ಕೆರೆ ಸ್ವಚ್ಛತೆಗೆ ಮಹಾನಗರ ಪಾಲಿಕೆ ಮತ್ತು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಕೆರೆ ಅಭಿವೃದ್ಧಿಯಲ್ಲಿ ಕೆಲ ಲೋಪಗಳಾಗಿವೆ ಎಂಬ ಆರೋಪಗಳಿವೆ. ಅದನ್ನು ಮಹಾನಗರ ಪಾಲಿಕೆ ಸರಿಪಡಿಸಿಕೊಳ್ಳಬೇಕು. ಅಲ್ಲದೆ, ಈಗ ಬೋಟಿಂಗ್ ನಿಂದ ಬರುವ ಆದಾಯದಿಂದ ಸ್ವಚ್ಛತೆ ಮತ್ತು ನಿರ್ವಹಣೆಗೆ ಕ್ರಮಕೈಗೊಳ್ಳಬೇಕು.

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಅಭಿವೃದ್ಧಿಗೊಂಡಿರುವ ನಗರದ ಉಣಕಲ್‌ ಕೆರೆಯಲ್ಲಿ ನಾಲ್ಕು ವರ್ಷಗಳ ನಂತರ ಬೋಟಿಂಗ್‌ಗೆ ಮತ್ತೆ ಚಾಲನೆ ಸಿಕ್ಕಿದೆ. ಧಾರವಾಡದ ಓಂ ವಾಟರ್‌ ಸ್ಪೋರ್ಟ್ಸ್‌ ಮತ್ತು ಅಡ್ವೆಂಚರ್‌ ಸಂಸ್ಥೆ ಟೆಂಡರ್‌ ಪಡೆದಿದ್ದು, ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ರಿಬ್ಬನ್ ಕತ್ತರಿಸಿ ಬೋಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿದ್ದು, ಇಲ್ಲಿ ವಾಟರ್‌ ಸ್ಪೋರ್ಟ್ಸ್‌ ಮಾಡಬೇಕು ಎಂದು ಜನರಿಂದ ಬಹಳ ದಿನಗಳಿಂದ ಆಗ್ರಹವಿತ್ತು. ಶಾಸಕ ಮಹೇಶ ಟೆಂಗಿನಕಾಯಿ ಮತ್ತು ಮೇಯರ್‌, ಉಪಮೇಯರ್‌, ಸ್ಥಳೀಯ ಪಾಲಿಕೆ ಸದಸ್ಯರು, ಪಾಲಿಕೆ ಆಯುಕ್ತರು ಎಲ್ಲರೂ ಸೇರಿ ವಾಟರ್ ಸ್ಪೋರ್ಟ್ಸ್‌ಗೆ ಚಾಲನೆ ನೀಡಲಾಗಿದೆ. ಜನತೆ ಇದರ ಉಪಯೋಗ ಪಡೆಯಬೇಕು ಎಂದರು.

ಕೆರೆ ಸ್ವಚ್ಛತೆಗೆ ಮಹಾನಗರ ಪಾಲಿಕೆ ಮತ್ತು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಕೆರೆ ಅಭಿವೃದ್ಧಿಯಲ್ಲಿ ಕೆಲ ಲೋಪಗಳಾಗಿವೆ ಎಂಬ ಆರೋಪಗಳಿವೆ. ಅದನ್ನು ಮಹಾನಗರ ಪಾಲಿಕೆ ಸರಿಪಡಿಸಿಕೊಳ್ಳಬೇಕು. ಅಲ್ಲದೆ, ಈಗ ಬೋಟಿಂಗ್ ನಿಂದ ಬರುವ ಆದಾಯದಿಂದ ಸ್ವಚ್ಛತೆ ಮತ್ತು ನಿರ್ವಹಣೆಗೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕೆರೆ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಕಳೆದ ನಾಲ್ಕೈದು ತಿಂಗಳಿಂದ ಬೋಟಿಂಗ್ ಆರಂಭಿಸುವ ನಿಟ್ಚಿನಲ್ಲಿ ಕೆಲಸ ಮಾಡಲಾಗುತ್ತಿತ್ತು. ಇಂದು ಚಾಲನೆ ನೀಡಲಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಒಂದು ದಿನ ನೆಮ್ಮದಿಯಿಂದ ಕಾಲ ಕಳೆಯಲು ಬೇಕಾಗುವ ವಾತಾವರಣ ಕಲ್ಪಿಸಲು ಯೋಜಿಸಲಾಗಿದೆ. ಸ್ವಚ್ಛತೆ, ಶೌಚಾಲಯ ಮತ್ತು ಉತ್ತಮ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಹುಬ್ಬ‍ಳ್ಳಿಗೆ ಬರುವ ಪ್ರವಾಸಿಗರಿಗೆ ಚಂದ್ರಮೌಳೇಶ್ವರ ದೇವಸ್ಥಾನ ಮತ್ತು ಉಣಕಲ್ ಕೆರೆ ವೀಕ್ಷಣೆ ಅಲ್ಲದೇ ನೃಪತುಂಗ ಬೆಟ್ಟ ಅಭಿವೃದ್ಧಿಗೆ ಕ್ರಮ ವಹಿಸಲಾಗುತ್ತಿದೆ. ನೃಪತುಂಗ ಬೆಟ್ಟ ಮತ್ತು ಕೆರೆಯಲ್ಲಿ ಜಿಪ್‌ ಲೈನ್‌ ನಿರ್ಮಿಸಲು ವರದಿ ಪಡೆಯಲಾಗುತ್ತಿದೆ. ವರದಿ ಕೈಸೇರಿದ ನಂತರ ಅದನ್ನು ಜಾರಿ ಮಾಡಲಾಗುವುದು. ಸಿಎಸ್‌ಆರ್‌ ಅಥವಾ ಬೇರೆ ಅನುದಾನದಲ್ಲಿ ಜಿಪ್‌ ಲೈನ್‌ ಮಾಡಲು ಉದ್ದೇಶಿಸಲಾಗಿದೆ. ರಾತ್ರಿ 10ರ ವರೆಗೂ ಉಣಕಲ್ ಕೆರೆ ಉದ್ಯಾನದಲ್ಲಿ ವಾಯುವಿಹಾರ ಮಾಡಲು ಅನುಕೂಲವಾಗುವಂತೆ ಮಾಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚೌಹಾಣ್, ಆಯುಕ್ತ ರುದ್ರೇಶ ಘಾಳಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ಶಿವು ಹಿರೇಮಠ, ಮಲ್ಲಿಕಾರ್ಜುನ ಗುಂಡೂರು, ಚಂದ್ರಿಕಾ ಮೇಸ್ತ್ರಿ, ರವಿ ನಾಯಕ, ರಾಜು ಕಾಳೆ, ಸಿದ್ದು ಮೊಗಲಿಶೆಟ್ಟರ್, ಈಶ್ವರಗೌಡ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬೋಟಿಂಗ್‌ ದರ: ಮೋಟರ್ ಬೋಟ್‌ ವಯಸ್ಕರಿಗೆ ಒಂದು ರೌಂಡ್‌ಗೆ ₹100, ಮಕ್ಕಳಿಗೆ ₹50, ಪೆಡಲ್ ಬೋಟ್ ವಯಸ್ಕರರಿಗೆ (20 ನಿಮಿಷಕ್ಕೆ) ₹100 ಮಕ್ಕಳಿಗೆ ₹50, ಕಯಾಕಿಂಗ್‌ 30 ನಿಮಿಷಕ್ಕೆ ₹150, ಜೆಟ್‌ ಸ್ಕಿ ವಯಸ್ಕರರಿಗೆ ₹300 ಮಕ್ಕಳಿಗೆ ₹200 ದರ ನಿಗದಿ ಪಡಿಸಲಾಗಿದೆ.