ಸಾರಾಂಶ
ವಿಶ್ವನಾಥ ಮುನವಳ್ಳಿ
ಕನ್ನಡ ಪ್ರಭ ವಾರ್ತೆ ಮುಧೋಳರೈತರ ನಿರಂತರ ಹೋರಾಟ ಪರಿಣಾಮ ಹಿಡಕಲ್ ಜಲಾಶಯದಿಂದ ಮೇ 10ರಿಂದ ಹಂತ ಹಂತವಾಗಿ 1.5 ಟಿಎಂಸಿ ನೀರನ್ನು ಘಟಪ್ರಭ ನದಿಗೆ ಹರಿಸಿದ್ದು, ಈ ನೀರು ಸೋಮವಾರ ತಡರಾತ್ರಿ ಮುಧೋಳ ತಾಲೂಕು ತಲುಪಿದ್ದು, ಬರದಿಂದ ತತ್ತರಿಸಿದ ಈ ಭಾಗದ ರೈತರಲ್ಲಿ ಮಂದಹಾಸ ಮೂಡಿಸಿದೆ.
ಮುಧೋಳ ತಾಲೂಕಿನಲ್ಲಿ ಹರಿದಿರುವ ಘಟಪ್ರಭ ನದಿಯಲ್ಲಿ ನೀರಿಲ್ಲದೆ ಸಂಪೂರ್ಣ ಬತ್ತಿ ಹೋಗಿತ್ತು, 2023-24ನೇ ಸಾಲಿನಲ್ಲಿ ಮುಂಗಾರು, ಹಿಂಗಾರು ಸಂಪೂರ್ಣ ಕೈಕೊಟ್ಟ ಕಾರಣ ನದಿಯ ನೀರು ಬತ್ತಿ ಪ್ರಾಣಿ, ಪಕ್ಷಿಗಳು ಸೇರಿದಂತೆ ಜನ ಮತ್ತು ಜಾನುವಾರುಗಳ ಕುಡಿಯುವ ನೀರಿಗೆ ತೊಂದರೆಯಾಗಿತ್ತು. ಅಲ್ಲದೆ, ನದಿಯ ನೀರನ್ನೇ ಅವಲಂಬಿಸಿ ಬೆಳೆದ ಬೆಳೆ ನೀರಿಲ್ಲದೆ ಒಣಗಿ ಹೋಗಿದ್ದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು.ಹಿಡಕಲ್ ಜಲಾಶಯದಿಂದ ನೀರು ಬಿಡುಸುವಂತೆ ತಾಲೂಕಿನ ರೈತರು ಹಲವು ರೀತಿ ಹೋರಾಟ ನಡೆಸಿದ್ದರು. ಕಚೇರಿ ಎದುರು ಪ್ರತಿಭಟನೆ, ರಸ್ತೆ ಸಂಚಾರ ಸ್ಥಗಿತ, ತಹಸೀಲ್ದಾರರ ಕಚೇರಿಗೆ ಮುತ್ತಿಗೆ,, ತಹಸೀಲ್ದಾರ ಕಚೇರಿಯಲ್ಲಿಯೇ ವಾಸ್ತವ್ಯ ಹೀಗೆ ನಿರಂತರ ಹೋರಾಟ ನಡೆಸಿ ಹಿಡಕಲ್ ಜಲಾಶಯದಿಂದ ನೀರು ಹರಿಸುವಂತೆ ಒತ್ತಡ ಹೇರಿದ್ದರು.ಇದರ ಪರಿಣಾಮ ಸರ್ಕಾರ ಮೇ 10ರಂದು ಸಂಜೆ 6 ಗಂಟೆಗೆ ಘಟಪ್ರಭ ನದಿಗೆ 1.5 ಟಿಎಂಸಿಯಷ್ಟು ನೀರು ಹರಿಸಿದೆ. ಈಗ ಘಟಪ್ರಭ ನದಿಯ ಒಡಲು ತುಂಬಿ ಹರಿಯುತ್ತಿರುವುದರಿಂದ ರೈತರು ಖುಷಿಯಾಗಿದ್ದಾರೆ.
ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ:ನದಿ ಪಾತ್ರದ ಜನ, ಜಾನುವಾರು ಮತ್ತು ರೈತರು ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ನೀರು ವ್ಯರ್ಥ ಮಾಡಬಾರದು. ನದಿಗೆ ನೀರು ಬಿಟ್ಟಿರುವುದರಿಂದ ಮುಧೋಳ ನಗರಕ್ಕೆ ಕುಡಿಯುವ ನೀರು ಪೂರೈಸುವ ವೆಂಕಟೇಶ ಕೆರೆಯನ್ನು ಜಾಲಿಬೇರ ಬಳಿ ಹರಿದಿರುವ ನದಿಯಿಂದ ಜಾಕವೆಲ್ ಮೂಲಕ ತುಂಬಿಸಲಾಗುತ್ತದೆ, ನದಿಗೆ ನೀರು ಹರಿದು ಬರುತ್ತಿರುವುದರಿಂದ ಭೂಮಿಯ ಅಂತರ್ಜಲ ಮಟ್ಟವು ಏರಿಕೆ ಆಗಿ ಕೊಳವೆಬಾವಿಗಳಲ್ಲಿ ನೀರು ಬರಲಿದೆ ಎಂಬ ಆಶಾಭಾವ ರೈತರಲ್ಲಿದೆ.ಹಿಡಕಲ್ ಜಲಾಶಯದಿಂದ ಈಗ ಬಿಟ್ಟಿರುವ ನೀರು ಜಿಲ್ಲೆಯ ಕೊನೆಯ ಗ್ರಾಮದವರೆಗೆ ತಲುಪುವುದು ಕಷ್ಟ. ಹೀಗಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವಂತೆ ತಾಲೂಕು ಆಡಳಿತದಿಂದ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಜನರು ಸಹ ನೀರನ್ನು ಸಮರ್ಪಕವಾಗಿ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿ ಸಹಕರಿಸಬೇಕು.
-ವಿನೋದ ಹತ್ತಳ್ಳಿ ತಹಸೀಲ್ದಾರ್‌ನದಿ ಸಂಪೂರ್ಣ ಬತ್ತಿದ್ದರಿಂದ ಪ್ರಾಣಿ, ಪಕ್ಷಿ ಸೇರಿದಂತೆ ಜನ,ಜಾನುವಾರುಗಳು ನೀರಿಲ್ಲದೆ ಪರದಾಡುವಂತಾಗಿತ್ತು. ಈಗ ನದಿಗೆ ನೀರು ಬಂದಿದ್ದರಿಂದ ಎಲ್ಲರಿಗೂ ಋುಷಿ ತಂದಿದೆ. ಅದಕ್ಕಾಗಿ ತಾಲೂಕು ಹಾಗೂ ಜಿಲ್ಲಾ ಆಡಳಿತಕ್ಕೆ ರೈತರ ಪರವಾಗಿ ಅಭಿನಂದಿಸುತ್ತೇನೆ.-ಎಸ್.ಎಸ್.ಅಕ್ಕಿಮರಡಿ ಪ್ರಗತಿಪರ ರೈತ ಗುಲಗಾಲಜಂಬಗಿಘಟಪ್ರಭ ನದಿಗೆ ನೀರು ಬಿಟ್ಟಿರುವುದರಿಂದ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲಕವಾಗಿದೆ, ನದಿಯ ನೀರನ್ನೇ ನಂಬಿ ಬೆಳೆದ ಬೆಳೆಗಳು ಕಮರಿ ಹೋಗುತ್ತಿತ್ತು. ಈಗ ನೀರು ಬಂದಿದ್ದರಿಂದ ಬೆಳೆಗೆ ಮರುಜೀವ ಬಂದಂತಾಗಿದೆ.
-ವೆಂಕಣ್ಣ ನ್ಯಾಮಗೌಡ ಪ್ರಗತಿಪರ ರೈತ ಮಳಲಿ