ತುರ್ತು ಪರಿಸ್ಥಿತಿ ವೇಳೆ ನಾವು ಯುದ್ಧಕ್ಕೆ ಸಿದ್ಧ

| Published : May 10 2025, 01:05 AM IST

ಸಾರಾಂಶ

ಭಾರತೀಯ ಸೈನಿಕರಿಗೆ ನೈತಿಕ ಬೆಂಬಲ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ನಡೆಸಲಾಗುತ್ತಿದೆ. ಇನ್ನು ತುರ್ತು ಪರಿಸ್ಥಿತಿ ಬಂದು ಮತ್ತೆ ಯುದ್ಧಕ್ಕೆ ಕಾರ್ಯಪ್ರವೃತ್ತರಾಗಲು ಕರೆ ಕೊಟ್ಟರೇ ದೇಶದ ರಕ್ಷಣೆಗಾಗಿ ನಾವೆಲ್ಲಾ ಸಿದ್ಧರಿದ್ದೇವೆ

ಕನ್ನಡಪ್ರಭ ವಾರ್ತೆ ಹಾಸನ

ಭಾರತೀಯ ಸೈನಿಕರಿಗೆ ನೈತಿಕ ಬೆಂಬಲ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ನಡೆಸಲಾಗುತ್ತಿದೆ. ಇನ್ನು ತುರ್ತು ಪರಿಸ್ಥಿತಿ ಬಂದು ಮತ್ತೆ ಯುದ್ಧಕ್ಕೆ ಕಾರ್ಯಪ್ರವೃತ್ತರಾಗಲು ಕರೆ ಕೊಟ್ಟರೇ ದೇಶದ ರಕ್ಷಣೆಗಾಗಿ ನಾವೆಲ್ಲಾ ಸಿದ್ಧರಿದ್ದೇವೆ ಎಂದು ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಎ.ಎಸ್. ಪ್ರದೀಪ್ ಸಾಗರ್ ತಿಳಿಸಿದರು.

ನಗರದ ಮಾಜಿ ಸೈನಿಕರ ಸಂಘದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಶ್ಮೀರದ ಪಹಲ್ಲಾಮ್ ನಲ್ಲಿ ಭಯೋತ್ಪಾದಕರು ನಡೆಸಿದ ಅಮಾಯಕ ಭಾರತೀಯರ ಹತ್ಯೆಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು ’ಅಪರೇಷನ್ ಸಿಂದೂರ’ ಎಂಬ ಹೆಸರಿನಲ್ಲಿ ಭಯೋತ್ಪಾದನೆಯ ಹುಟ್ಟಡಗಿಸುವ ಕಾರ್ಯಾಚರಣೆ ಕೈಗೊಂಡಿದೆ. ಉಗ್ರರ ಸುಮಾರು ಒಂಬತ್ತು ಅಡಗುತಾಣಗಳನ್ನು ಧ್ವಂಸಗೊಳಿಸಿದೆ ಎಂದರು. ನಮ್ಮ ಸೇನೆಯ ಈ ಕೆಚ್ಚೆದೆಯ ಸೈನಿಕರ ಯಶೋಗಾತೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲು ಹಾಗೂ ಯುದ್ಧದ ಕಾರ್ಮೋಡ ಆವರಿಸಿರುವ ಈ ಸಂದರ್ಭದಲ್ಲಿ ನಮ್ಮ ದೇಶದ ಸೈನಿಕರಿಗೆ ನೈತಿಕ ಬೆಂಬಲ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಬೈಕ್ ಜಾಥಾದಲ್ಲಿ ಹಾಸನ ಜಿಲ್ಲಾ ಮಾಜಿ ಸೈನಿಕರ ಸಂಘದ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳು ಭಾಗವಹಿಸುತ್ತಿದ್ದು, ಸುಮಾರು ೨೦೦ ರಿಂದ ೩೦೦ ಜನರು ಈ ಜಾಥಾದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶನಿವಾರ ಬೆಳಗ್ಗೆ ೧೦ ಗಂಟೆಗೆ ಬಿ.ಎಮ್ ರಸ್ತೆಯಲ್ಲಿರುವ ರೈಲ್ವೇ ನಿಲ್ದಾಣದ ಎದುರು ಕೆ.ಎಸ್.ಆರ್.ಟಿ.ಸಿ. ಶ್ರೀ ಆಂಜನೇಯ ಸ್ವಾಮಿ ದೇವಾಸ್ಥಾನದಿಂದ ಆರಂಭಗೊಂಡು ಶಂಕರಿಮಠ ರಸ್ತೆಯಿಂದ ಮಹಾತ್ಮ ಗಾಂಧಿ ರಸ್ತೆಯ ಮೂಲಕ ತನ್ವಿತ್ರಿಷಾ ಕಲ್ಯಾಣ ಮಂಟಪ ಸರ್ಕಲ್ನಿಂದ ಸುಬೇದಾರ್ ನಾಗೇಶ್ ವೃತ್ತ, ಮಹಾವೀರ ವೃತ್ತ ಮಾರ್ಗವಾಗಿ ಹೇಮಾವತಿ ಪ್ರತಿಮೆ ಎನ್ .ಆರ್ ಸರ್ಕಲ್, ಮೂಲಕ ಬಿ.ಎಮ್ ರಸ್ತೆಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ವಾರ್ ಮೆಮೋರಿಯಲ್ ಹಾಲ್, ಕುವೆಂಪುನಗರದಲ್ಲಿ ಅಂತ್ಯಗೊಳ್ಳುವುದು ಎಂದು ಹೇಳಿದರು.

ನಾವು ಸೈನಿಕ ವೃತ್ತಿಯಿಂದ ನಿವೃತ್ತರಾಗಿರಬಹುದು ಆದರೇ ತುರ್ತು ಪರಿಸ್ಥಿತಿ ಬಂದು ಮತ್ತೆ ಯುದ್ಧಕ್ಕೆ ಕಾರ್ಯಪ್ರವೃತ್ತರಾಗಲು ಕರೆ ಕೊಟ್ಟರೇ ದೇಶಕ್ಕಾಗಿ ನಾವೆಲ್ಲಾ ಸಿದ್ಧರಿದ್ದೇವೆ. ಇನ್ನು ತುರ್ತು ಪರಿಸ್ಥಿತಿ ವೇಳೆ ದೇಶದ ಒಳಗಿರುವ ಜನರ ಸುರಕ್ಷತೆಗಾಗಿ ಕಾಲೇಜು ವಿದ್ಯಾರ್ಥಿಗಳೂ ಸಿದ್ಧರಾಗಲು ಹಾಗೂ ರಕ್ಷಣೆಗೆ ಏನು ಮಾಡಬಹುದು ಬಗ್ಗೆ ತರಬೇತಿ ನೀಡಲು ಜಿಲ್ಲಾಧಿಕಾರಿಗಳ ಬಳಿ ಹೋಗಿ ತಿಳಿಸಲಾಗವುದು ಅವರು ಒಪ್ಪಿಗೆ ಕೊಟ್ಟರೇ ಕಾರ್ಯಕ್ರಮ ರೂಪಿಸಲು ಸಿದ್ಧರಿದ್ದೇವೆ ಎಂದು ಮಾಹಿತಿ ನೀಡಿದರು. ಇದೆ ವೇಳೆ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿಯ ತಾಲೂಕು ಅಧ್ಯಕ್ಷ ಕರೀಗೌಡ, ಉಪಾಧ್ಯಕ್ಷ ರಮೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಯೋಗರಾಜು, ಕಾಳೇಗೌಡ, ಮಾಜಿ ಜಿಲ್ಲಾಧ್ಯಕ್ಷ ನಾಗರಾಜು, ಗಂಗಾಧರ್, ಖಜಾಂಚಿ ತಿಮ್ಮೇಗೌಡ ಇದ್ದರು.