ಗುರುರಾಜ ಗೌಡೂರು

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಕಳೆದ ಎರಡು ತಿಂಗಳಿಂದ ಮಳೆ ಬಾರದೇ ಜಲಮೂಲಗಳಲ್ಲಿ ನೀರು ಪಾತಾಳದತ್ತ ಮುಖ ಮಾಡಿದೆ. ಕುಡಿಯುವ ನೀರಿಗಾಗಿ ಜೀವ ಸಂಕುಲ ವಿಲವಿಲ ಒದ್ದಾಡುತ್ತಿದೆ. ಬಿತ್ತನೆ ಮಾಡಿದ ಬೆಳೆಗಳು ಬಿಕ್ಕುತ್ತಿದ್ದು, ಮಳೆ ಇಲ್ಲದೇ ಅಡಗಿ ಅಳುತ್ತಿವೆ.

ಮೃಗಶಿರ ಮಳೆ ಬಳಿಕ ಮಳೆ ಬಾರದೇ ಮುಂಗಾರು ಹಂಗಾಮಿನ ಬೆಳೆಗಳು ಸಂಪೂರ್ಣ ಬಾಡಿ ಬಿಕ್ಕುತ್ತಿವೆ. ಮಳೆಗಾಗಿ ರೈತ ಸಂಕುಲ ನಡೆಸಿದ ಪ್ರಾರ್ಥನೆ, ದ್ಯಾನ, ಪೂಜೆ, ದೇವರ ಹೇಳಿಕೆ, ಪೂಜಾರಿಗಳ ಮಾತು ಹುಸಿಯಾಗಿ ನೇಗಿಲಯೋಗಿ ಸಂಕಷ್ಟದ ಕಣ್ಣೀರು ಝರಿಯಾಗಿ ಹರಿಯುತ್ತಿದೆ. ಅನಾದಿ ಕಾಲದಿಂದ ಸದಾ ಹರಿಯುತ್ತಿದ್ದ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳು ಮಳೆಗಾಲದಲ್ಲಿ ಬತ್ತಿ ಬರಿದಾಗಿವೆ. ನೀರು ಇದ್ದರೂ ಮಲೀನಗೊಂಡಿವೆ. ಇನ್ನೂ ಕೊಳವೆಬಾವಿಗಳಲ್ಲಿ ಜಲಮೂಲ ಪಾತಾಳ ಕಂಡಿದೆ. ದಿನವೀಡಿ ನೀರು ಹೊರಹಾಕುತ್ತಿದ್ದ ಕೊಳವೆಬಾವಿಗಳು ಬಂದ್ ಆಗಿವೆ. ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದಾರೆ. ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಬೆಳೆಗಳು ದುಸ್ಥಿತಿಗೀಡಾಗಿವೆ.

ಮುಂಗಾರು ಹಂಗಾಮಿನ ಆರಂಭಿಕ ದಿನಗಳಲ್ಲಿ ಭಾರಿ ಮಳೆ ಬಂದು ತಾಲೂಕಿನಲ್ಲಿ ಶೇ.40ರಷ್ಟು ಬಿತ್ತನೆ ಮಾಡಲಾಗಿದೆ. ಪ್ರಸಕ್ತ ಮುಂಗಾರಿನಲ್ಲಿ ಹತ್ತಿ, ತೊಗರಿ, ಸೂರ್ಯಕಾಂತಿ ಬಿತ್ತನೆ ಪ್ರದೇಶ ಹೆಚ್ಚಾಗಿದೆ. ಬಿತ್ತನೆ ಬಳಿಕ ಬೆಳೆ ಉತ್ತಮ ಬೆಳವಣಿಗೆಯಾಗುತ್ತಿತ್ತು. ಶೇ.60ರಷ್ಟು ಬಿತ್ತನೆ ಪ್ರದೇಶದ ರೈತರು ಬೀ, ರಸಗೊಬ್ಬರ ಖರೀದಿಸಿ ಬಿತ್ತನೆಗೆ ಸಜ್ಜಾಗಿದ್ದರು ಮಳೆ ಬಾರದೇ ಬೀಜ, ರಸಗೊಬ್ಬರ ಸಂಗ್ರಹಿಸಿದ ರೈತರ ಸಂಕಷ್ಟ ಹೇಳತೀರದಾಗಿದ್ದು ಅಂಗಡಿಕಾರರು ರೈತರಿಗೆ ಮಾರಾಟ ಮಾಡಿದ ಬಿತ್ತನೆ ಬೀಜಗಳು ವಾಪಸ್ಸು ಪಡೆಯುತ್ತಿಲ್ಲ. ಇನ್ನೂ ಜಾನುವಾರಗಳಿಗೆ ಹಸಿ ಮೇವು ಸಿಗದೇ ಬಡಕಲಾಗಿವೆ. ಒಣ ಸೊಪ್ಪೆ, ಹುಲ್ಲುಕಡ್ಡಿ ಜಾನುವಾರು ಆಹಾರವಾಗಿದೆ.


ತಾಲೂಕಿನ ಪ್ರಮುಖ ಜಲಮೂಲ ಕೃಷ್ಣಾನದಿ, ಹಿರೇಹಳ್ಳದಲ್ಲಿ ನೀರು ಕ್ಷಿಣವಾಗಿವೆ. ಹೊನ್ನಳ್ಳಿ, ಮಾಚನೂರು, ರಾಮತಿರ್ಥ, ಗುಡದನಾಳ ಸೇರಿದಂತೆ ಪ್ರಮುಖ ಕರೆಗಳಲ್ಲಿ ನೀರು ಬತ್ತಿವೆ. ನೀರಿದ್ದರೂ ಮಲೀನಗೊಂಡಿವೆ. ತಾಲೂಕಿನ ಪಟ್ಟಣಗಳಾದ ಲಿಂಗಸುಗೂರು, ಹಟ್ಟಿ, ಗುರುಗುಂಟಾ, ಮುದಗಲ್ ಕೃಷ್ಣಾನದಿ ನೀರನ್ನೆ ಕುಡಿಯುಲು ಬಳಸುತ್ತಿವೆ. ಬಸವಸಾಗರ ಆಣೆಕಟ್ಟೆಯಲ್ಲಿ ನೀರು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಕೃಷಿಗೆ ನೀರು ಬಿಡುವುದು ಅಸಾಧ್ಯ ಎನ್ನಲಾಗುತ್ತಿದೆ. ಬತ್ತ ನಾಟಿ ಮಾಡಲು ಸಸಿ ಮಡಿ ಹಾಕಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಆಷಾಢದ ಗಾಳಿಗೆ ಮೋಡಗಳು ನಿಲ್ಲದೇ ಓಡುತ್ತಿದ್ದು ಮಳೆ ಇಲ್ಲದೇ ಭಾರಿ ಗಾಳಿ ಬಿಸುವ ಜತೆಗೆ ಕೆಲವು ವೇಳೆ ಬಿಚ್ಚಿ ಬೀಳುವ ಬಿಸಿಲು ಭೀಕರ ಬರದ ಲಕ್ಷಣ ಗೋಚರವಾಗಿದೆ.

ಸರ್ಕಾರ ಬರಗಾಲ ಎಂದು ಘೋಷಿಸಿ ಕುಡಿಯುವ ನೀರು, ಜಾನುವಾರಗಳಿಗೆ ಮೇವು ಒದಗಿಸಿ ಜನರಿಗೆ ಉದ್ಯೋಗ ನೀಡಬೇಕು. ಬೆಳೆಸಾಲ ಮನ್ನಾ ಮಾಡಿ. ಬಲದಂಡೆ ನಾಲೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸಬೇಕು.

ಶಿವಪುತ್ರಗೌಡ ನಂದಿಹಾಳ ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ, ಲಿಂಗಸುಗೂರು.

ನಾರಾಯಣಪುರ ಬಲದಂಡೆ ನಾಲೆ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿಗೆ ಅನುಕೂಲವಾಗಲು ಪ್ರಾದೇಶಿಕ ಆಯುಕ್ತರೊಂದಿಗೆ ಮಾತನಾಡಲಾಗುವುದು. ಕೂಡಲೇ ಕುಡಿಯುವ ನೀರಿಗಾಗಿ ನಾಲೆಗೆ ನೀರು ಹರಿಸಲಾಗುತ್ತದೆ. ನಾಲೆಗೆ ಹರಿಸುವ ನೀರನ್ನು ರೈತರು ಕೃಷಿ ಉದ್ದೇಶಕ್ಕೆ ನೀರು ಬಳಸಿಕೊಳ್ಳಬಾರದು.

ಬಸವಣೆಪ್ಪ ಕಲಶೆಟ್ಟಿ ಸಹಾಯಕ ಅಯುಕ್ತ, ಲಿಂಗಸುಗೂರು.

ಮಳೆ ಇಲ್ಲದೇ ಕುಡಿಯುವ ನೀರಿಗೆ ಆಸರೆಯಾಗಿದ್ದ ಜಲಮೂಲಗಳು ಮೊದಲಿನಂತೆ ನೀರು ಸಿಗುತ್ತಿಲ್ಲ. ಬೇಸಿಗೆ ಪರಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಲು ಎಚ್ಚರಿಕೆ ವಹಿಸಲಾಗಿದೆ. ಮಳೆ ಬಾರದೇ ಪರಸ್ಥಿತಿ ಬಿಗಡಾಯುಸುತ್ತಿದೆ.

ಉಮೇಶ ಇಒ, ತಾಲೂಕು ಪಂಚಾಯಿತಿ, ಲಿಂಗಸುಗೂರು.