ಕನ್ನಡಪ್ರಭ ವಾರ್ತೆ ಸುರಪುರ
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ನಾರಾಯಣಪುರ ಬಸವಸಾಗರ ಜಲಾಶಯದಿಂದ ಶುಕ್ರವಾರ 1.05 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗಿದೆ. ಇದರಿಂದ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.ತಿಂಥಣಿ–ದಾದಲಾಪುರ ಬೀಟ್‌ನ ಜನಸ್ನೇಹಿ ಪೊಲೀಸ್ ಪೇದೆ ದಯಾನಂದ ಜಮಾದಾರ ಅವರು ಸಾರ್ವಜನಿಕರು ಯಾವುದೇ ಕಾರಣಕ್ಕೂ ನದಿ ತೀರಕ್ಕೆ ತೆರಳದಂತೆ ಮನವಿ ಮಾಡಿದ್ದಾರೆ.
ಜಲಾಶಯದ ಶುಕ್ರವಾರ ಬೆಳಿಗ್ಗೆ 8.30ರ ಮಾಹಿತಿಯಂತೆ, ಜಲಮಟ್ಟ 491.42 ಮೀಟರ್ ಇದ್ದು, ಒಳಹರಿವು 1,10,000 ಕ್ಯೂಸೆಕ್ ಹಾಗೂ ಹೊರಹರಿವು 1,05,474 ಕ್ಯುಸೆಕ್ ದಾಖಲಾಗಿದೆ. 29 ಗೇಟ್‌ಗಳು ಹಾಗೂ ಎಂಪಿಸಿಎಲ್ ಜಲವಿದ್ಯುತ್ ಕೇಂದ್ರದ ಮೂಲಕ ನೀರನ್ನು ಹೊರಹರಿಸಲಾಗುತ್ತಿದೆ. ಜಲಾಶಯದಲ್ಲಿ 29.57 ಟಿಎಂಸಿ (ಶೇ.88.77) ನೀರು ಸಂಗ್ರಹವಾಗಿದ್ದು, ಲೈವ್ ಸಂಗ್ರಹ 14.81 ಟಿಎಂಸಿ ಇದೆ.ತಾಲೂಕಿನ ತಿಂಥಣಿ ಶ್ರೀ ಮೌನೇಶ್ವರ ದೇವಸ್ಥಾನ ಬಳಿ ಪೊಲೀಸರು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ನದಿ ದಂಡೆಯಲ್ಲಿದ್ದ ನಾಲ್ಕು ತಾತ್ಕಾಲಿಕ ಶೆಡ್‌ಗಳನ್ನು ತೆರವುಗೊಳಿಸಿ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ.
ಮುಂದಿನ ಒಂದು ದಿನದಲ್ಲಿ ಇನ್ನಷ್ಟು ನೀರು ಬಿಡುಗಡೆ ಮಾಡುವ ಸಾಧ್ಯತೆ ಇರುವುದರಿಂದ ಸೆಲ್ಫಿ ತೆಗೆಯಲು, ಮಕ್ಕಳು ಆಟವಾಡಲು, ಕುರಿಗಾಹಿಗಳು ಜಾನುವಾರು ನದಿಗೆ ಕರೆದೊಯ್ಯಲು, ಮೀನು ಹಿಡಿಯಲು ನದಿ ತೀರಕ್ಕೆ ತೆರಳಬಾರದು ಎಂದು ದಯಾನಂದ ಜಮಾದಾರ ಸೂಚಿಸಿದ್ದಾರೆ.
ನದಿ ತೀರದಲ್ಲಿ ಅಳವಡಿಸಿರುವ ಪಂಪ್‌ಸೆಟ್‌ಗಳನ್ನು ರೈತರು ಕೂಡಲೇ ಸುರಕ್ಷಿತ ಸ್ಥಳಕ್ಕೆ ತೆರವುಗೊಳಿಸಬೇಕು ಎಂದು ಧ್ವನಿವರ್ಧಕದ ಮೂಲಕ ಮನವಿ ಮಾಡಲಾಗಿದೆ. ಬಂಡೊಳ್ಳಿ, ದಾದಲಾಪುರ, ತಿಂಥಣಿ, ಅರಳಹಳ್ಳಿ, ದೇವಾಪುರ, ಶೆಳ್ಳಗಿ, ಮುಷ್ಠಳ್ಳಿ, ಬೇವಿನಾಳ, ಸೂಗೂರು, ಹೆಮ್ಮಡಗಿ, ಅಡ್ಡೋಡಗಿ, ಚೌಡೇಶ್ವರಿಹಾಳ, ಕರ್ನಾಳ ಹಾಗೂ ಹೆಮನೂರು ಗ್ರಾಮಗಳ ನಿವಾಸಿಗಳು ವಿಶೇಷ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಯಾವುದೇ ತುರ್ತು ಸಂದರ್ಭದಲ್ಲಿ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡುವಂತೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಎಎಸ್‌ಐ ಬೀರಪ್ಪ, ಪೊಲೀಸ್ ಸಿಬ್ಬಂದಿ ಅಂಬ್ರೇಶ ಚಿಕ್ಕನಹಳ್ಳಿ, ತಿಂಥಣಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಸವರಾಜ ರಾಮದುರ್ಗ, ಯಲ್ಲಪ್ಪ ಅರಳಗುಂಡಗಿ, ವೆಂಕೋಬ ಹಾವಿನಾಳ, ನಂದಪ್ಪ ಜಣಜಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.