ಕಮಲನಗರ ಬಡಾವಣೆಗಳಲ್ಲಿ ನೀರಿಗೆ ಹಾಹಾಕಾರ

| Published : May 22 2024, 12:54 AM IST

ಸಾರಾಂಶ

ಹಿಮ್ಮತನಗರ, ಸಿದ್ದಾರ್ಥನಗರ, ವಿಶ್ವಾಸನಗರದಲ್ಲಿ ನೀರಿನ ಸಮಸ್ಯೆ ತೀವ್ರ ಉಲ್ಬಣ, ಕೆಟ್ಟು ನಿಂತ ಕೈಪಂಪ್ ದುರಿಸ್ತಿ ಮಾಡಿಸಲು ಕ್ರಮ ಕೈಗೊಳ್ಳದ ಪಂಚಾಯತಿ ಅಧಿಕಾರಿ

ಮಹಾದು ಬರ್ಗೆ

ಕನ್ನಡಪ್ರಭ ವಾರ್ತೆ ಕಮಲನಗರ

ಪಟ್ಟಣದ ಹಿಮ್ಮತನಗರ, ಸಿದ್ದಾರ್ಥನಗರ ಹಾಗೂ ವಿಶ್ವಾಸನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.

ಜನರು ಒಂದು ಕೊಡ ನೀರಿಗಾಗಿ ಸಂಕಟ ಎದುರಿಸಬೇಕಾದ ಪರಿಸ್ಥಿತಿ ತಾಲೂಕು ಕೇಂದ್ರವಾದ ಕಮಲನಗರದಲ್ಲಿ ಬಂದೊದಗಿದೆ. ಈ ಮೂರು ವಾರ್ಡಗಳಲ್ಲಿ ಒಟ್ಟು ಅಂದಾಜು 1194 ಜನಸಂಖ್ಯೆ ಇದ್ದು, ಇಡೀ ಎಲ್ಲಾ ವಾರ್ಡಗಳಿಗೆ ಕೇವಲ 3 ಕೈ ಪಂಪಗಳಿವೆ. ಇದರಲ್ಲಿ ಒಂದು ಕೈ ಪಂಪ್ ಮಾತ್ರ ಚಾಲನೆಯಲ್ಲಿತ್ತು. ಈ ಕೈ ಪಂಪ್ ಕೂಡ 1986ರಲ್ಲಿ ಕೊರೆದ ಕೈಪಂಪ್‌ ಆಗಿದ್ದು ನೀರು ಬತ್ತಿಲ್ಲ. ಕೈ ಪಂಪ್ ಕೆಟ್ಟು ಹೋದರೂ ಸಂಭಂಧಪಟ್ಟವರು ದುರುಸ್ತಿ ಕೈಗೊಂಡಿಲ್ಲ. ಸಮಸ್ಯೆ ಹೇಳಿದರೂ ಕ್ಯಾರೆ ಎನ್ನುತ್ತಿಲ್ಲ. ಅಧಿಕಾರಿಗಳೇ ನೀರಿನ ಸಮಸ್ಯೆಗೆ ಪ್ರಮುಖ ಕಾರಣ ಎನ್ನುತ್ತಾರೆ ಇಲ್ಲಿನ ಜನ. ಕೆಟ್ಟರುವ ಕೈ ಪಂಪ್ ದುರಿಸ್ತಿ ಮಾಡುವಂತೆ ಗ್ರಾಮಸ್ಥರೂ ಸಂಭಂಧಪಟ್ಟ ಗ್ರಾಮದ ಸದಸ್ಯತ್ವ ಹೊಂದಿದವರು ಅನೇಕ ಬಾರಿ ಮೌಖಿಕವಾಗಿ ಮನವಿ ಮಾಡಿದರೂ ಯಾವುದೆ ಪ್ರಯೋಜನವಾಗಿಲ್ಲ. ಮೊದಲು ಮೊಟರ್ ಕೆಟ್ಟು ಹೊಯಿತು. ಮೊಟರ್ ರಿಪೇರಿ ಮಾಡಲಾಯತು. ನಂತರ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿರುವ ಕಾರಣ ಎಲ್ಲ ಜನರು ಕೈ ಪಂಪ್ ಮೇಲೆ ಅವಲಂಬನೆ ಆಗಿದ್ದರು.

ಸುಮಾರು 10 ದಿನಗಳಿಂದ ಈ ಸಮಸ್ಯೆಗೆ ಪರಿಹಾರ ಕೇಳಿದರೂ ಕ್ರಮ ಕೈಗೊಳ್ಳದೆ, ಪಂಚಾಯಿತಿ ವತಿಯಿಂದ ಅಧಿಕಾರಿಗಳು ಟ್ಯಾಂಕರ್ ನೀರು ಕೊಡುತಿದ್ದಾರೆ. ಶನಿವಾರ, ಭಾನುವಾರ ಹಾಗೂ ಮಂಗಳವಾರ ಒಂದು ದಿನ ಬಿಟ್ಟು ಇನ್ನೊಂದು ದಿನ ಒಂದು ಮನೆಗೆ 10 ಕೊಡ ನೀರು ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ. ಆದರೆ ಈ ನೀರು ಏತಕ್ಕೂ ಸಾಕಾಗದೆ ಜನರು ಪರಿತಪಿಸುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ:

ಕುಡಿಯುವ ನೀರಿಗಾಗಿ ಅನುದಾನ ಕೊರತೆ ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ಇಲ್ಲಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯ ಗ್ರಾಮಸ್ಥರ ಕಷ್ಟ ಹೆಚ್ಚುವಂತೆ ಮಾಡಿದೆ. ಹೀಗಾಗಿ ಇಲ್ಲಿನ ಜನತೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕನಿಷ್ಠ ನೀರಿನ ಸೌಲಭ್ಯ ಒದಗಿಸಲೂ ಪಂಚಾಯಿತಿಗೆ ಸಾಧ್ಯವಾಗದೆ ಇರುವುದು ಜನರ ಅಕ್ರೊಶಕ್ಕೆ ಕಾರಣವಾಗಿದೆ. ಚುನಾಯಿತ ಪ್ರತಿನಿಧಿಗಳಾಗಲಿ, ಅಧಿಕಾರಗಳಾಗಲಿ ಇತ್ತ ಮುಖ ಮಾಡಿಲ್ಲ. ಹೀಗಾಗಿ ಜನತೆ ಪರಿಹಾರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ವಾರ್ಡ ದೊಡ್ಡದಾಗಿರುವುದರಿಂದ ಒಂದಾದ ಮೇಲೆ ಇನ್ನೊಂದು ವಾರ್ಡಗಳಿಗೆ ನೀರು ಪೂರೈಕೆ ಟ್ಯಾಂಕರ್ ಮೂಲಕ ಮಾಡಲಾಗುತ್ತಿದೆ. ಕೈ ಪಂಪ್ ಕೆಟ್ಟದ್ದು ಆದಷ್ಟು ಬೇಗ ರಿಪೇರಿ ಮಾಡಿಕೊಡಲಾಗುತ್ತದೆ.

ಸುಶಿಲಾ ಮಹೇಶ ಸಜ್ಜನ, ಗ್ರಾಂಪಂ ಅದ್ಯಕ್ಷರು ಕಮಲನಗರ

ಒಂದು ವರ್ಷದಿಂದ ಕೆಟ್ಟರುವ ಕೈ ಪಂಪ್ ದುರಿಸ್ತಿ ಮಾಡುವಂತೆ ವಾರ್ಡಿನ ಜನರು ಅಧಿಕಾರಿಗಳಿಗೆ ಹಾಗು ಚುನಾಯಿತ ಪ್ರತಿನಿಧಿಗಳಿಗೆ ಹೇಳಿದರೂ ಇಲ್ಲಿಯವರೆಗೆ ಪ್ರಯೋಜನ ವಾಗಿಲ್ಲಾ. ಒಂದು ವೇಳೆ ವಿದ್ಯುತ್ ಪರಿವರ್ತಕ ಸುಟ್ಟು ಹೋದರು ನಮಗೆ ಈ ಕೈ ಪಂಪ್ ನೀರು ಬಹಳ ಉಪಯೋಗ ವಾಗುತಿತ್ತು.

ಗಂಗಾಸಾಗರ ಸೂರ್ಯವಂಶಿ ಬಡಾವಣೆಯ ನಿವಾಸಿ

ಪಟ್ಟಣದ ವಾರ್ಡ ಸಂಖ್ಯೆ 2ರಲ್ಲಿ ಕೆಟ್ಟ ಕೈ ಪಂಪ ದುರುಸ್ತಿ ಮಾಡುವವರು ನಿಮಗೆ ಗೊತ್ತಿದ್ದರೆ ಗ್ರಾಮಸ್ಥರಾದ ನೀವು ದುರುಸ್ತಿ ಮಾಡುವರ ಅಡ್ರೆಸ್ ಹೇಳಿ ದುರುಸ್ತಿ ಮಾಡಿಸುತ್ತೇನೆ.

ರಾಜಕುಮಾರ ತಂಬಾಕೆ ಪಿಡಿಓ ಕಮಲನಗರ