ಬೆಂ. ವಿವಿ ವಿದ್ಯಾರ್ಥಿನಿಯರ ನಿಲಯದಲ್ಲಿ ನೀರಿನ ಸಮಸ್ಯೆ

| Published : May 12 2024, 01:19 AM IST

ಬೆಂ. ವಿವಿ ವಿದ್ಯಾರ್ಥಿನಿಯರ ನಿಲಯದಲ್ಲಿ ನೀರಿನ ಸಮಸ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ನಿಲಯದಲ್ಲಿ ಪದೇ ಪದೇ ನೀರಿನ ಸಮಸ್ಯೆಯಿಂದ ಬೇಸರಗೊಂಡ ವಿದ್ಯಾರ್ಥಿನಿಯರು ಶನಿವಾರ ಬೆಳಗ್ಗೆ ವಿವಿಯ ಮುಖ್ಯರಸ್ತೆಯನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ನಿಲಯದಲ್ಲಿ ಪದೇ ಪದೇ ನೀರಿನ ಸಮಸ್ಯೆಯಿಂದ ಬೇಸರಗೊಂಡ ವಿದ್ಯಾರ್ಥಿನಿಯರು ಶನಿವಾರ ಬೆಳಗ್ಗೆ ವಿವಿಯ ಮುಖ್ಯರಸ್ತೆಯನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದರು .ಖಾಲಿ ಬಕೆಟ್‌ಗಳನ್ನು ಹಿಡಿದುಕೊಂಡು ರಸ್ತೆ ಮಧ್ಯದಲ್ಲಿ ಕುಳಿತ ವಿದ್ಯಾರ್ಥಿನಿಯರು, ನೀರು ಪೂರೈಕೆ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ವಿವಿ ಅಧಿಕಾರಿಗಳ ನಿರ್ಲಕ್ಷ್ಯತನ ಖಂಡಿಸಿ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಕೆಲವು ತಿಂಗಳುಗಳಿಂದ ಎಸ್ಸಿ, ಎಸ್ಟಿ ವಿದ್ಯಾರ್ಥಿನಿಯರ ಹಾಸ್ಟೇಲ್‌ನಲ್ಲಿ ಪದೇ ಪದೇ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಬಿಸಿ ನೀರು ಕೂಡ ಸರಿಯಾಗಿ ಬರುವುದಿಲ್ಲ. ಇನ್ನು ಹಾಸ್ಟೇಲ್‌ನ ಊಟದ ಗುಣಮಟ್ಟವು ಕುಸಿತವಾಗಿದೆ. ಮೇಲ್ವಿಚಾರಕರು ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸುವುದಿಲ್ಲ. ಹೀಗಾಗಿ, ಹಾಸ್ಟೇಲ್‌ನಲ್ಲಿ ಅವ್ಯವಸ್ಥೆ ಉಂಟಾಗಿದೆ. ಇದು ವ್ಯಾಸಂಗದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂದು ವಿದ್ಯಾರ್ಥಿನಿಯರು ದೂರಿದರು.

ತಮ್ಮ ಸಮಸ್ಯೆಗಳನ್ನು ವಿವಿಯ ಕುಲಪತಿಗಳು ಬಂದು ಕೇಳಿ, ಪರಿಹರಿಸುವ ಭರವಸೆ ನೀಡುವವರೆಗೆ ರಸ್ತೆಯಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಸ್ಥಳಕ್ಕೆ ಆಗಮಿಸಿದ ವಿವಿ ಅಧಿಕಾರಿಗಳು, ಪೊಲೀಸರು ಟ್ಯಾಂಕರ್ ಮೂಲಕ ನೀರು ಪೂರೈಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ ಬಳಿಕ ವಿದ್ಯಾರ್ಥಿನಿಯರ ಪ್ರತಿಭಟನೆ ಕೈಬಿಟ್ಟರು.

ವಿಶ್ವವಿದ್ಯಾಲಯದಲ್ಲಿ ನೀರಿನ ಅಭಾವದಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅದರ ಜೊತೆಗೆ ಶುಕ್ರವಾರ ರಾತ್ರಿ ಭಾರಿ ಮಳೆ ಹಿನ್ನೆಲೆ ವಿದ್ಯುತ್ ಸಂಪರ್ಕ ಇಲ್ಲದೇ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತ್ತು ಎಂದು ತಿಳಿದು ಬಂದಿದೆ.

‘ನೀರಿನ ಅಭಾವದ ಹಿನ್ನೆಲೆಯಲ್ಲಿ ಈ ಸಮಸ್ಯೆಯಾಗಿತ್ತು. ಟ್ಯಾಂಕರ್ ಮೂಲಕ ಹಾಸ್ಟೇಲ್‌ಗೆ ನೀರು ಪೂರೈಸಲಾಗಿದೆ. ಬೋರ್‌ವೆಲ್ ವ್ಯವಸ್ಥೆ ಮಾಡಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗುವುದು’ ಎಂದು ವಿಶ್ವವಿದ್ಯಾಲಯ ಕುಲಪತಿ ಡಾ. ಜಯಕರ. ಎಸ್. ಎಂ ತಿಳಿಸಿದ್ದಾರೆ.