ಸಾರಾಂಶ
ಗಜೇಂದ್ರಗಡ: ಭಾರತೀಯರ ಹೆಮ್ಮೆಯ ಸಂಕೇತವಾಗಿರುವ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪ್ರಭು ಶ್ರೀರಾಮನ ಮಂದಿರ ಲೋಕಾರ್ಪಣೆ ಕಣ್ತುಂಬಿಕೊಳ್ಳುತ್ತಿರುವ ನಾವೇ ಭಾಗ್ಯವಂತರು ಎಂದು ಸ್ಥಳೀಯ ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.
ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ಬುಧವಾರ ಪಟ್ಟಣದ ೧೫ನೇ ವಾರ್ಡಿನಲ್ಲಿ ಮನೆ, ಮನೆಗೆ ತೆರಳಿ ಪವಿತ್ರ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಮ ಮಂದಿರ ನಿರ್ಮಾಣ ಎನ್ನುವುದು ಒಬ್ಬರ ಅಥವಾ ಲಕ್ಷ ಜನರ ಕನಸಾಗಿರಲಿಲ್ಲ. ಅಖಂಡ ಭಾರತದ ಕನಸು ಕಂಡ ಪ್ರತಿ ಭಾರತೀಯನ ಕನಸಾಗಿತ್ತು. ಇಂತಹ ಕನಸನ್ನು ಸಾಕಾರಗೊಳಿಸಲು ಅನೇಕ ಕರಸೇವಕರು ತಮ್ಮ ಪ್ರಾಣ ಅರ್ಪಣೆ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ರಾಮ ಮಂದಿರ ಲೋಕಾರ್ಪಣೆಗೊಳ್ಳುತ್ತಿದ್ದು, ಇಂತಹ ಸೌಭಾಗ್ಯದ ದಿನ ತರಲು ಶ್ರಮಿಸಿದ ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ ಅವರಿಗೆ ರಾಮನ ಮೇಲಿರುವ ಗೌರವ ಹಾಗೂ ಭಕ್ತಿಯಿಂದಾಗಿ ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಅಂದು ನಾವು ಆಯೋಧ್ಯೆಗೆ ಹೋಗಲು ಸಾಧ್ಯವಾಗದಿದ್ದರೂ ನಾವಿರುವ ಜಾಗದಲ್ಲೇ ರಾಮನನ್ನು ಪೂಜಿಸಿ, ದೀಪ ಹಚ್ಚುವ ಮೂಲಕ ರಾಮ ಮಂದಿರ ಉದ್ಘಾಟನೆ ಹಬ್ಬದಂತೆ ಆಚರಿಸೋಣ ಎಂದರು.
ಪುರಸಭೆ ಮಾಜಿ ಅಧ್ಯಕ್ಷೆ ಸುಜಾತಾ ಚುಂಚಾ, ಸದಸ್ಯೆ ಲೀಲಾ ಸವಣೂರ ಹಾಗೂ ಮುಖಂಡ ಉಮೇಶ ಚನ್ನುಪಾಟೀಲ ಮಾತನಾಡಿ, ಅಕ್ಷತೆ ಆಹ್ವಾನ ಮಹಾ ಅಭಿಯಾನವು ಈಗಾಗಲೇ ಚಾಲನೆಯಾಗಿದ್ದು, ಜ. ೧೫ರವೆರೆಗೆ ನಡೆಯುತ್ತಿದೆ. ರಾಮನ ಭಕ್ತರಾದ ನಾವುಗಳು ಮನೆ, ಮನೆಗೆ ಹೋಗಿ ಅಕ್ಷತೆ ಆಹ್ವಾನದ ಜತೆಗೆ ರಾಮ ಮಂದಿರ ನಿರ್ಮಾಣದ ಭಾವಚಿತ್ರ ಒಳಗೊಂಡಿರುವ ಮಾಹಿತಿಯ ಕರಪತ್ರ ಜತೆಗೆ ಪವಿತ್ರ ಅಕ್ಷತೆ ಪಟ್ಟಣದಲ್ಲಿ ವಿತರಿಸುತ್ತಿದ್ದೇವೆ ಎಂದರು.ಈ ವೇಳೆ ೧೫ನೇ ವಾರ್ಡಿನ ಬಿಜೆಪಿ ಮುಖಂಡರು ಹಾಗೂ ಬಡಾವಣೆಯ ನಿವಾಸಿಗಳಿದ್ದರು.