ಸಾರಾಂಶ
ಕೋಲಾರ: ಚಳಿಗಾಲದ ಅಧಿವೇಶಕ್ಕೆ ಪೂರ್ವಭಾವಿಯಾಗಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅವಲೋಕನಕ್ಕಾಗಿ ನ.೨೫ರಂದು ಚಿಕ್ಕಬಳ್ಳಾಪುರದ ಕೆ.ಇ.ಬಿ. ಸಮುದಾಯ ಭವನದಲ್ಲಿ ಬೆಳಗ್ಗೆ ೧೦ ಗಂಟೆಗೆ ಶಾಶ್ವತ ನೀರಾವರಿ ದುಂಡು ಮೇಜಿನ ಸಭೆಯನ್ನು ಆಯೋಜಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಆಂಜನೇಯರೆಡ್ಡಿ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಭೆಗೆ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಮೂರು ಜಿಲ್ಲೆಗಳ ಎಲ್ಲಾ ಜನಪ್ರತಿನಿಧಿಗಳನ್ನು ಹಾಗೂ ಆಸಕ್ತ ಎಲ್ಲಾ ಪ್ರಜ್ಞಾವಂತರನ್ನು ಆಹ್ವಾನಿಸಲಾಗಿದೆ ಎಂದರು.ಬಯಲು ಸೀಮೆಯ ಈ ಮೂರು ಜಿಲ್ಲೆಗಳು ಬರಪೀಡಿತ ಜಿಲ್ಲೆಗಳೆಂಬ ಹಣೆಪಟ್ಟಿ ಹೊತ್ತಿದ್ದು ಕಳೆದ ೨೦ ವರ್ಷದಿಂದ ರೈತರು ಕೃಷಿಗೆ ನೀರಾವರಿ ಸೌಲಭ್ಯಗಳಿಲ್ಲದೆ ದೂರವಾಗಿದ್ದಾರೆ. ಕುಡಿಯುವ ನೀರಿನ ಆಭಾವ ಉಂಟಾಗಿದ್ದು ಅಂತರ್ಜಲದ ನೀರು ಗುಣಮಟ್ಟ ಕಳೆದು ಕೊಂಡಿದೆ. ದನಕುರುಗಳಿಗೂ ನೀರಿಲ್ಲದಂತ ದುರಂತ ಪರಿಸ್ಥಿತಿ ನಿರ್ಮಾಣವಾಗಿತ್ತು, ಇದಕ್ಕೆ ಸರ್ಕಾರ ಆಡಳಿತದಲ್ಲಿನ ತಾರತಮ್ಯಗಳೇ ಕಾರಣವಾಗಿದೆ ಎಂದರು.
ರಾಜ್ಯ ಸರ್ಕಾರವು ಪ್ರತಿ ವರ್ಷ ಸಾವಿರಾರು ಕೋಟಿ ರೂ ನೀರಾವರಿ ಯೋಜನೆಗಳಿಗೆ ವೆಚ್ಚ ಮಾಡುತ್ತಿದೆ, ೧೦೩೫ ಟಿ.ಎಂ.ಸಿ. ರಾಜ್ಯ ನೀರಾವರಿಗೆ ಬಳಕೆ ಮಾಡುತ್ತಿದೆ. ೧ ಟಿ.ಎಂ.ಸಿ. ನೀರಿನಲ್ಲಿ ಸುಮಾರು ೧೨೦೦ ಎಕರೆ ಕೃಷಿ ಮಾಡಬಹುದಾಗಿದೆ, ಆದರೆ ನಮ್ಮ ಭಾಗಕ್ಕೆ ಸ್ವಾತಂತ್ರ್ಯ ಬಂದ ನಂತರದಿಂದಲೂ ಯಾವುದೇ ನೀರಾವರಿ ಯೋಜನೆಗಳನ್ನು ಜಾರಿ ಮಾಡದೆ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ ವಂಚಿತರಾಗಿದ್ದೇವೆ ಎಂದು ಕಿಡಿಕಾರಿದರು.ಮೂರು ಜಿಲ್ಲೆಯ ಜನಪ್ರತಿನಿಧಿಗಳು ರಾಜ್ಯ-ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ. ಈ ಸಂಬಂಧವಾಗಿ ಶಾಶ್ವತ ನೀರಾವರಿ ದುಂಡು ಮೇಜಿನ ಸಭೆಯಲ್ಲಿ ಎಚ್ಚೆತ್ತುಕೊಂಡು ಅಧಿವೇಶನದಲ್ಲಿ ನೀರಾವರಿ ಸಮಸ್ಯೆಗಳ ಬಗ್ಗೆ ವಸ್ತುನಿಷ್ಠವಾದ ಚರ್ಚೆಗಳನ್ನು ಮಾಡುವ ದೆಸೆಯಲ್ಲಿ ಈ ಸಭೆ ಆಯೋಜಿಸಿದೆ ಎಂದು ತಿಳಿಸಿದರು.
ನೀರಾವರಿ ತಜ್ಞ ಡಾ.ಪರಮಶಿವಯ್ಯರನ್ನು ಕಳೆದ ೧೯೯೬ರಲ್ಲಿ ಕರೆಸಿ ನೀರಾವರಿ ಯೋಜನೆಗಳನ್ನು ರೂಪಿಸಲು ಪ್ರಯತ್ನಿಸಲಾಗಿದೆ. ಆಗ ಅಂತರ್ಜಲಮಟ್ಟ ೧೫೦೦ ಅಡಿಗಳಿಗೊ ಹೆಚ್ಚು ಪಾತಾಳ ಸೇರಿತ್ತು. ಆಗ ರೂಪಿಸಲಾದ ಎತ್ತಿನ ಹೊಳೆ ನೀರಾವರಿ ಯೋಜನೆ ಕಳೆದ ೧೫ ವರ್ಷದಿಂದ ಆಮೆಯ ವೇಗದಲ್ಲಿ ಕಾಮಗಾರಿಗಳು ನೆನಗುದಿಗೆ ಬಿದ್ದಿದೆ. ಇದನ್ನು ಆಗಲೇ ನಾವುಗಳು ಈ ಯೋಜನೆಯು ಅವೈಜ್ಞಾನಿಕ ಹಾಗೂ ತಾಂತ್ರಿಕ ದೋಷದಿಂದ ಕೂಡಿದೆ ಎಂದು ಜಲ ವಿಜ್ಞಾನ ಸಮಿತಿಗಳು ಪ್ರತಿಪಾದಿಸಿದರೂ ಸಹ ಆಡಳಿತರೂಢ ಸರ್ಕಾರಗಳು ಗಮನಹರಿಸಲಿಲ್ಲ ಎಂದು ದೂರಿದರು.ಸರ್ಕಾರವು ಈ ಯೋಜನೆಗೆ ೮ ಸಾವಿರ ಕೋಟಿ ರೂ.ಗಳ ಡಿ.ಪಿ.ಆರ್ ರಚಿಸಿ ೩ ವರ್ಷದ ಅವಧಿಯಲ್ಲಿ ಕಾಮಗಾರಿಗಳು ಪೂರ್ಣಗೊಳಿಸಿ ನೀರು ಕೊಡುವುದಾಗಿ ಘೋಷಿಸಿತ್ತು. ಆದರೆ ಈ ಯೋಜನೆಯ ವೆಚ್ಚವು ೮ ರಿಂದ ೧೩ ಸಾವಿರ ಕೋಟಿ ಆಗಿ ಮತ್ತೆ ೨೩ ಸಾವಿರ ಕೋಟಿ ರು.ಗಳಿಗೆ ಪರಿಷ್ಕರಣೆ ಮಾಡಲಾಗಿದೆ. ಇದಕ್ಕೆ ೨ ಲಕ್ಷ ಕೋಟಿ ರು. ವೆಚ್ಚ ಮಾಡಿದರೂ ನಮ್ಮ ಜಿಲ್ಲೆಗಳಿಗೆ ನೀರು ತರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಕೆ.ಸಿ.ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ಯೋಜನೆಗಳನ್ನು ೩ನೇ ಹಂತದಲ್ಲಿ ಶುದ್ಧೀಕರಿಸಿ ಕೆರೆಗಳನ್ನು ತುಂಬಿಸಬೇಕೆಂದು ಸೂಚಿಸಲಾಗಿತ್ತು. ಈ ಕಲ್ಮಶ ನೀರಿನಲ್ಲಿ ಅನೇಕ ಬಗೆಯ ವಿಷಕಾರಿಯ ಖನಿಜಾಂಶಗಳು ಮಿಶ್ರಣವಾಗಿದ್ದು, ಜನಜಾನುವಾರಿಗೆ ಅಪಾಯಕಾರಿಯಾಗಿದೆ ಎಂಬ ವರದಿಗಳನ್ನು ತಿರಸ್ಕರಿಸಿ ೨ ಹಂತದಲ್ಲಿ ಮಾತ್ರ ಸಂಸ್ಕರಿಸಿ ನೀರನ್ನು ಕೆರೆಗಳಿಗೆ ಹರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ವಾಡಿಕೆಗಿಂತ ೨-೩ ಪಟ್ಟು ಹೆಚ್ಚುವರಿಯಾಗಿ ಮಳೆಯಾಗಿದ್ದರಿಂದ ತ್ಯಾಜ್ಯ ನೀರಿನ ಗುಣಮಟ್ಟ ಸುಧಾರಣೆಯಾಗಿದ್ದು, ಯಾವುದೇ ವಿಧವಾದ ಹಾನಿಯಾಗಲಿಲ್ಲ ಎಂದು ಸ್ವಷ್ಟೀಕರಿಸಿದರು.ಮೂರು ಜಿಲ್ಲೆಗಳಿಗೆ ಸಂಬಂಧಿಸಿದ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ವಿಶೇಷ ಅಧಿವೇಶನದ ಅಗತ್ಯವಿದೆ. ಡಾ.ಪರಮಶಿವಯ್ಯನವರ ಅಧ್ಯಯನ ಕೇಂದ್ರವನ್ನು ಕಳೆದ ೪೦ ವರ್ಷಗಳ ಹಿಂದೆಯೇ ಪ್ರಾರಂಭಿಸಿದ್ದು ಅಧ್ಯಯನದ ವರದಿಗಳನ್ನು ಪರಮಾರ್ಶಿಸಬೇಕಾಗಿದೆ.ಕೃಷ್ಣ ಬಿ ಸ್ಕೀಮ್ ಯೋಜನೆಯಲ್ಲಿ ನಮ್ಮ ಮೂರು ಜಿಲ್ಲೆಗಳಿಗೆ ನೀರು ಲಭ್ಯವಾಗಲಿದೆ, ಇದಕ್ಕೆ ಸಂಬಂಧಿಸಿದಂತೆ ಆಗಲೆ ಡಿ.ಪಿ.ಆರ್. ಸಹ ಮಾಡಲಾಗಿತ್ತು ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸಂಚಾಲಕ ಹೊಳಲಿ ಪ್ರಕಾಶ್, ರೈತ ಸಂಘದ ಮುಖಂಡರಾದ ಅಬ್ಬಣಿ ಶಿವಪ್ಪ, ನಾರಾಯಣಗೌಡ, ರಾಮುಶಿವಣ್ಣ, ನಾರಾಯಣಸ್ವಾಮಿ, ಕನ್ನಡದ ವೆಂಕಟಪ್ಪ, ನಗರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್, ಎ.ಪಿ.ಎಂ.ಸಿ. ಪುಟ್ಟಣ್ಣ, ಲಯನ್ಸ್ ಅಧ್ಯಕ್ಷ ಬಿ.ಡಿ.ವೆಂಕಟೇಶ್, ವಾಣಿಜ್ಯ ಉದ್ಯಮಿಗಳ ಸಂಘದ ಮನೋಹರ್, ಅನೂರು ದೇವರಾಜ್ ಶಾಸ್ತ್ರಿ, ಶಿವಕುಮಾರ್ ಗೌಡ, ರಮೇಶ್ ಇದ್ದರು.