ಸಾರಾಂಶ
ಪ್ರವಾಸಿಗರನ್ನು ಸೆಳೆಯುವ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಈ ಸಲ ಭಾರಿ ಮಳೆ ಹಾಗೂ ವಯನಾಡು ದುರಂತ ಪರಿಣಾಮ ಸುಮಾರು 2 ಲಕ್ಷಕ್ಕೂ ಅಧಿಕ ಪ್ರವಾಸಿಗರ ಸಂಖ್ಯೆ ಕೊರತೆ ಕಂಡುಬಂದಿದೆ.
ಮಡಿಕೇರಿ : ಪ್ರವಾಸಿಗರನ್ನು ಸೆಳೆಯುವ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಈ ಸಲ ಭಾರಿ ಮಳೆ ಹಾಗೂ ವಯನಾಡು ದುರಂತ ಪರಿಣಾಮ ಸುಮಾರು 2 ಲಕ್ಷಕ್ಕೂ ಅಧಿಕ ಪ್ರವಾಸಿಗರ ಸಂಖ್ಯೆ ಕೊರತೆ ಕಂಡುಬಂದಿದೆ.
ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಸುರಿದ ಸುರಿದ ಭಾರಿ ಮಳೆಯ ಜೊತೆಗೆ, ಕೊಡಗಿನ ಪಕ್ಕದಲ್ಲೇ ಇರುವ ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತದ ಘೋರ ದುರಂತ ಕೊಡಗು ಪ್ರವಾಸೋದ್ಯಮದ ಮೇಲೆ ಕರಿನೆರಳು ಬೀರಿದೆ. ಕಳೆದ ಬಾರಿ ಕೊಡಗು ಜಿಲ್ಲೆಗೆ ಪ್ರವಾಸಿಗರು ಭೇಟಿ ನೀಡಿದ ಸಂಖ್ಯೆಗೆ ಹೋಲಿಸಿದರೆ ಈ ಬಾರಿ ಅದರ ಅರ್ಧದಷ್ಟೂ ಪ್ರವಾಸಿಗರು ಕೊಡಗು ಜಿಲ್ಲೆಗೆ ಭೇಟಿ ನೀಡಿಲ್ಲ. ಹೀಗಾಗಿ ಕೊಡಗಿನ ವ್ಯಾಪಾರ ವಹಿವಾಟಿನ ಮೇಲೆ ಸಾಕಷ್ಟು ಹೊಡೆತ ಬಿದ್ದಿದೆ.
ದೇಶದ ವಿವಿಧ ಭಾಗಗಳಿಂದ ಹಿಡಿದು ವಿದೇಶಗಳಿಂದಲೂ ಬರುವ ಪ್ರವಾಸಿಗರನ್ನು ಇಲ್ಲಿನ ಬೆಟ್ಟ, ಗುಡ್ಡ, ನದಿ ತೊರೆ, ತಂಪು ಪ್ರಾಕೃತಿಕ ಸೌಂದರ್ಯ ಇವೆಲ್ಲವೂ ಸೆಳೆಯುತ್ತವೆ. ಇದೆಲ್ಲವನ್ನೂ ಕಣ್ತುಂಬಿಕೊಂಡು ಸಂಭ್ರಮಿಸಲು ಅಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರು. ಬಹುತೇಕ ಬೆಟ್ಟಗುಡ್ಡಗಳಿಂದಲೇ ಆವೃತವಾಗಿರುವ ಕೊಡಗು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಕೂಡ ಈ ಬೆಟ್ಟ ಗುಡ್ಡಗಳಲ್ಲೇ ಇವೆ. ಯಾವಾಗ ಕೇರಳ ರಾಜ್ಯದ ವಯನಾಡಿನಲ್ಲಿ ಭೂಕುಸಿತ ಆಯಿತೋ ಅಂದಿನಿಂದ ಕೊಡಗಿಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿತವಾಗಿದೆ.
ಪ್ರವಾಸಿಗರಿಲ್ಲದೆ ಬಿಕೋ:
ಬೆಟ್ಟ ಗುಡ್ಡಗಳಲ್ಲಿ ಇರುವ ಅಬ್ಬಿಫಾಲ್ಸ್, ರಾಜಾಸೀಟು, ಮಾಂದಲ್ ಪಟ್ಟಿ ಸೇರಿದಂತೆ ಜಿಲ್ಲೆಯ 22ಕ್ಕೂ ಹೆಚ್ಚು ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ. ಪ್ರವಾಸಿಗರು ಬಂದರೂ ಬೆರಳೆಣಿಕೆಯಷ್ಟು ಜನರು ಮಾತ್ರವೇ ಬರುತ್ತಿದ್ದಾರೆ. 2024 ರ ಜನವರಿಯಿಂದ ಇಲ್ಲಿವರೆಗೆ ಕೇವಲ 13-14 ಲಕ್ಷ ಪ್ರವಾಸಿಗರು ಮಾತ್ರವೇ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಅಂದಾಜು 2 ಲಕ್ಷ ಪ್ರವಾಸಿಗರ ಕೊರತೆ ಕಂಡುಬಂದಿದೆ ಎಂದು ಕೊಡಗು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಅನಿತಾ ಭಾಸ್ಕರ್ ತಿಳಿಸಿದ್ದಾರೆ.
ಪ್ರವಾಸಿಗರ ಕೊರತೆಯಿಂದ ಬಹುತೇಕ ಹೋಂಸ್ಟೇ, ರೆಸಾರ್ಟ್ಗಳು ಕೂಡ ಇರುವುದೇ ಬೆಟ್ಟಗುಡ್ಡಗಳ ಮೇಲೆ ಆದ್ದರಿಂದ ಅವುಗಳು ಕೂಡ ಖಾಲಿ ಹೊಡೆಯುತ್ತಿವೆ. ಇದರಿಂದ ಹೋಂಸ್ಟೇ, ರೆಸಾರ್ಟ್, ಹೊಟೇಲ್ ಸೇರಿದಂತೆ ವಿವಿಧ ವಿಭಾಗಗಳ ವ್ಯಾಪಾರಸ್ಥರು ನಷ್ಟದಲ್ಲಿ ಇದ್ದೇವೆ ಎನ್ನುತ್ತಿದ್ದಾರೆ.
ಆ.15ರಿಂದ ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ಸಾದ್ಯತೆ ಕಂಡುಬಂದಿದೆ. ಜಿಲ್ಲೆಯ ಬಹುತೇಕ ಹೋಟೆಲ್, ಹೋಂಸ್ಟೇ ಹಾಗೂ ರೆಸಾರ್ಟ್ ಗಳು ಭರ್ತಿಯಾಗಿವೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಅನಿತಾ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮಳೆ ಹಾಗೂ ವಯನಾಡು ದುರಂತ ಪರಿಣಾಮದಿಂದಾಗಿ ಕೊಡಗು ಜಿಲ್ಲೆಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಆ.15ರಿಂದ ಹೆಚ್ಚು ಪ್ರವಾಸಿಗರು ಆಗಮಿಸುವ ಸಾಧ್ಯತೆಯಿದ್ದು, ಹಲವಾರು ಹೊಟೇಲ್, ಹೋಂಸ್ಟೇ ಹಾಗೂ ರೆಸಾರ್ಟ್ ಗಳು ಬಹುತೇಕ ಭರ್ತಿಯಾಗಿವೆ.
-ಅನಿತಾ ಭಾಸ್ಕರ್, ಉಪ ನಿರ್ದೇಶಕಿ ಪ್ರವಾಸೋದ್ಯಮ ಇಲಾಖೆ.