ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಯ ಜನತೆ ತೀವ್ರ ವಿರೋಧದ ನಡುವೆಯೇ ಮತ್ತೆ ಘಟಪ್ರಭಾ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆ ಕಾಮಗಾರಿ ಸದ್ದಿಲ್ಲದೇ ವೇಗ ಪಡೆದುಕೊಂಡಿದೆ. ಇದು ಜಿಲ್ಲೆಯ ಜನರ, ಜನಪ್ರತಿನಿಧಿಗಳಿಗೂ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಈ ಯೋಜನೆಗೆ ಬ್ರೇಕ್ ಹಾಕಿದ್ದರು. ಆದರೆ, ಈಗ ಡಿಸಿಎಂ ಡಿ.ಕೆ.ಶಿವಕುಮಾರ ಈ ಯೋಜನೆಗೆ ಮತ್ತೆ ಗ್ರಿನ್ ಸಿಗ್ನಲ್ ಕೊಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ಗಮನಕ್ಕೆ ತಾರದೇ ಹುಕ್ಕೇರಿ ತಾಲೂಕಿನ ಘಟಪ್ರಭಾ ಜಲಾಶಯದಿಂದ ಧಾರವಾಡಕ್ಕೆ ನೀರು ಪೂರೈಸುವ ಯೋಜನೆ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಒಟ್ಟು 110 ಕಿ.ಮೀ. ಪೈಪ್‌ಲೈನ್ ಅಳವಡಿಕೆಗೆ ₹350 ಕೋಟಿ ವೆಚ್ಚದಲ್ಲಿ ಅರ್ಧ ಟಿಎಂಸಿ ನೀರು ಪೂರೈಸುವ ಕಾಮಗಾರಿ ನಡೆದಿತ್ತು. ಈ ಯೋಜನೆಗೆ ಜಿಲ್ಲೆಯ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಜಿಲ್ಲಾ ಉಸ್ತುವಾರಿ ಸಚಿವರು ಯೋಜನೆ ಸ್ಥಗಿತಗೊಳಿಸಿದ್ದರು. ಆದರೆ, ಇದೀಗ ಮತ್ತೆ ಕಾಮಗಾರಿ ವೇಗ ಪಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಗೋಕಾಕದಲ್ಲಿ ಕಾಮಗಾರಿ ಪುನಾರಂಭವಾಗಿದೆ. ಜೆಸಿಬಿ, ಕ್ರೇನ್ ಬಳಸಿ ಪೈಪ್ ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಜಿಲ್ಲೆಯ ಜನತೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ತೀವ್ರ ಹೋರಾಟದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.ಜಿಲ್ಲೆಗೆ ಮತ್ತೊಂದು ಆಘಾತ:
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘಟಪ್ರಭಾ ಜಲಾಶಯ 51 ಟಿಎಂಸಿ ಸಾಮರ್ಥ್ಯ ಹೊಂದಿದೆ. ಬೆಳಗಾವಿ ಮಹಾನಗರ ಸೇರಿದಂತೆ ನೂರಾರು ಗ್ರಾಮಗಳು ಕುಡಿಯುವ ನೀರಿಗಾಗಿ ಈ ಜಲಾಶಯವನ್ನೇ ಅವಲಂಬಿಸಿವೆ. ಇದೇ ಜಲಾಶಯದಿಂದ ನೆರೆಯ ಬಾಗಲಕೋಟೆ ಜಿಲ್ಲೆಯ ಪಟ್ಟಣ ಹಾಗೂ ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತಿದೆ. ಹಲವಾರು ಬಾರಿ ಈ ಜಲಾಶಯದಲ್ಲಿ ನೀರಿನ ಅಭಾವದಿಂದಾಗಿ ಅವಲಂಬಿತ ನಗರ ಮತ್ತು ಗ್ರಾಮಗಳು ತೀವ್ರ ಸಂಕಷ್ಟ ಎದುರಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಧಾರವಾಡ ತಾಲೂಕಿನ 6042 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸುತ್ತಿರುವ ಕೈಗಾರಿಕೆ ಪ್ರದೇಶಕ್ಕೆ 45 ಎಂಎಲ್‌ಡಿ ನೀರನ್ನು ಪೂರೈಸಲು ಸರ್ಕಾರ ಮೇ 2 ರಂದು ಆದೇಶಿಸಿರುವುದು ಬೆಳಗಾವಿ ಜಿಲ್ಲೆಯ ಜನತೆಗೆ ಆಘಾತ ತಂದಿದೆ. ಕೈಗಾರಿಕಾ ಪ್ರದೇಶಕ್ಕೆ ಘಟಪ್ರಭಾ ಜಲಾಶಯದಿಂದ ಯಾವುದೇ ಪರಿಸ್ಥಿತಿಯಲ್ಲಿ ನೀರು ಪೂರೈಸುವುದನ್ನು ವಿರೋಧಿಸಿ ಕನ್ನಡಪರ ಹಾಗೂ ರೈತಪರ ಸಂಘಟನೆಗಳು ಹೋರಾಟ ನಡೆಸಿದ್ದವು. ಅಲ್ಲದೇ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಸಹ ತೀಕ್ಷ್ಣವಾಗಿ ವಿರೋಧ ವ್ಯಕ್ತಪಡಿಸಿದ್ದರು. ಅದಾಗ್ಯೂ ರಾಜ್ಯ ಸರ್ಕಾರ ಈ ಬಗ್ಗೆ ಆತುರದ ನಿರ್ಧಾರ ಕೈಕೊಂಡಿರುವುದು ಜನರ ಕಿಡಿಗೆ ಕಾರಣವಾಗಿದೆ.600 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಕೈಗಾರಿಕಾ ಪ್ರದೇಶಕ್ಕೆ 45 ಎಂಎಲ್‌ಡಿ ನೀರನ್ನು ಮಾತ್ರ ಪೂರೈಸಲಾಗುವುದು ಎಂಬ ಅಂಶವನ್ನು ಆದೇಶದಲ್ಲಿ ಪ್ರಸ್ತಾಪಿಸಿರುವುದು ಬೆಳಗಾವಿ ಜಿಲ್ಲೆಯ ಜನತೆಯನ್ನು ತಪ್ಪು ದಾರಿಗೆ ಎಳೆಯುವ ಉದ್ದೇಶವೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ನಿರ್ಮಿಸಲಾದ ನವಿಲುತೀರ್ಥ ಜಲಾಶಯದಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಿಗೆ ಆರಂಭದಲ್ಲಿ 2 ಟಿಎಂಸಿ ನೀರನ್ನು ಮಾತ್ರ ಪೂರೈಸಲಾಗುತ್ತಿತ್ತು. ಈಗ ಧಾರವಾಡ ಜಿಲ್ಲೆಯ ಅನೇಕ ಪಟ್ಟಣ ಮತ್ತು ಹಳ್ಳಿಗಳಿಗೆ ಪೂರೈಸಲಾಗುತ್ತಿರುವ ನೀರಿನ ಪ್ರಮಾಣ 6.5 ಟಿಎಂಸಿ ತಲುಪಿದೆ.ಬೆಳಗಾವಿ ಜಿಲ್ಲೆಯ ಸಚಿವರು, ಶಾಸಕರು ಈ ಸಂಬಂಧ ವಹಿಸಿರುವ ನಿಗೂಢ ಮೌನದ ದುರ್ಲಾಭ ಪಡೆಯುತ್ತಿರುವ ಹುಬ್ಬಳ್ಳಿ ಧಾರವಾಡದ ರಾಜಕಾರಣಿಗಳು ಹಾಗೂ ಉದ್ದಿಮೆದಾರರು ಈಗ ಘಟಪ್ರಭಾ ಜಲಾಶಯಕ್ಕೂ ಕಣ್ಣು ಹಾಕಿದ್ದಾರೆ. ರಾಜ್ಯ ಸರ್ಕಾರ ಮೇ 2 ರಂದು ಹೊರಡಿಸಿದ ಆದೇಶವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಸಾಮಾಜಿಕ ಹಾಗೂ ರೈತಪರ ಸಂಘಟನೆಗಳು ಹಿಡಿಯಬೇಕಾಗುತ್ತದೆ.- ಅಶೋಕ ಚಂದರಗಿ,
ಕನ್ನಡ ಹೋರಾಟಗಾರ