ಅಳ್ನಾವರ:

ಪಟ್ಟಣದಲ್ಲಿ ಮುನ್ಸೂಚನೆಯಿಲ್ಲದೆ ನೀರು ಸರಬರಾಜು ಸ್ಥಗಿತಗೊಂಡಿರುವ ಕಾರಣ ಆಕ್ರೋಶಗೊಂಡ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಪಟ್ಟಣಕ್ಕೆ ದಿನದ 24 ಗಂಟೆ ಕಾಳಿನದಿಯಿಂದ ನೀರು ಪೂರೈಸಲಾಗುತ್ತಿದೆ. ಆದರೆ, ಯಾವ ಮುನ್ಸೂಚನೆ ಇಲ್ಲದೆ ನೀರು ಸ್ಥಗಿತ ಮಾಡಿದ್ದು ತೊಂದರೆಯುಂಟಾಗಿದೆ. ಇದರಿಂದ ಸಭೆ, ಸಮಾರಂಭ, ಮದುವೆ ಕಾರ್ಯಗಳಿಗೆ ತೀವ್ರ ತೊಂದರೆಯಾಗಿದೆ. ನೀರು ಬಿಡುವುದು ವಿಳಂಬವಾದರೆ ದಿನದ ಬಳಕೆಗೆ ಬೇಕಾಗುವಷ್ಟು ನೀರು ಸಂಗ್ರಹಿಸಿ ಇಟ್ಟುಕೊಳ್ಳಲು ಜನರಿಗೆ ಮಾಹಿತಿ ನೀಡಬೇಕು. ನೀರು ಸಂಗ್ರಹಕ್ಕೆ ಪಟ್ಟಣದಲ್ಲಿ ಓವರ್‌ ಹೆಡ್‌ಟ್ಯಾಂಕ್‌ ನಿರ್ಮಿಸಬೇಕು. ಇಲ್ಲದಿದ್ದರೆ ಪಪಂ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಪಂ ಮುಖ್ಯಾಧಿಕಾರಿ ಪ್ರಕಾಶ ಮಗದಮ್ ಮತ್ತು ನೀರು ಸರಬರಾಜು ಮಂಡಳಿಯ ಸಹಾಯಕ ಅಭಿಯಂತಕ ಎಂ.ಎಂ. ಮಿಶ್ರಿಕೋಟಿ ಮಾತನಾಡಿ, ಪಟ್ಟಣಕ್ಕೆ ದಾಂಡೇಲಿಯ ಕಾಳಿನದಿಯಿಂದ ನೀರು ಬರುತ್ತಿದ್ದು ಅಲ್ಲಿನ ಪೈಪ್‌ಲೈನ್‌ ದುರಸ್ತಿಯಿಂದಾಗಿ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಯಾದರೆ ಜನರಿಗೆ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಮಹಾದೇವ ಸಾಗರೇಕರ, ಪುಂಡಲೀಕ ಪಾರಧಿ, ರಾಜು ಕರ್ಲೆಕರ, ಸುರೇಂದ್ರ ಕಡಕೊಳ, ಶಾಹು ಶಿಂಧೆ, ಪ್ರಶಾಂತ ಪವಾರ, ಪವನ ಹಂಡೆ, ದಿನೇಶ ನವಲೇಕರ, ಸುನೀಲ ಸಾಗರೇಕರ, ಅಲೇಕ್ಸ್‌ ಫರ್ನಾಂಡಿಸ್, ಪ್ರವೀಣ ಪವಾರ, ಸುನೀಲ ಪೇಡ್ನೆಕರ, ಎಂ.ಆರ್, ಕಾಳೆ ಸೇರಿದಂತೆ ಇತರರು ಇದ್ದರು.