ಸಾರಾಂಶ
ಪಿ.ಎಸ್. ಪಾಟೀಲ
ಕನ್ನಡಪ್ರಭ ವಾರ್ತೆ ರೋಣತಾಲೂಕಿನ ಹೊಳೆಮಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಡಗೋಳಿ ನವಗ್ರಾಮಕ್ಕ 12 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಇಲ್ಲಿನ ಜನ-ಜಾನುವಾರು ನೀರಿಗಾಗಿ ಎಲ್ಲೆಂದರಲ್ಲಿ ಅಲೆಯುವಂತಾಗಿದೆ.
2007 ಮತ್ತು 2009ರಲ್ಲಿ ಸುರಿದ ಭಾರೀ ಕುಂಭದ್ರೋಣ ಮಳೆಯಿಂದ ನದಿ ಪಾತ್ರದಲ್ಲಿದ್ದ ಗಾಡಗೋಳಿ ಗ್ರಾಮ ಜಲಾವೃತಗೊಂಡು ತೊಂದರೆ ಅನುಭವಿಸುತ್ತಿತ್ತು. ಇದನ್ನರಿತ ಸರ್ಕಾರ ಗಾಡಗೋಳಿ ಸ್ಥಳಾಂತರಕ್ಕಾಗಿ ನವಗ್ರಾಮದಲ್ಲಿ 504 ಆಸರೆ ಮನೆಗಳನ್ನು ನಿರ್ಮಿಸಿತು. ಇದರಲ್ಲಿ 419 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, 290 ಫಲಾನುಭವಿಗಳಿಗೆ (ಕುಟುಂಬಗಳು) ಮಾತ್ರ ಮನೆಗಳ ಹಕ್ಕುಪತ್ರ ವಿತರಿಸಲಾಗಿದೆ. ಇನ್ನೂ 129 ಮನೆಗಳಿಗೆ ಹಕ್ಕುಪತ್ರ ವಿತರಿಸಬೇಕಿದೆ.ಮನೆ ಹಂಚಿಕೆ ಗೊಂದಲ:ಮೂಲ ಗ್ರಾಮದಲ್ಲಿನ ಕುಟುಂಬಕ್ಕೆ ತಕ್ಕಂತೆ ಮನೆ ಹಂಚಿಕೆ ಮಾಡಿಲ್ಲ, 4 ಕುಟುಂಬಕ್ಕೆ 1 ಮನೆ ಕೊಟ್ಟಿದ್ದಾರೆ. ಕೆಲವರು ಪ್ರಭಾವ ಬೆಳಸಿ 3ರಿಂದ 4 ಮನೆಗಳನ್ನು ಪಡೆದುಕೊಂಡಿದ್ದಾರೆ. ಇದರಿಂದ ನಮಗೆ ವಾಸಿಸಲು ಮನೆ ಸಿಕ್ಕಿಲ್ಲ, ನಮಗೆ ಹಕ್ಕು ಪತ್ರ ಹಂಚಿಲ್ಲ. ಮನೆ ಕಲ್ಪಿಸುವಂತೆ ತಾಲೂಕು ಆಡಳಿತ, ಗ್ರಾ.ಪಂಗೆ ಅಲೆದರೂ ಸ್ಪಂದನೆ ಸಿಕ್ಕಿಲ್ಲ ಎನ್ನುತ್ತಾರೆ ಕೆಲವರು. ಮೂಲ ಗ್ರಾಮದಲ್ಲಿ ಮನೆ ಬಿದ್ದಿದ್ದರೂ ನವಗ್ರಾಮದಲ್ಲಿ ಮನೆ ಬಂದಿಲ್ಲವಾದ್ದರಿಂದ ಬಾಡಿಗೆ ಮನೆಯಲ್ಲಿದ್ದೇವೆ ಎನ್ನುತ್ತಾರೆ ಕೆಲ ಸಂತ್ರಸ್ತರು. ಹೀಗೆ ಮನೆ ಹಾಗೂ ಹಕ್ಕುಪತ್ರ ಹಂಚಿಕೆಯಲ್ಲಿನ ತಾರತಮ್ಯ ಹಾಗೂ ಗೊಂದಲ ದಶಕ ಕಳೆದರೂ ಮುಗಿದಿಲ್ಲ.
ಶೇ. 65ರಷ್ಡು ವಾಸ:2007 ಮತ್ತು 2009ರಲ್ಲಿ ಪ್ರವಾಹದಿಂದ ಸ್ಥಳಾಂತರಗೊಂಡ ನವಗ್ರಾಮದಲ್ಲಿ 2019ರ ವರೆಗೆ ಕೇವಲ 25 ಕುಟುಂಬಗಳು ಮಾತ್ರ ವಾಸವಿದ್ದವು. 2019ರ ಸೆಪ್ಟೆಂಬರ್‌ನಲ್ಲಿ ಮತ್ತೆ ಮಲಪ್ರಭ ನೆರೆ ಹಾವಳಿಯಿಂದ ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸಬೇಕಾಯಿತು. ಆಗ ಮೂಲ ಗ್ರಾಮದ ಮತ್ತಷ್ಟು ಮನೆಗಳು ನೆಲಸಮವಾದವು. ಮನೆಯಲ್ಲಿದ್ದ ದವಸ, ಧಾನ್ಯ, ಬಟ್ಟೆ, ಒಕ್ಕಲುತನ ಸಾಮಗ್ರಿ ಸೇರಿದಂತೆ ಅಪಾರ ಸಾಮಗ್ರಿಗಳು ನೀರು ಪಾಲಾದವು. ಇದರಿಂದ ಮತ್ತಷ್ಟು ಜರ್ಜರಿತರಾದ ಗಾಡಗೋಳಿ ಜನತೆ ಮೂಲ ಗ್ರಾಮ ತೊರೆದು ನವಗ್ರಾಮದಲ್ಲಿ ವಾಸಿಸಲು ಮುಂದಾದರು. ಸದ್ಯ ಶೇ.65ರಷ್ಟು ಕುಟುಂಬಗಳು ನವಗ್ರಾಮದಲ್ಲಿವೆ.ಹಕ್ಕುಪತ್ರ ಸರಿಯಾಗಿ ವಿತರಣೆಯಾಗಿಲ್ಲ. ಇದರಿಂದ ಶೇ. 35ರಷ್ಟು ಕುಟುಂಬಗಳು ಮೂಲ ಗ್ರಾಮದಲ್ಲಿಯೇ ಇದ್ದಾರೆ. ನವಗ್ರಾಮದ ಆಸರೆ ಮನೆಗಳಿಗೆ ತೆರಳಲು ಸರ್ಕಾರ ವಿಧಿಸಿದ ಷರತ್ತು, ಮನೆಗಳ ಹಂಚಿಕೆಯಲ್ಲಿ ತಾರತಮ್ಯ, ಹಕ್ಕುಪತ್ರ ವಿತರಣೆಯಲ್ಲಿಯೂ ವಿಳಂಬ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ.ನೀರಿಗಾಗಿ ನಿತ್ಯ ಪರದಾಟ: 2020-21ನೇ ಸಾಲಿನ ಜಲಜೀವನ ಮಷಿನ್ (ಜೆಜೆಎಂ) ಯೋಜನೆಯಡಿ ಲಕ್ಷಾಂತರ ಹಣ ಖರ್ಚು ಮಾಡಿ ಪೈಪ್ ಲೈನ್, ಮನೆಗೊಂದು ನಳ ಅಳವಡಿಸಲಾಗಿದ್ದು, ಹಲವು ವರ್ಷಗಳಾದರೂ ಜೆಜೆಎಂ ಮೂಲಕ ನೀರು ಪೂರೈಕೆಯಾಗಿಲ್ಲ. ಜಿಪಂನ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರಿಂಗ್ ಉಪ ವಿಭಾಗ ರೋಣ ವತಿಯಿಂದ ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ಸ್ಥಳೀಯ ಗ್ರಾಪಂ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ ಕನಿಷ್ಠ 10ರಿಂದ 12 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಜಾನುವಾರುಗಳ ಪಾಡು ಹೇಳತೀರದಾಗಿದೆ. 10ರಿಂದ 12 ದಿನಕ್ಕೊಮ್ಮೆ ನೀರು ಬಿಟ್ಟಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದದಾದರು ಹೇಗೆ? ಕೆಲವೊಂದು ಮನೆಯವರು ನೀರು ಸಂಗ್ರಹಿಸಲು 2ರಿಂದ 3 ಸಿಂಟೆಕ್ಸ್ ಟ್ಯಾಂಕ್ ಇಟ್ಟಿಕೊಂಡಿದ್ದರೂ ವಾರದೊಳಗೆ ಖಾಲಿಯಾಗುತ್ತವೆ. ಇಲ್ಲಿ ಹೈನುಗಾರಿಕೆ ಹೆಚ್ವಾಗಿರುವುದರಿಂದ ಜಾನುವಾರುಗಳ ಸಂಖ್ಯೆ ಹೆಚ್ಚಿದೆ. ಇದರಿಂದ ನೀರು ಸಮರ್ಪಕವಾಗಿ ಸಾಲುತ್ತಿಲ್ಲ. ಈ ಕುರಿತು ಇಲ್ಲಿನ ಜನತೆ ಸಾಕಷ್ಟು ಬಾರಿ ಗ್ರಾಪಂ, ತಾಪಂಗೆ ಮನವಿ ಸಲ್ಲಿಸಿದರೂ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ನಾವು ಮೊದಲಿದ್ದ ಗ್ರಾಮದಲ್ಲಿ ನೀರಿನ ಕಾಟದಿಂದ ಇಲ್ಲಿ (ನವಗ್ರಾಮ) ಬಂದಿದ್ದೇವೆ. ಆದರೆ ಇಲ್ಲಿ ನಮಗೆ ಕುಡಿಯಲು ನೀರು ಸಿಗುತ್ತಿಲ್ಲ, ನೀರಿಗಾಗಿ ಎಲ್ಲೆಂದರಲ್ಲಿ ಉದ್ಯೋಗ ಬಿಟ್ಟು ಅಲೆಯಬೇಕಾದ ಪರಿಸ್ಥಿತಿ ತಪ್ಪುತ್ತಿಲ್ಲ. ಜನ ನೀರು ಬೇಕಾದಲ್ಲಿ ರೊಕ್ಕಾ ಕೊಟ್ಟಾದರೂ ಕುಡಿಯುತ್ತಾರೆ. ದನಕರು ಏನು ಮಾಡಬೇಕು? ಹೇಗೆ ಬದುಕಬೇಕ್ರಿ ಎಂದು ದ್ರಾಕ್ಷಾಯಿಣಿ ಪುರಾಣಿಕಮಠ, ರತ್ನಾ ಹನಮಂತಗೌಡ್ರ ಅಳಲು ತೋಡಿಕೊಂಡರು.
ಸಮಸ್ಯೆಗಳು ಸಾಕಷ್ಟು: ಅಂಗನವಾಡಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಕಿರಿಯ ಮಹಿಳಾ ಪ್ರಾಥಮಿಕ ಆರೋಗ್ಯ ಸಹಾಯಕಿಯರ ಉಪಕೇಂದ್ರವಿದ್ದು, ಇಲ್ಲಿ ವೈದ್ಯರೇ ಇರುವುದಿಲ್ಲ. ಆರೋಗ್ಯದಲ್ಲಿ ತೊಂದರೆ ಉಂಟಾದಲ್ಲಿ ದೂರದ ಹೊಳೆಆಲೂರಿಗೆ ಹೋಗಿ ಬರುತ್ತಿದ್ದಾರೆ, ಬಸ್ ನಿಲ್ದಾಣವಿಲ್ಲ, ಹೊಳೆಆಲೂರ, ರೋಣ, ಶಿರೋಳಕ್ಕೆ ಪ್ರೌಢಶಾಲೆ, ಕಾಲೇಜ್ ಹೋಗಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. 10ಕ್ಕೂ ಹೆಚ್ಚು ಸಾರ್ವಜನಿಕ ನೀರಿನ ಸಿಸ್ಟನ್ ಗಳಿದ್ದರೂ ನೀರು ಪೂರೈಕೆಯಿಲ್ಲ. ಇಲ್ಲಿನ ಒಂದೂ ರಸ್ತೆಯೂ ಕಾಂಕ್ರಿಟ್ ಭಾಗ್ಯ ಕಂಡಿಲ್ಲ. ರಸ್ತೆ ಬದಿ ಚರಂಡಿ ನಿರ್ಮಿಸಿಲ್ಲ. ಅಲ್ಲಿಲ್ಲಿ ಜಾಲಿ ಕಂಟೆ ಬೆಳೆದಿವೆ. ಪಡಿತರ ವಿತರಣೆ ನ್ಯಾಯಬೆಲೆ ಅಂಗಡಿ ಇಲ್ಲಿಲ್ಲ. ಪಡಿತರ ತರಲು ಮೂಲ ಗ್ರಾಮಕ್ಕೆ 4 ಕಿಮೀ ದೂರ ಹೋಗಿ ಬರುತ್ತಿದ್ದಾರೆ. ಚರಂಡಿ ಇಲ್ಲದ್ದರಿಂದ ಮಳೆ ನೀರು ಎಲ್ಲೆಂದರಲ್ಲಿ ಹರಿಯುವದಲ್ಲದೇ ಮನೆಗಳಿಗೂ ನುಗ್ಗುತ್ತದೆ. 10ರಿಂದ 12 ದಿನಕ್ಕೊಮ್ಮೆ ನೀರು ಬಿಡ್ತಾರರಿ, ಮನುಷ್ಯರು, ದನಕರಗಳಿಗೆ ಬಾಳಾ ತೊಂದರೆಯಾಗೇತ್ರಿ. ಬಾಯಿ ಇಲ್ಲದ ದನದ ಗೋಳು ನೋಡಾಕಾಗವಲ್ದ್ರಿ, ಹಿಂಗಾದ್ರ ಬದುಕೋದು ಹೆಂಗ್ರಿ. ಉದ್ಯೋಗ ಬಿಟ್ಟು ನೀರು ಇದ್ದಲ್ಲಿಗೆ ಹೋಗೋದೇ ನಮ್ಮ ಕೆಲಸ ಆಗೇತ್ರಿ ಎಂದು ಗಾಡಗೋಳಿ ನವಗ್ರಾಮ ನಿವಾಸಿ ಶಾರವ್ವ ದೇಸಾಯಿ ಹೇಳಿದರು.ಗಾಡಗೋಳಿಗೆ ನೀರು ಪೂರೈಸುವ ಡಿಬಿಒಟಿ ಪೈಪ್‌ಲೈನ್ 2 ಇಂಚಿನದ್ದು ಮಾತ್ರ ಇದ್ದು, ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಕೂಡಲೇ 4 ಇಂಚಿನ ಪೈಪ್ ಲೈನ್ ಅಳವಡಿಸಿ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಖಾತ್ರಿ ಯೋಜನೆಯಡಿ ರಸ್ತೆ ಹಾಗೂ ಗಟಾರ ನಿರ್ಮಾಣಕ್ಕೆ ಜಿಪಂಗೆ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೊಳೆಮಣ್ಣೂರ ಗ್ರಾಪಂ ಪಿಡಿಒ ಶಿವನಗೌಡ ಮೆಣಸಗಿ ಹೇಳಿದರು.