ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಮ್ಮ ಪೂರ್ವಜರಿಗಿದ್ದ ಆರೋಗ್ಯದ ಅರಿವು ನಮಗೆ ಇಲ್ಲದಿರುವುದು ವಿಪರ್ಯಾಸ ಎಂದು ದಾವಣಗೆರೆ ಆಯುಷ್ ವಿಭಾಗದ ತಜ್ಞ ವೈದ್ಯಾಧಿಕಾರಿ ಡಾ.ಬಿ.ಆರ್.ಗಂಗಾಧರ್ ವರ್ಮ ಹೇಳಿದರು.ಸ್ವಯಂ ಸ್ವಾಸ್ಥ್ಯ ನೇಚರ್ ಕ್ಯೂರ್ ಫೌಂಡೇಷನ್, ಎಂ.ಆರ್.ಎಂ.ಪ್ರಕಾಶನದಿಂದ ನಗರದ ವಿವೇಕಾನಂದ ರಂಗ ಮಂದಿರದಲ್ಲಿ ರಾಷ್ಟ್ರೀಯ ಪ್ರಕೃತಿ ದಿನಾಚರಣೆ, ಡಾ.ನೀಗೂ ರಮೇಶ್ ಅವರ ಎರಡು ಕೃತಿಗಳ ಲೋಕಾರ್ಪಣೆ ಮತ್ತು ಆರೋಗ್ಯ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಪೂರ್ವಜರು ದಿನವಿಡೀ ಶ್ರಮಪಟ್ಟು ಕೆಲಸ ಮಾಡುತ್ತಿದ್ದರು. ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡುತ್ತಿದ್ದರು. ಇದೇ ಕಾರಣಕ್ಕೆ ಅವರು ನೂರು ವರ್ಷಗಳ ಆಚೆಗೂ ಬದುಕುತ್ತಿದ್ದರು. ಈಗ ನಾವು 60 ವಯಸ್ಸಿನವರೆಗೆ ಬದುಕುವುದೇ ಹೆಚ್ಚು ಎಂದು ನಾವೇ ಹೇಳುತ್ತಿದ್ದೇವೆ. ಇದೇ ಆಹಾರ ಶೈಲಿ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಯ ಆಯಸ್ಸು ಇನ್ನೂ ಕಡಿಮೆಯಾದರೂ ಆಶ್ಚರ್ಯವಿಲ್ಲ ಎಂದು ಆತಂಕದಿಂದ ನುಡಿದರು.ಇಂದಿನ ಕಾಲಘಟ್ಟದಲ್ಲಿ ಬಹುತೇಕರು ಹೃದಯದ ಸಮಸ್ಯೆ, ರಕ್ತದ ಒತ್ತಡ, ಶ್ವಾಸಕೋಶ, ಕ್ಯಾನ್ಸರ್ ಹೀಗೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸಂಪೂರ್ಣ ಆರೋಗ್ಯವಂತ ಮನುಷ್ಯರನ್ನು ಹುಡುಕುವುದೇ ಕಷ್ಟವಾಗಿದೆ. ಇಂತಹ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಎಲ್ಲರೂ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದರು.
ಆಹಾರಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ನಾವು ನೀರಿಗೆ ಕೊಟ್ಟರೆ ಬಹುತೇಕ ರೋಗಗಳನ್ನು ದೂರವಿಡುವುದಕ್ಕೆ ಸಾಧ್ಯವಿದೆ. ನೀರನ್ನು ಕುಡಿಯುವುದಕ್ಕೆ ದಿನದ ಒಂದಷ್ಟು ಸಮಯವನ್ನು ಮೀಸಲಿಡುವುದು ಅತ್ಯಗತ್ಯ. ನಾವು ಕುಡಿಯುವ ನೀರು ನಮ್ಮ ದೇಹದಲ್ಲಿ ಬೇಡವಾದ ಕಲ್ಮಶಗಳು ತುಂಬಿಕೊಂಡಿದ್ದರೆ ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ನಾವು ಸೇವಿಸುವ ಆಹಾರ ದೇಹದಲ್ಲಿ ಸಂಪೂರ್ಣವಾಗಿ ಜೀರ್ಣವಾಗದೆ ಉಳಿಯುತ್ತವೆಯೋ ಆಗ ದೇಹದಲ್ಲಿ ಬ್ಯಾಕ್ಟೀರಿಯಾಗಳು, ವೈರಸ್‌ಗಳು ಬೆಳವಣಿಗೆ ಕಾಣುತ್ತವೆ. ಇವುಗಳಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ರೋಗಗಳು ಹರಡುವುದಕ್ಕೆ ಕಾರಣವಾಗಲಿವೆ ಎಂದರು.ದೇಹದ ಚರ್ಮ, ಮೂತ್ರಪಿಂಡಗಳು, ಶ್ವಾಸಕೋಶ, ಕರುಳು ಈ ನಾಲ್ಕುಅವಯವಗಳು ಚೆನ್ನಾಗಿ ಕೆಲಸ ಮಾಡಿದರೆ ದೇಹದ ಆರೋಗ್ಯ ಚೆನ್ನಾಗಿರುತ್ತದೆ. ಚರ್ಮ ಬೆವರಿನ ಮೂಲಕ ಕಲ್ಮಶಗಳನ್ನು ಹೊರಹಾಕಿದರೆ, ಮೂತ್ರಪಿಂಡಗಳು ಮೂತ್ರದೊಂದಿಗೆ, ಶ್ವಾಸಕೋಶಗಳು ಕೆಟ್ಟ ಗಾಳಿಯನ್ನು ಹಾಗೂ ಕರುಳು ಮಲದ ಮೂಲಕ ಕಲ್ಮಶವನ್ನು ಹೊರಹಾಕುತ್ತದೆ. ಈ ನಾಲ್ಕು ಪ್ರಕ್ರಿಯೆಗಳು ಸಮರ್ಪಕವಾಗಿ ಕೆಲಸ ಮಾಡಬೇಕಾದರೆ ನಾವು ನೀರನ್ನು ಹೆಚ್ಚಾಗಿ ಸೇವಿಸುವ ಅವಶ್ಯಕತೆ ಇದೆ ಎಂದು ವಿವರಿಸಿದರು.
ಕೃತಿಗಳನ್ನು ಲೋಕಾರ್ಪಣೆ ಮಾಡಿದ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ನಮ್ಮ ಪೂರ್ವಜರು ಓದಿದವರಲ್ಲ, ಬುದ್ಧಿವಂತರಲ್ಲ. ಆದರೂ ಆರೋಗ್ಯದ ಬಗ್ಗೆ ಅಪಾರ ಜ್ಞಾನ ಅವರಲ್ಲಿತ್ತು. ಇಂದು ನಾವು ವಿದ್ಯಾವಂತರು, ಬುದ್ಧಿವಂತರಾಗಿದ್ದರೂ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಅರಿವು ನಮಗಿಲ್ಲದಿರುವುದು ದುರ್ದೈವದ ಸಂಗತಿ ಎಂದರು.ಆಧುನಿಕ ಯುಗದಲ್ಲಿ ಜನರ ಜೀವನಶೈಲಿ ಬದಲಾಗಿದೆ. ಮನೆ ಆಹಾರಕ್ಕಿಂತ ಹೋಟೆಲ್‌ಗಳಲ್ಲಿ ತಯಾರಿಸುವ ಆಹಾರದ ರುಚಿಗೆ ಮಾರುಹೋಗಿದ್ದೇವೆ. ಜಂಕ್‌ಫುಡ್, ಫಾಸ್ಟ್‌ಫುಡ್‌ಗಳಿಗೆ ಮಕ್ಕಳು ಆಕರ್ಷಿತರಾಗುವಂತೆ ಮಾಡಿದ್ದೇವೆ. ಸೊಪ್ಪು, ತರಕಾರಿ ತಿನ್ನುವವರಿಗಿಂತ ಮಾಂಸಹಾರ ತಿನ್ನುವುದು, ಮದ್ಯಸೇವನೆ ಮಾಡುವವರು ಹೆಚ್ಚಾಗಿದ್ದಾರೆ. ಆಹಾರ ಪ್ರಕ್ರಿಯೆ ಸಂಪೂರ್ಣವಾಗಿ ಬದಲಾಗಿರುವುದು ರೋಗಗಳ ಆಹ್ವಾನಕ್ಕೆ ಕಾರಣವಾಗಿದೆ ಎಂದು ನುಡಿದರು.
ಹಲವರು ಆರೋಗ್ಯ ಕಾಪಾಡಿಕೊಳ್ಳಲು ವಿಪರೀತವಾಗಿ ಕ್ರೀಡೆ, ವ್ಯಾಯಾಮ ಮಾಡುವುದು, ಜಿಮ್‌ನಲ್ಲಿ ಆಯಾಸವಾಗುವಂತೆ ಅಭ್ಯಾಸ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟೇ ವ್ಯಾಯಾಮ ಮಾಡಬೇಕು. ಅದನ್ನು ಮೀರಿ ಮಾಡಿದರೆ ಪ್ರಾಣಕ್ಕೇ ಅಪಾಯ ಎದುರಾಗಲಿದೆ ಎಂದರು.ಅಧ್ಯಕ್ಷತೆಯನ್ನು ಎಂ.ಆರ್.ಎಂ.ಪ್ರಕಾಶನದ ಎಂ.ಆರ್.ಮಂಜು ವಹಿಸಿದ್ದರು. ಸ್ವಯಂ ಸ್ವಾಸ್ಥ್ಯ ನೇಚರ್ ಸ್ಕೂಲ್ ಫೌಂಡೇಷನ್‌ಗೆ ಸಹಜ ಕೃಷಿಕ ಪಾಸಿಟಿವ್ ತಮ್ಮಯ್ಯ ಚಾಳನೆ ನೀಡಿದರು. ಆರೋಗ್ಯಹನಿ ಕೃತಿಯನ್ನು ವಿಮರ್ಶಕ ಡಾ.ಬಿ.ಸಿ.ದೊಣ್ನೇಗೌಡ ಬಿಡುಗಡೆ ಮಾಡಿದರು. ಪ್ರಕೃತಿ ಚಿಕಿತ್ಸೆಯೊಂದಿಗೆ ಪರಿಪೂರ್ಣ ಆರೋಗ್ಯ ಕುರಿತು ಲೇಖಕ ಚಂದ್ರಶೇಖರ ದ.ಕೋಹಳ್ಳಿ ಪರಿಚಯ ಮಾಡಿದರು. ಕೃತಿಗಳ ಕರ್ತೃ ಡಾ.ನೀಗೂ ರಮೇಶ್, ಪ್ರಕಾಶಕ ಎನ್.ಮಹೇಶ್ ಕುಮಾರ್ ಹಾಜರಿದ್ದರು.
ಗಾಂಧಿ ಸ್ವಯಂ ಸ್ವಾಸ್ಥ್ಯ ಪುರಸ್ಕಾರವನ್ನು ಸಹಜ ಕೃಷಿಕ ಎ.ಎಸ್.ಮಹೇಶ್ ಅವರಿಗೆ ಮೈಷುಗರ್ ಮುಖ್ಯ ಆಡಳಿತಾಧಿಕಾರಿ ವೈ.ಸಿ.ಮನುಜಶ್ರೀ ಪ್ರದಾನ ಮಾಡಿದರು. ಆರೋಗ್ಯ ಕುರಿತು ಪ್ರಕೃತಿ ಚಿಕಿತ್ಸಾ ಪ್ರಚಾರಕ ಕೆ.ಎನ್.ಗಿರಿರಾಜು, ಪಾಸಿಟಿವ್ ತಮ್ಮಯ್ಯ ಸಂವಾದ ನಡೆಸಿದರು.;Resize=(128,128))
;Resize=(128,128))