ಸಾರಾಂಶ
ಹೊಸಪೇಟೆ: ಪೌರ ಕಾರ್ಮಿಕರು ಪ್ರತಿದಿನ ಸ್ವಚ್ಛತೆ ಮಾಡುವುದರಿಂದ ನಾವು ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗುತ್ತಿದೆ. ಅವರು ಇಲ್ಲದಿದ್ದರೆ ಜೀವನ ತುಂಬ ಕಷ್ಟವಾಗುತ್ತದೆ. ಅವರು ಮಾಡುವ ಕೆಲಸ ಬೇರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.ರಾಜ್ಯ ಪೌರ ನೌಕರರ ಸಂಘ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ನಗರಸಭೆ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪೌರ ಕಾರ್ಮಿಕರು ಪ್ರತಿ ದಿನ ಕೆಲಸ ಮಾಡುವುದರಿಂದ ಉತ್ತಮ ವಾತಾವರಣ, ಸ್ವಚ್ಛ ಮತ್ತು ಆರೋಗ್ಯಕರ ಬದುಕು ನಡೆಸುತ್ತಿದ್ದೇವೆ. ಇದನ್ನು ತಿಳಿದುಕೊಂಡು ಸಾರ್ವಜನಿಕರು ಕೂಡ ಅವರಿಗೆ ಸಹಕರಿಸಬೇಕು. ಕಾಂಗ್ರೆಸ್ ಸರ್ಕಾರ ನಿಮ್ಮ ಜೊತೆ ಇರಲಿದೆ. ಪೌರ ಕಾರ್ಮಿಕರು ಇಲ್ಲದಿದ್ದರೆ ಜೀವನ ತುಂಬಾ ಕಷ್ಟ. ಕಾಂಗ್ರೆಸ್ ನಿಮ್ಮ ಜತೆ ಇರಲಿದೆ. ಪೌರಕಾರ್ಮಿಕರಿಗೆ 167 ಮನೆ ಮಂಜೂರಾಗಿವೆ ಎಂದರು.ಕಸ ತೆಗೆಯುವುದು, ತ್ಯಾಜ್ಯದ ಕೆಲಸ ಯಾರೂ ಮಾಡುವುದಿಲ್ಲ. ಇಂತಹ ಕೆಲಸಗಳಿಂದ ಎಲ್ಲರೂ ಹಿಂದೆ ಸರಿಯುತ್ತಾರೆ. ನಿಮ್ಮ ಒಳ್ಳೆಯ ಮನಸ್ಸು, ಭಾವನೆ ಯಾವ ಜಾತಿಯಲ್ಲೂ ಇಲ್ಲ. ನೀವು ಮಾಡುತ್ತಿರುವ ಕೆಲಸ ಬೇರೆ ಯಾರಿಂದಲೂ ಸಾಧ್ಯವಿಲ್ಲ. ನಿಮಗೆ ಆತ್ಮೀಯ ಕೃತಜ್ಞತೆ ಎಂದು ಶಾಸಕರು ಹೇಳಿದರು.
ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಇದು ಕೇವಲ ಜಾತಿಯಲ್ಲ, ಬಡತನದ ಬಗ್ಗೆ ಸಮೀಕ್ಷೆ ಆಗುತ್ತಿದೆ. ಈ ಬಗ್ಗೆ ಯಾವ ಸರ್ಕಾರವೂ ಮಾಡಿಲ್ಲ. ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಅವರು ಬಡತನ ಹೋಗಲಾಡಿಸಲು ಕ್ರಮ ವಹಿಸಿದ್ದಾರೆ ಎಂದರು.ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ಸ್ವಚ್ಛ ನಗರ ಪೌರ ಕಾರ್ಮಿಕರ ಕೊಡುಗೆ ಆಗಿದೆ. ನೀವಿಲ್ಲದಿದ್ದರೆ ಇದು ಸಾಧ್ಯವಿಲ್ಲ. ನಿಮ್ಮಿಂದಲೇ ಎಲ್ಲರೂ ಸ್ವಚ್ಚ ಬದುಕು ನಡೆಸುತ್ತಿದ್ದೇವೆ ಎಂದರು.
ನಗರಸಭೆ ಅಧ್ಯಕ್ಷ ಎನ್.ರೂಪೇಶಕುಮಾರ ಮಾತನಾಡಿ, ಆರೋಗ್ಯ ಮತ್ತು ಸುರಕ್ಷಿತ ಜೀವನಕ್ಕೆ ಪೌರ ಕಾರ್ಮಿಕರು ಕಾರಣ. ಪೌರಕಾರ್ಮಿಕರಿಗೆ ಮನೆಗಳ ನಿರ್ಮಾಣಕ್ಕೆ 9 ಎಕರೆ ಜಾಗ ಮೀಸಲು ಇಡಲಾಗಿದೆ. ಶಾಸಕರು, ಡಿಸಿಯವರು ಅನುಮೋದಿಸಿ ಎಲ್ಲ ಪೌರಕಾರ್ಮಿಕರಿಗೆ ಮನೆ ಸಿಗಲು ಅವಕಾಶ ಮಾಡಿ ಕೊಡಬೇಕು. ಮುಂದಿನ ವರ್ಷಕ್ಕೆ ಎಲ್ಲರಿಗೆ ಮನೆ ಸಿಗಬೇಕು. ಶಾಸಕರ ಮುತುವರ್ಜಿಯಲ್ಲಿ ಈ ಕೆಲಸ ಆಗಬೇಕು. ನಮ್ಮ ಊರು ಸ್ವಚ್ಛ ಮಾಡುವವರ ಜೀವನವೂ ಚೆನ್ನಾಗಿರಬೇಕು ಎಂದರು.ಎಸ್ಪಿ ಎಸ್.ಜಾಹ್ನವಿ, ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಮಹಮ್ಮದ್ ಇಮಾಮ್ ನಿಯಾಜಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ನಗರಸಭೆ ಉಪಾಧ್ಯಕ್ಷ ರಮೇಶ್ ಗುಪ್ತಾ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಶಂಕ್ರಿ, ಪೌರಾಯುಕ್ತ ಯರಗುಡಿ ಶಿವಕುಮಾರ, ನಗರಸಭೆ ಸದಸ್ಯರು ಮತ್ತಿತರರಿದ್ದರು.