ಕುಡಿಯುವ ನೀರಿಗೆ ನೀರೆಯರ ಪ್ರತಿಭಟನೆ

| Published : Jan 14 2025, 01:02 AM IST

ಸಾರಾಂಶ

ಹನೂರು ಸಮೀಪದ ಬಂಡಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮಹಿಳೆಯರು ಪ್ರತಿಭಟನೆ ನಡೆಸಿದರು.

ಹನೂರು: ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಬಂಡಳ್ಳಿಯ ನಾಲ್ಕನೇ ವಾರ್ಡಿನ ನಿವಾಸಿಗಳು ಗ್ರಾಮ ಪಂಚಾಯತಿ ಮುಂಭಾಗ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಬಂಡಳ್ಳಿ ಗ್ರಾಮದ ಶಿವನಯ್ಯ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ನಮ್ಮ ನಾಲ್ಕನೇ ವಾರ್ಡಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ನಿತ್ಯ ನೀರಿಗೆ ಹಾಹಾಕಾರ ಉಂಟಾಗಿದೆ. ಸಂಕ್ರಾಂತಿ ಹಬ್ಬ ಇರುವುದರಿಂದ ನೀರಿನ ಅವಶ್ಯಕತೆ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೆರಡು ದಿನದಲ್ಲಿ ಕುಡಿಯುವ ನೀರು ಪೂರೈಕೆ ಮಾಡದಿದ್ದರೆ ಗ್ರಾಮ ಪಂಚಾಯಿತಿ ಮುಂಭಾಗ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ವಾರ್ಡಿನ ಮಹಿಳೆಯರು ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಸಮರ್ಪಕವಾಗಿ ನೀರಿಲ್ಲದೆ ಶೌಚಾಲಯ ಹಾಗೂ ಸ್ನಾನ ಮಾಡಲು ಸಮಸ್ಯೆಯಾಗುತ್ತಿದೆ ಎಂದು ತಮ್ಮ‌ ಅಳಲನ್ನು‌ ತೋಡಿಕೊಂಡರು. ಈ ಪ್ರತಿಭಟನೆಯಲ್ಲಿ ಶಿವು, ಮಹೇಂದ್ರ, ಜಗದೀಶ್, ಶಿವಮೂರ್ತಿ, ಪುಟ್ಟರಾಜು, ಪುಟ್ಟು, ರವಿ, ಲಕ್ಷ್ಮಿಪತಿ, ಪ್ರಶಾಂತ್, ಭರತ್, ದೊರೆ, ಮಾದಪ್ಪ, ಮಹೇಶ್, ಸ್ವಾಮಿ ಇತರರು ಪಾಲ್ಗೊಂಡಿದ್ದರು.