ತರೀಕೆರೆ ತಾಲೂಕಿನ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಮೊದಲ ಹಂತದ ಕಾಮಗಾರಿಯ ಪ್ರಾಯೋಗಿಕ ಚಾಲನ
ಕನ್ನಡಪ್ರಭ ವಾರ್ತೆ, ತರೀಕೆರೆತಾಲೂಕಿನ 50 ಕೆರೆಗಳಿಗೆ ನೀರು ತುಂಬಿಸುವ ಈ ನೀರಾವರಿ ಯೋಜನೆ ಒಟ್ಟಾರೆ ₹1278 ಕೋಟಿಗಳಲ್ಲಿ ರೂಪುಗೊಂಡಿರುವ ಒಂದು ಬೃಹತ್ ಯೋಜನೆಯಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ತರೀಕೆರೆ ತಾಲೂಕಿನಲ್ಲಿ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮೊದಲ ಹಂತದ ಕಾಮಗಾರಿ ಹಾಗೂ ಸಮೀಪದ ನಂದಿ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದರು. 2017ರಲ್ಲಿ ಭದ್ರಾ ಜಲಾಶಯದಿಂದ ನೀರನ್ನು ಕೆರೆಗಳಿಗೆ ತುಂಬಿಸಲು ಈ ಯೋಜನೆಯಲ್ಲಿ ನೀರು ಮೀಸಲಿಡಲಾಗಿತ್ತು, ಕೆರೆಗಳಿಗೆ ನೀರು ಹರಿಸುವುದರಿಂದ ಈ ಭಾಗದ ರೈತರು, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಿದಂತಾಗುವ ಜತೆಗೆ ದ ಈ ಭಾಗದ ಅಂತರ್ಜಲ ಹೆಚ್ಚಾಗುತ್ತದೆ. 15 ದಿನಗಳ ವರೆಗೆ ಕೆರೆಗಳಿಗೆ ಜಲಾಶಯದಿಂದ ನೀರು ತುಂಬಿಸುವ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.ನಂದಿ ಗ್ರಾಮದ ಬಳಿ 40 ಎಕರೆ ಪ್ರದೇಶದಲ್ಲಿ ವಿದ್ಯುತ್ ಸೌರ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ವಿದ್ಯುತ್ ಸೌರ ಘಟಕ ಸ್ಥಾಪಿಸುವುದರಿಂದ ಈ ಭಾಗದಲ್ಲಿ ಆಗಬಹುದಾದ ವಿದ್ಯುತ್ ಕೊರತೆ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಭದ್ರಾ ಜಲಾಶಯದಿಂದ ನಮ್ಮ ಕೆರೆಗಳಿಗೆ ನೀರಿನ ಕೊರತೆ ಆಗುವುದಿಲ್ಲ, ಮುಂಗಾರು ಮಳೆ ಒಂದು ವಾರದ ಮುಂಚೆಯೇ ಪ್ರಾರಂಭವಾಗುವ ನೀರೀಕ್ಷೆ ಇರುವುದರಿಂದ ರೈತರು ಆತಂಕ ಪಡುವ ಅಗತ್ಯವಿಲ್ಲ. ವಾಡಿಕೆಯಂತೆ ಲಿಂಗದಹಳ್ಳಿ ಭಾಗದಲ್ಲಿ ಮಳೆ ಸ್ವಲ್ಪಕಡಿಮೆ ಇದೆ. ಹಾಗಾಗಿ ಲಿಂಗದಹಳ್ಳಿ ಭಾಗಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ.ಮುಖಂಡ ಜಯರಾಮ್ ಮಾತನಾಡಿ ಲಿಂಗದಹಳ್ಳಿ ಬರಪೀಡಿತವಾಗಿದೆ. ಈ ಭಾಗದ ಕೆರೆಗಳಿಗೆ ನೀರು ತುಂಬಿಸ ಬೇಕೆಂದು ಹಲವು ವರ್ಷಗಳ ಬೇಡಿಕೆ ಇತ್ತು ಈಗ ಕೆರೆಗಳಿಗೆ ನೀರು ತುಂಬಿಸುತ್ತಿರುವುದರಿಂದ ಈ ಭಾಗಕ್ಕೆ ನೀರಿನ ಸಮಸ್ಯೆ ಬಗೆ ಹರಿದಂತಾಗಿದೆ ಎಂದು ನುಡಿದರು.
ಕೆಡಿಪಿ.ಸದಸ್ಯೆ ರಚನಾ ಶ್ರೀನಿವಾಸ್, ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಫಾರೂಕ್, ತರೀಕೆರೆ ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ತಾಲೂಕು ಕಾಂಗ್ರಸ್ ಸೇವಾ ದಳ ಅಧ್ಯಕ್ಷ ಟಿ.ಎನ್.ಜಗದೀಶ್, ಮಖಂಡರಾದ ಪ್ರಸನ್ನ, ರಮೇಶ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ದೇವೇಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.--
18ಕೆಟಿಆರ್.ಕೆ.1ಃತರೀಕೆರೆ ಸಮೀಪದ ನಂದಿ ಗ್ರಾಮದಲ್ಲಿ ನಂದಿ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಪ್ರಾಯೋಗಿಕ ಚಾಲನೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಅವರು ಮಾತನಾಡಿದರು. ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಫಾರೂಕ್, ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್. ಪ್ರಕಾಶ್ ವರ್ಮ ಮತ್ತಿತರರು ಇದ್ದರು.