ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಗೃಹಲಕ್ಷ್ಮಿ ಯೋಜನೆ ಹಣ ನಮ್ಮ ಜೀವನಕ್ಕೆ ಆಧಾರವಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ನೆರವಾಗುತ್ತಿದೆ. ಆದ್ದರಿಂದ ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ಯೋಜನೆಯ ಫಲಾನುಭವಿ ಮಹಿಳೆಯರು ಮನವಿ ಮಾಡಿದ್ದಾರೆ.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರಾನಾಥ್ ಅವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಹಿಳೆಯರು ಅನಿಸಿಕೆ ವ್ಯಕ್ತಪಡಿಸಿದರು.ಮಗನ ಶಾಲಾ ಶುಲ್ಕ ಭರಿಸಿದೆ: ಕಾರ್ಯಕ್ರಮದಲ್ಲಿ ಮಾತನಾಡಿದ ಬಂಟ್ವಾಳದ ಗಾಯತ್ರಿ ಎಂಬವರು, ಗೃಹಲಕ್ಷ್ಮಿ ಯೋಜನೆಯ 10 ಕಂತುಗಳ ಹಣವನ್ನು ಕೂಡಿಟ್ಟು ಒಬ್ಬ ಮಗನ ಶಾಲಾ ಶುಲ್ಕ ಭರಿಸಿದ್ದೇನೆ. ನನ್ನಂತಹ ಒಂಟಿ ಪೋಷಕಿಯರ ಮಕ್ಕಳ ಶಿಕ್ಷಣಕ್ಕೆ ಗ್ಯಾರಂಟಿ ಯೋಜನೆ ಅತಿ ಹೆಚ್ಚು ಉಪಯೋಗವಾಗಿದೆ. ಯೋಜನೆ ಮುಂದುವರಿದರೆ ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ನೆರವಾಗಲಿದೆ ಎಂದು ಹೇಳಿದರು.
ಮಗನ ಔಷಧಿಗೆ ಖರ್ಚು: ಮೂಡುಬಿದಿರೆಯ ಲಲಿತಾ ಮಾತನಾಡಿ, ನಾನು ಕೂಲಿ ಕೆಲಸ ಮಾಡಿ ಮೂವರು ಮಕ್ಕಳಲ್ಲಿ ಒಬ್ಬಳಿಗೆ ಸಾಲ ಮಾಡಿ ಮದುವೆ ಮಾಡಿದ್ದೆ. ಮಗ ವಿಕಲಚೇತನ. ಇನ್ನೊಬ್ಬ ಮಗಳು ಇತ್ತೀಚೆಗೆ ಕೆಲಸಕ್ಕೆ ಸೇರಿದ್ದಾಳೆ. ಮಗನ ಔಷಧಿಗೆ ಮಾಸಿಕ 2000 ರು. ಖರ್ಚಾಗುತ್ತಿತ್ತು. ಇದೀಗ ಗೃಹಲಕ್ಷ್ಮಿ ಹಣ ಅದಕ್ಕೆ ಉಪಯೋಗವಾಗುತ್ತಿದೆ ಎಂದರು.ಗಂಡನ ಹತ್ರ ಕೈಚಾಚಬೇಕಿಲ್ಲ:ಮೂಡುಬಿದಿರೆ ಶಾಂತಿಗಿರಿ ಗ್ರಾಮದ ಅಶ್ವಿನಿ ಮಾತನಾಡಿ, ಮನೆಯಲ್ಲಿ ಏನಾದರೂ ಸಣ್ಣಪುಟ್ಟ ವಸ್ತು ಬೇಕಾದರೆ ಗಂಡನ ಬಳಿ ಕೇಳಬೇಕಿತ್ತು. 100 ರು. ಕೇಳಿದರೆ ಸಿಗೋದು 50 ರು. ಮಾತ್ರ. ಇದೀಗ 2 ಸಾವಿರ ರು. ನಮ್ಮ ಕೈಗೇ ಸಿಗುವುದರಿಂದ ಸಣ್ಣಪುಟ್ಟ ಖರ್ಚಿಗೆ ಯಾರಲ್ಲೂ ಕೇಳುವ ಅಗತ್ಯವಿಲ್ಲ ಎಂದು ಅನಿಸಿಕೆ ವ್ಯಕ್ತಪಡಿಸಿದರು.ಹರೇಕಳದ ಅತಿಕಾ ಮಾತನಾಡಿ, ನನಗೆ ಪತಿ ಇಲ್ಲ. ಮೂವರು ಮಕ್ಕಳು ಹಾಗೂ ಮೊಮ್ಮಕಳು ಸೇರಿ ಮನೆಯಲ್ಲಿ 10 ಮಂದಿಗೆ ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿಯಿಂದ ತುಂಬ ಪ್ರಯೋಜನವಾಗಿದೆ ಎಂದರು.
ಕೆಲಸ ಇಲ್ಲದಾಗ ಕೈಹಿಡಿದ ಗೃಹಲಕ್ಷ್ಮಿ: ಉಳ್ಳಾಲದ ಲವೀನಾ ಮಾತನಾಡಿ, ನಾವು ಕೂಲಿ ಕೆಲಸ ಮಾಡೋದು. ಮಳೆಗಾಲದಲ್ಲಂತೂ ಕೆಲಸವೇ ಇರಲ್ಲ. ಆ ಸಮಯದಲ್ಲಿ ವಿದ್ಯುತ್ ಬಿಲ್ ಕಟ್ಟಲೂ ತೊಂದರೆಯಾಗುತ್ತಿತ್ತು. ಇದೀಗ ಉಚಿತ ವಿದ್ಯುತ್ ಜತೆಗೆ ಗೃಹಲಕ್ಷ್ಮಿ, ಅನ್ನಭಾಗ್ಯದ ಯೋಜನೆಯೂ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.ಬೋಳಾರದ ಭಾರತಿ ಮಾತನಾಡಿ, ಯುವನಿಧಿ ಹೊರತುಪಡಿಸಿ ಉಳಿದೆಲ್ಲ ಗ್ಯಾರಂಟಿಗಳ ಪ್ರಯೋಜವನ್ನು ಐದು ಮಂದಿ ಸದಸ್ಯರ ತಮ್ಮ ಕುಟುಂಬ ಪಡೆಯುತ್ತಿದೆ. ನಾಲ್ಕು ಗ್ಯಾರಂಟಿಗಳಿಂದ ತಮ್ಮ ಕುಟುಂಬಕ್ಕೆ ಮಾಸಿಕ 4300 ರು.ನಂತೆ ವಾರ್ಷಿಕ 51 ಸಾವಿರ ರು. ಸರ್ಕಾರದಿಂದ ದೊರೆಯುತ್ತಿದೆ ಎಂದು ಹೇಳಿದರು.
ಜಿ.ಪಂ. ಸಿಇಒ ಡಾ. ಆನಂದ್, ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಇದ್ದರು.