ನೀರಿನ ಸಮಸ್ಯೆ: ಕಾರ್ಕಳ, ಹೆಬ್ರಿ ತಾಲೂಕಲ್ಲಿ ಕೃಷಿಗೆ ಸಂಕಷ್ಟ

| Published : Feb 21 2024, 02:00 AM IST / Updated: Feb 21 2024, 02:01 AM IST

ಸಾರಾಂಶ

ಈ ವರ್ಷ ರಾಜ್ಯ ಸರ್ಕಾರ ಹೆಬ್ರಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿದೆ. ಈ ಭಾಗದಲ್ಲಿ ಒಟ್ಟು ಶೇ.22ರಷ್ಟು ಮಳೆ ಕೊರತೆ ಕಂಡಿದೆ. ಇದರಿಂದ ಭತ್ತದ ಕೃಷಿಕರಿಗೆ ಸಮಸ್ಯೆಯಾಗಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ, ಹೆಬ್ರಿ ತಾಲೂಕುಗಳಲ್ಲಿ ಕೃಷಿಗೆ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಕೆಲವೆಡೆಗಳಲ್ಲಿ ನೀರಿಲ್ಲದೆ ಭತ್ತದ ಗದ್ದೆಗಳು ಒಣಗುತ್ತಿವೆ. ಇದರಿಂದಾಗಿ ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ. ನೀರಿನ ಮೂಲವಾಗಿರುವ ತೋಡು, ಹಳ್ಳ, ನದಿಗಳಲ್ಲಿ ನೀರಿನ ಲಭ್ಯತೆ ಕಮ್ಮಿಯಾಗುತ್ತದೆ.ಹವಾಮಾನ ವೈಪರೀತ್ಯ: ಮಲೆನಾಡ ತಪ್ಪಲಿನ‌ ಭಾಗಗಳಾದ ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳಲ್ಲಿ ನಿತ್ಯ ಬಿಸಿಲ ಬೇಗೆ ಏರುತ್ತಿದ್ದು, ನೀರಿನ‌ ಮೂಲಗಳ ಒಣಗುವಿಕೆಗೆ ಕಾರಣವಾಗುತ್ತಿದೆ.ಈ ಭಾಗದಲ್ಲಿ 4534 ಮಿ.ಮಿ. ವಾಡಿಕೆಯ ಮಳೆಯಾಗುತಿತ್ತು, ಆದರೆ ಕಳೆದ ವರ್ಷದ ಮಳೆಯ ಋತುವಿನಲ್ಲಿ ಕೇವಲ 3524 ಮಿ.ಮೀ. ಮಾತ್ರ ಮಳೆಯಾಗಿದೆ. ಒಟ್ಟು ಶೇ.22ರಷ್ಟು ಮಳೆ ಕೊರತೆ ಕಂಡಿದೆ. ಪ್ರಮುಖವಾಗಿ ಜೂನ್, ಆಗಸ್ಟ್, ಅಕ್ಟೋಬರ್ ನಲ್ಲಿ ಅತ್ಯಂತ ಕಡಿಮೆ ಮಳೆಯಾಗಿರುವುದು ನೀರಿನ ಕುಸಿತಕ್ಕೆ ಕಾರಣವಾಗಿದೆ.

ಬರಪೀಡಿತ ತಾಲೂಕಾಗಿ ಹೆಬ್ರಿ: ಈ ವರ್ಷ ರಾಜ್ಯ ಸರ್ಕಾರ ಹೆಬ್ರಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿದೆ. ಮಲೆನಾಡಿನ ಜೊತೆ ಹಂಚಿಕೊಂಡಿರುವ ತಪ್ಪಲಿನ ಕಬ್ಬಿನಾಲೆ, ನಾಡ್ಪಾಲು ಕೆಲವು ಭಾಗಗಳಲ್ಲಿ ಕಳೆದ ವರ್ಷ ಬೋರ್‌ವೆಲ್‌ಗಳನ್ನು ಸುಮಾರು 600 ಅಡಿ ಆಳದವರೆಗೆ ಕೊರೆಸಿದರೂ ನೀರಿನ ಲಭ್ಯತೆ ಕಮ್ಮಿಯಾಗಿತ್ತು. ಹೆಬ್ರಿ ತಾಲೂಕಿನ ಜೀವನದಿಯಾದ ಸೀತಾನದಿಯಲ್ಲಿ ನೀರಿನ ಮಟ್ಟ ಕುಸಿತವಾಗಿದೆ.ಕಬ್ಬಿನಾಲೆ, ಜರುವತ್ತು ನದಿಗಳಲ್ಲಿ ನೀರಿನ ಹರಿವು ನಿಂತಿದ್ದು, ಭತ್ತದ ಕೃಷಿಕರಿಗೆ ಸಮಸ್ಯೆಯಾಗಿದೆ. ಕಾರ್ಕಳ ತಾಲೂಕಿನ ಸ್ವರ್ಣನದಿಯಲ್ಲಿ ಈಗಾಗಲೇ 6 ಕಡೆಗಳಲ್ಲಿ ಅಣೆಕಟ್ಟುಗಳಿಗೆ ಗೇಟ್‌ಗಳನ್ನು ಅಳವಡಿಸಿದ್ದು, ನೀರನ್ನು ಹಿಡಿದಿಟ್ಟುಕೊಂಡು ಕೃಷಿಗೆ ಹಾಗೂ ಕುಡಿಯಲು ಅಗತ್ಯಕ್ಕೆ ತಕ್ಕಂತೆ ಬಿಡುಗಡೆ ಮಾಡಲಾಗುತ್ತಿದೆ.

ಕೃಷಿಯಲ್ಲಿ ಕುಸಿತ: ಕಳೆದ ಮುಂಗಾರಿನಲ್ಲಿ 36000 ಹೆಕ್ಟರ್ ಬಿತ್ತನೆ ಮಾಡುವ ಬಗ್ಗೆ ನಿರೀಕ್ಷಿಸಲಾಗಿತ್ತಾದರೂ ಬಿತ್ತನೆ ಮಾಡಿದ್ದು ಕೇವಲ 30 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾತ್ರ.ಬಾವಿಗಳೇ ಆಧಾರ: ರೈತರು ನೀರಿನ ಪ್ರಮುಖ ಮೂಲಗಳಾದ ತೋಡು, ನದಿ, ಹಳ್ಳಗಳಲ್ಲಿ ನೀರು ಕ್ರಮೇಣವಾಗಿ ಕಡಿಮೆಯಾಗುತ್ತಿರುವುದರಿಂದ ಬಾವಿಗಳಿಂದ ಪಂಪ್‌ಸೆಟ್‌ ಬಳಸಿ ಗದ್ದೆಗೆ ನೀರು ಹಾಯಿಸಲಾಗುತ್ತಿದೆ. ಆದರೆ ಲೋಡ್ ಶೆಡ್ಡಿಂಗ್ ಶುರುವಾದರೆ ಕೃಷಿಕರ ಬವಣೆ ಹೇಳತೀರದು.ಭತ್ತಕ್ಕೆ ನೀರೆ ಮೂಲಾಧಾರ: ಭತ್ತ ಕೃಷಿಗೆ ಪೈರು ಕಟ್ಟುವ ವೇಳೆ ನೀರಿನ ಕೊರತೆ ಉಂಟಾದರೆ ಶೇ.25 ರೈತರಿಗೆ ಫಸಲು ದೊರಕುವುದಿಲ್ಲ. ಇಲ್ಲದಿದ್ದರೆ ಜಂಗು ತುಂಬಿಕೊಂಡು ಪೈರು ಹಾಳಾಗುತ್ತದೆ. ಹಾಲು ಕಟ್ಟಿದ ಮೇಲೆ ಸುಮಾರು 25 ದಿನ ಕನಿಷ್ಠ ನೀರಿನ ಲಭ್ಯತೆ ಇರಬೇಕು. ಇಲ್ಲದಿದ್ದಲ್ಲಿ ಫಸಲು ಕಡಿತವಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

------

ಕಳೆದ ಬಾರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಿಲಿಮೀಟರ್ ಮಳೆಯ ಕೊರತೆ ಕಂಡಿದೆ. ನೀರಿನ ಸಮಗ್ರ ನಿರ್ವಹಣೆ ಮುಖ್ಯವಾಗಿದೆ. ಭತ್ತ ಕೃಷಿಗೆ ಹಾಲು ಕಟ್ಟುವ ಹಂತದಲ್ಲಿ ನೀರಿನ ಕೊರತೆ ಉಂಟಾದಲ್ಲಿ ಶೇ.75ರಷ್ಟು ಫಸಲಿನ ಕೊರತೆ ಕಾಣುತ್ತದೆ.ಡಾ. ಧನಂಜಯ ಬಿ., ಹಿರಿಯ ವಿಜ್ಞಾನಿ, ಬ್ರಹ್ಮಾವರ, ಕೃಷಿ ವಿಜ್ಞಾನ ಕೇಂದ್ರ--------------

ಜಿಲ್ಲೆಯಲ್ಲಿ ಶೇ.22ರಷ್ಟು ವಾಡಿಕೆಗಿಂತ ಮಳೆ ಕಡಿಮೆ ಇದೆ. ಜೂನ್, ಅಗಸ್ಟ್ ಹಾಗೂ ಅಕ್ಟೋಬರ್‌ಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಳೆಯಾಗಿರುವುದು ನೀರಿನ ಕೊರತೆಗೆ ಕಾರಣವಾಗಿದೆ. ಮಳೆ ಇಲ್ಲದೆ ಬಹುತೇಕ ರೈತರು ಹಿಂಗಾರು ಬೆಳೆ ಬೆಳೆಯಲು ಹಿಂಡೇಟು ಹಾಕಿದ್ದಾರೆ. ಶೇ.22 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿಲ್ಲ.ಸತೀಶ್, ಸಹಾಯಕ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ