ಸಾರಾಂಶ
ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿರಬಕವಿ - ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದ 5ನೇ ವಾರ್ಡ್ ಮಹಿಳೆಯರಿಗೆ ಬಿಸಿಲಲ್ಲಿ ನೀರು ತರುವುದೆಂದರೆ ಅಕ್ಷರಶಃ ನರಕಯಾತನೆ. ಜೀವಜಲಕ್ಕಾಗಿ ನಿತ್ಯ ೬ - ೭ ಕಿಮೀ ಕ್ರಮಿಸಿ ಖಾಸಗಿಯವರ ಕೊಳವೆಬಾವಿಯಲ್ಲಿನ ನೀರು ತರುವ ಸಂಕಷ್ಟ ಇಲ್ಲಿನ ಜನರಿಗೆ ಎದುರಾಗಿದೆ.
ಪ್ರಸಕ್ತ ವರ್ಷ ಬೇಸಿಗೆ ಪ್ರಾರಂಭದ ಮುನ್ನವೇ ಈ ವಾರ್ಡ್‌ನಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಿದೆ. ಚುನಾವಣೆ ವೇಳೆ ಅಂಗೈಯಲ್ಲಿ ಸ್ವರ್ಗವನ್ನೇ ತೋರುವ ರಾಜಕಾರಣಿಗಳು ಬಿರು ಬೇಸಿಗೆಯಲ್ಲಿ ಯಲ್ಲಟ್ಟಿ ಗ್ರಾಪಂ ವ್ಯಾಪ್ತಿಯ ಸೀಮಿ ಲಕ್ಕವ್ವ ದೇಗುಲದ ವಸತಿ ಪ್ರದೇಶದ ನಿವಾಸಿಗಳಿಗೆ ಬದುಕಲು ಅತ್ಯವಶ್ಯವಾಗಿರುವ ನೀರು ಪೂರೈಕೆಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಇಲ್ಲಿನ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.ಕಳೆದ ಐದಾರು ವರ್ಷಗಳಿಂದ ನೀರಿಗಾಗಿ ಜನರು ಹಪಹಪಿಸುತ್ತಿದ್ದರೂ ಯಾರೂ ನಮಗೆ ಸ್ಪಂದಿಸುತ್ತಿಲ್ಲ ಎಂದು ಮಹಿಳೆಯರು ಅಲವತ್ತುಕೊಂಡರು. ಗ್ರಾಪಂ ಕಚೇರಿಗೆ ಹಲವು ಬಾರಿ ತೆರಳಿ ಮನವಿ ಸಲ್ಲಿಸಿದ್ದರೂ ಜನಪ್ರತಿನಿಧಿಗಳು ಚುನಾವಣೆ ಹತ್ತಿರವಿದ್ದರಿಂದ ಮೂರು ತಿಂಗಳಲ್ಲಿ ಸರಿ ಪಡಿಸುತ್ತೇವೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ನೀರಿಲ್ಲದೇ ನಿತ್ಯದ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಆದ್ದರಿಂದ ದೂರದ ರೈತರ ಹೊಲಕ್ಕೆ ತೆರಳಿ ನೀರು ತರುವಲ್ಲಿ ನಮಗೆ ಜೀವನವೇ ಸಾಕು ಎನ್ನಿಸುತ್ತದೆ ಎಂದು ಇಲ್ಲಿನ ಮಹಿಳೆಯರು ನೀರಿನ ಬವಣೆಯನ್ನು ಬಿಚ್ಚಿಟ್ಟರು.
ನೆತ್ತಿ ಸುಡುವ ಬಿರು ಬಿಸಿಲ ನಡುವೆ ಮಕ್ಕಳನ್ನು ಕಟ್ಟಿಕೊಂಡು ನೀರಿಗಾಗಿ ಅಲೆಯುವ ಇಲ್ಲಿನ ನೀರೆಯರ ಪರದಾಟ ಭಗವಂತನಿಗೇ ಪ್ರೀತಿ ಎಂಬಂತಾಗಿದೆ. ಮೂರು ದಶಕಗಳಿಂದ ಈ ಪ್ರದೇಶದಲ್ಲಿ ವಾಸವಿರುವ ನಮಗೆ, ನಮ್ಮ ಜಾನುವಾರುಗಳಿಗೆ ನೀರು ಪೂರೈಸದ ಸರ್ಕಾರ ನಮ್ಮನ್ನು ಕೇವಲ ಮತಯಂತ್ರಗಳಂತೆ ನೋಡುತ್ತ, ನಮ್ಮ ನಿತ್ಯದ ಗೋಳಿಗೆ ಸ್ಪಂದಿಸುತ್ತಲ್ಲ ಎಂದು ಬಾಗವ್ವ ಮಂಟೂರ, ವೆಂಕವ್ವ ಮಹಿಷವಾಡಗಿ, ಬೌರವ್ವ ಹುಂಚಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.ನೀರು ಬರದಿರಲು ವಾಸ್ತವ ಕಾರಣವೇನು?: ಗ್ರಾಪಂ ಒಡೆತನದಲ್ಲಿ ಬೋರ್‌ವೆಲ್ ಕೊರೆಸಲಾಗಿತ್ತು. ಅದಕ್ಕೆ ಮೋಟಾರು ಮತ್ತು ಪೈಪ್‌ಲೈನ್ ಅಳವಡಿಸಿ ವಸತಿ ಪ್ರದೇಶದ ಜನರಿಗೆ ನೀರು ಪೂರೈಸಲಾಗುತ್ತಿತ್ತು. ಬೋರ್‌ವೆಲ್ ದುರಸ್ತಿಗೆ ಬಂದಾಗ ಯಾರೋ ಕಿಡಿಗೇಡಿಗಳು ಬೋರ್‌ವೆಲ್ ಕಡಿದು ಹಾಕಿದರು. ಅಲ್ಲದೆ, ಮೋಟಾರ್, ಇತರೆ ಪರಿಕರಗಳನ್ನು ಬಾವಿಗೆ ನೂಕಿದರು. ಇದರಿಂದ ಅದನ್ನು ಮೇಲೆತ್ತುವುದೇ ಸವಾಲಾಗಿದೆ. ಇದರಿಂದ ನೀರು ಸೌಲಭ್ಯ ಕಲ್ಪಿಸುವುದು ಸವಾಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಮಹಾದೇವ ಮೋಪಗಾರ ವಾಸ್ತವ ತೆರೆದಿಟ್ಟರು.ಸದ್ಯ ಈ ಪ್ರದೇಶದ ಸಮೀಪದಲ್ಲಿ ನೀರಿರುವ ಸ್ಥಳವಿಲ್ಲ. ಗ್ರಾಪಂಗೆ ಯಾವುದೇ ಅನುದಾನವಿಲ್ಲ. ಇದರಿಂದ ಮತ್ತು ಶಾಸಕರ ನಿಧಿಯೂ ಇಲ್ಲದ ಕಾರಣ ಹೊಸ ಬೋರ್‌ವೆಲ್ ಅಳವಡಿಕೆ ಅಸಾಧ್ಯವಾಗಿದೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಭರವಸೆಯಂತೆ ಯಲ್ಲಟ್ಟಿ ಮತ್ತು ಬಂಡಿಗಣಿ ಗ್ರಾಮಗಳಿಗೆ ಹೊಸ ಬೋರ್‌ವೆಲ್‌ಗಳು ಮಂಜೂರಾಗಿದೆ. ೫-೬ ದಿನಗಳಲ್ಲಿ ವಾರ್ಡ್ ಜನತೆಯ ಸಮಸ್ಯೆಗೆ ನೀರು ಪೂರೈಸುವ ಮೂಲಕ ಪರಿಹಾರ ಕಲ್ಪಿಸಲಾಗುತ್ತದೆ ಎಂದಿದ್ದಾರೆ ಗ್ರಾಪಂ ಅಧ್ಯಕ್ಷರು. -----------
ಕೋಟ್..ಯಲ್ಲಟ್ಟಿ ಗ್ರಾಮದ ವಾರ್ಡ್ ನಂ.೫ರ ಜನವಸತಿ ಪ್ರದೇಶದ ಜನತೆಗೆ ಸಮೀಪದಲ್ಲೆಲ್ಲೂ ನೀರು ದೊರೆಯುತ್ತಿಲ್ಲ. ನಿತ್ಯ ಮಹಿಳೆಯರು ನೀರಿಗಾಗಿ ೬ - ೭ ಕಿ.ಮೀ.ದೂರ ಕ್ರಮಿಸುವಂತಾಗಿದೆ. ಶುಕ್ರವಾರ ಸ್ಥಳಕ್ಕೆ ತೆರಳಿ ಖುದ್ದಾಗಿ ನಾನೇ ಪರಿಶೀಲಿಸಿದ್ದು, ಈ ಹಿಂದೆ ಗ್ರಾಪಂ ಅಳವಡಿಸಿದ್ದ ಬೋರವೆಲ್‌ನ ಮೋಟರ್ ಮೇಲಕ್ಕೆತ್ತಿ ದುರಸ್ತಿ ಮಾಡಿ ಪೈಪಲೈನ್ ಸಂಪರ್ಕ ಕಲ್ಪಿಸಿ ವಸತಿ ಪ್ರದೇಶಕ್ಕೆ ನೀರು ಪೂರೈಸಲು ಗ್ರಾಪಂ ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಿದ್ದೇನೆ. ೫-೬ ದಿನಗಳಲ್ಲಿ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ.
ಸಿದ್ದಪ್ಪ ಪಟ್ಟಿಹಾಳ. ಇಓ, ತಾಲೂಕು ಪಂಚಾಯತ್, ರಬಕವಿ-ಬನಹಟ್ಟಿ.