, ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಎಫ್ ಎಚ್. ಲಮಾಣಿ, ಮುಖ್ಯ ಇಂಜಿನಿಯರ್, ಭದ್ರಾ ಮೇಲ್ದಂಡೆ-------