ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ತುಂಗಭದ್ರಾ ಜಲಾಶಯಕ್ಕೆ ಅತ್ಯಧಿಕ ನೀರು ಹರಿದು ಬಂದಿರುವ ಈ ವರ್ಷವೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಆತಂಕ ಮಡುಗಟ್ಟಿದೆ. ಏ. 30ರ ವರೆಗೂ ನೀರು ಬಿಡುವಂತೆ ರೈತರು ಬಿಗಿಪಟ್ಟು ಹಿಡಿದಿದ್ದಾರೆ.
ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾ. 30ರ ವರೆಗೂ ನೀರು ಬಿಡುವುದಾಗಿ ತೀರ್ಮಾನಿಸಲಾಗಿತ್ತು. ಆದರೆ, ರೈತರು ಏ. 30ರ ವರೆಗೂ ನೀರು ಬಿಡಿದಿದ್ದರೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಅರ್ಧದಷ್ಟು ಬೆಳೆ ನೀರಿಲ್ಲದಂತೆ ಒಣಗಿ ಹೋಗಲಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 8.5 ಲಕ್ಷ ಎಕರೆ ಪ್ರದೇಶದಲ್ಲಿ ಎರಡನೇ ಬೆಳೆಯಾಗಿ ಭತ್ತ ಹಾಕಲಾಗಿದೆ. ಇದರಲ್ಲಿ 4ರಿಂದ 5 ಲಕ್ಷ ಎಕರೆ ಭತ್ತ ಮಾರ್ಚ್ ಅಂತ್ಯದ ವೇಳೆಗೆ ಬರಲಿದೆ. ಆದರೆ, ಉಳಿದ 3ರಿಂದ 4 ಲಕ್ಷ ಎಕರೆ ಭತ್ತ ಏಪ್ರಿಲ್ ಅಂತ್ಯದ ವೇಳೆಗೆ ಬರುತ್ತದೆ. ಹೀಗಾಗಿ, ನಮಗೆ ಏ. 30ರ ವರೆಗೂ ನೀರು ಬಿಡಲೇ ಬೇಕು ಎಂದು ಬೆಳೆಗಾರರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಭದ್ರಾ ನೀರಿಗೆ ಮೊರೆ:ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ನೀರಿನ ಅಭಾವ ಎದುರಾಗಿರುವುದರಿಂದ ಭದ್ರಾ ಜಲಾಶಯದಿಂದ 2ರಿಂದ 3 ಟಿಎಂಸಿ ನೀರು ಪಡೆಯುವ ದಿಸೆಯಲ್ಲಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮುಂದಾಗಿದ್ದಾರೆ. ಈ ಕುರಿತು ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ. ಜಲಾಶಯದಲ್ಲಿ ಇರುವ ನೀರಿನಲ್ಲಿ ಆಂಧ್ರದ ಪಾಲು ಇದ್ದು, ಈ ನೀರಿನಲ್ಲಿಯೂ ಸಹ ರಾಜ್ಯದ ರೈತರಿಗೆ ಹೆಚ್ಚುವರಿಯಾಗಿ ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುವಂತೆ ಕೋರಿದ್ದಾರೆ. ಆದರೆ, ಇದಕ್ಕೆ ಯಾವುದೇ ಸಕಾರಾತ್ಮಕ ಉತ್ತರ ಬಂದಿಲ್ಲ.
ನೀರು ಎಷ್ಟಿದೆ:ತುಂಗಭದ್ರಾ ಜಲಾಶಯದಲ್ಲಿ ಪ್ರಸಕ್ತ ವರ್ಷ (ಮಾ. 19ಕ್ಕೆ) 19.134 ಟಿಎಂಸಿ ನೀರಿದೆ. ಇದರಲ್ಲಿ ಡೆಡ್ ಸ್ಟೋರೇಜ್ ಮತ್ತು ಕುಡಿಯುವ ನೀರಿಗಾಗಿ ಹೊರತುಪಡಿಸಿ ಕೃಷಿಗೆ ಬಳಕೆ ಮಾಡಿಕೊಳ್ಳುವುದಕ್ಕೆ 12ರಿಂದ 13 ಟಿಎಂಸಿ ನೀರಿದೆ. ಇದರಲ್ಲಿ ಆಂಧ್ರ ಮತ್ತು ರಾಜ್ಯದ ಪಾಲು ಸಹ ಇದೆ. ಹೀಗಾಗಿ, ಇರುವ ನೀರನ್ನು ರಾಜ್ಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮಾ. 30ರ ವರೆಗೂ ಬಿಡುಗಡೆ ಮಾಡಲು ಮಾತ್ರ ಸಾಧ್ಯ ಎನ್ನುವುದು ತುಂಗಭದ್ರಾ ನೀರಾವರಿ ಇಲಾಖೆಯ ಅಧಿಕಾರಿಗಳ ವಿವರಣೆ. ಆನ್ ಆ್ಯಂಡ್ ಆಪ್ ಮೂಲಕ ಏ. 30ರ ವರೆಗೂ ನೀಡುವಂತೆ ರೈತರು ಕೋರುತ್ತಿದ್ದಾರೆ.
ನಾಳೆ ಮಹತ್ವದ ಸಭೆ:ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ನೀರಿನ ಸಮಸ್ಯೆ ಇತ್ಯರ್ಥಪಡಿಸಲು ಮಾ. 21ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಇರುವ ನೀರನ್ನು ಏ. 30ರ ವರೆಗೂ ಹೇಗೆ ಬಿಡಲು ಸಾಧ್ಯ ಎನ್ನುವ ಕುರಿತು ಚರ್ಚೆ ನಡೆಯಲಿದೆ. ಏ. 15ರ ವರೆಗೂ ನೀರು ಬಿಟ್ಟರೂ ಶೇ. 90ರಷ್ಟು ಬೆಳೆ ಬರುತ್ತದೆ. ಈ ದಿಸೆಯಲ್ಲಿಯೂ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಿದೆ.ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿನ ರೈತರು ಏ. 30ರ ವರೆಗೂ ನೀರು ಬಿಡುವಂತೆ ಕೋರಿದ್ದೇವೆ. ಇಲ್ಲದಿದ್ದರೆ ಅರ್ಧದಷ್ಟು ಬೆಳೆ ಕೈಗೆ ಬಂದರೂ ಬಾಯಿಗೆ ಬರದಂತೆ ಆಗುತ್ತದೆ. ಈ ದಿಸೆಯಲ್ಲಿ ನೀರಾವರಿ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಬೇಕಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದ್ದಾರೆ.
ರೈತರ ಕೋರಿಕೆ ಗಂಭೀರವಾಗಿದ್ದು, ಅದನ್ನು ಈಡೇರಿಸುವ ದಿಸೆಯಲ್ಲಿ ಮಾ. 21ರಂದು ಸಭೆ ಕರೆಯಲಾಗಿದೆ. ಈ ನಡುವೆ ಭದ್ರಾದಿಂದಲೂ ನೀರು ಬಿಡುವಂತೆ ಮತ್ತು ಆಂಧ್ರದ ಪಾಲು ಬಳಕೆ ಮಾಡಿಕೊಳ್ಳವಂತೆ ಕೋರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಿ ತಿಳಿಸಿದ್ದಾರೆ.