ಧರ್ಮಸ್ಥಳದ ಕಳಂಕ ತೊಳೆದುಹಾಕಿದ್ದೇವೆ: ಸಚಿವ ಚಲುವರಾಯಸ್ವಾಮಿ

| Published : Sep 01 2025, 01:03 AM IST

ಧರ್ಮಸ್ಥಳದ ಕಳಂಕ ತೊಳೆದುಹಾಕಿದ್ದೇವೆ: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಐಟಿ ತನಿಖೆ ಚುರುಕಾಗಿ ನಡೆಯುತ್ತಿದೆ. ವಿದೇಶಿ ಹಣ ಹರಿದು ಬಂದಿರುವುದಕ್ಕೆ ಸಾಕ್ಷಿ ಇದೆಯೇ. ನಮ್ಮ ಪೊಲೀಸರ ತನಿಖೆಯಷ್ಟು ಪರಿಣಾಮಕಾರಿ ಯಾರಿಂದಲೂ ಆಗಿಲ್ಲ. ಇವರು ಹೇಳಿದಾಕ್ಷಣ ಎನ್‌ಐಎಗೆ ನೀಡಲಾಗದು.

ಕನ್ನಡಪ್ರಭ ವಾರ್ತೆ ಮಂಡ್ಯ

ಧರ್ಮಸ್ಥಳಕ್ಕೆ ಸತ್ಯಯಾತ್ರೆಯನ್ನಾದರೂ ಮಾಡಲಿ, ಪಾದಯಾತ್ರೆಯನ್ನಾದರೂ ಮಾಡಲಿ. ಧರ್ಮಸ್ಥಳಕ್ಕೆ ಅಂಟಿದ ಕಳಂಕವನ್ನು ಕಾಂಗ್ರೆಸ್ ತೊಳೆದುಹಾಕಿರುವುದಂತೂ ಸತ್ಯ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಸೌಜನ್ಯ ಪ್ರಕರಣ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ನಡೆದಿತ್ತು. ಆ ಪ್ರಕರಣದಿಂದ ಧರ್ಮಸ್ಥಳದ ಬಗ್ಗೆ ಅಪನಂಬಿಕೆ ಸೃಷ್ಟಿಯಾಗಿತ್ತು. ಅದಕ್ಕೆ ಈಗ ತಿಲಾಂಜಲಿ ಹೇಳಿದ್ದೇವೆ. ಅದನ್ನು ಸ್ವಾಗತಿಸುವ ಬದಲು ಬಿಜೆಪಿ- ಜೆಡಿಎಸ್ ರಾಜಕೀಯ ಮಾಡುತ್ತಿವೆ. ಸರ್ಕಾರದ ತೀರ್ಮಾನವನ್ನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರೇ ಸ್ವಾಗತಿಸಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಸ್‌ಐಟಿ ತನಿಖೆ ಚುರುಕಾಗಿ ನಡೆಯುತ್ತಿದೆ. ವಿದೇಶಿ ಹಣ ಹರಿದು ಬಂದಿರುವುದಕ್ಕೆ ಸಾಕ್ಷಿ ಇದೆಯೇ. ನಮ್ಮ ಪೊಲೀಸರ ತನಿಖೆಯಷ್ಟು ಪರಿಣಾಮಕಾರಿ ಯಾರಿಂದಲೂ ಆಗಿಲ್ಲ. ಇವರು ಹೇಳಿದಾಕ್ಷಣ ಎನ್‌ಐಎಗೆ ನೀಡಲಾಗದು. ಅದು ನ್ಯಾಯಾಲಯದಲ್ಲಿ ನಿರ್ಧಾರವಾಗಬೇಕು. ಸಿಬಿಐ ಕೂಡ ಈ ಕೇಸ್‌ನಲ್ಲಿ ಯಶಸ್ಸನ್ನು ಕಂಡಿಲ್ಲ. ಎಸ್‌ಐಟಿ ತನಿಖೆ ಮುಗಿಸದೆ ವರದಿಯನ್ನೇ ಕೊಡದೆ ಎನ್‌ಐಎಗೆ ಕೊಡಿ ಎನ್ನುವುದು ಎಷ್ಟರಮಟ್ಟಿಗೆ ಸೂಕ್ತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಸ್‌ಐಟಿಯನ್ನು ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ ಎನ್ನುತ್ತಿದ್ದಾರಲ್ಲ ಎಂದಾಗ, ಬಿಜೆಪಿಯವರು ರಚನೆ ಮಾಡಿದಾಗ ಯಾವ ತಂಡ ಇತ್ತು ಎಂದು ಮರುಪ್ರಶ್ನಿಸಿದರು.

ಎಚ್‌ಡಿಕೆ ಎಷ್ಟು ಸಿಎಸ್‌ಆರ್ ಫಂಡ್ ತಂದಿದ್ದಾರೆ?:

ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ಎಷ್ಟು ಸಿಎಸ್‌ಆರ್ ಫಂಡ್‌ನ್ನು ಜಿಲ್ಲೆಗೆ ತಂದಿದ್ದಾರೆ. ಎಲ್ಲದಕ್ಕೂ ಸಿಎಸ್‌ಆರ್ ಫಂಡ್ ಅಂತಾರೆ. ಎಲ್ಲಿಗೂ ಅದು ಬರುತ್ತಿಲ್ಲ. ಮೈಷುಗರ್ ಪ್ರೌಢಶಾಲೆಗೆ ೨೫ ಕೋಟಿ ರು. ಅಂತಾರೆ, ರಿಂಗ್ ರಸ್ತೆಗೆ ೯೦೦ ಕೋಟಿ ರು. ಅಂತಾರೆ. ಹಣ ಬಂದಿದ್ದು ಮಾತ್ರ ಇಲ್ಲ ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಬಂದೇ ಒಂದೂವರೆ ತಿಂಗಳಾಗಿದೆ. ಅವರಿಗೆ ಆರೋಗ್ಯ ಸಮಸ್ಯೆ ಇರುವುದಾಗಿ ಕೇಳಿದ್ದೇನೆ. ಈಗ ಎಲ್ಲಾ ಕಡೆ ಓಡಾಡುತ್ತಿದ್ದಾರೆ. ಮೋದಿ ಜೊತೆಯಲ್ಲೆಲ್ಲಾ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಆದಷ್ಟು ಬೇಗ ಗುಣಮುಖರಾಗಲಿ. ಅವರು ಹೇಳಿದಂತೆ ೯೦೦ ಕೋಟಿ ರು. ತಂದರೆ ನಗರದಲ್ಲಿ ಅವರನ್ನು ಭವ್ಯವಾಗಿ ಸ್ವಾಗತಿಸುವುದಾಗಿ ಹೇಳಿದರು.

ಗೋಷ್ಠಿಯಲ್ಲಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಕೆ.ಎಂ.ಉದಯ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಇತರರಿದ್ದರು.

---------------------------

ಡಿಸಿಸಿ ಬ್ಯಾಂಕ್‌ಗೆ ಕಾಂಗ್ರೆಸ್ ಬೆಂಬಲಿತ ಹುರಿಯಾಳುಗಳು

ಸಚಿವ ಎನ್.ಚಲುವರಾಯಸ್ವಾಮಿಯಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಕನ್ನಡಪ್ರಭ ವಾರ್ತೆ ಮಂಡ್ಯ

ನವೆಂಬರ್ ತಿಂಗಳಲ್ಲಿ ನಡೆಯಲಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ೧೨ ನಿರ್ದೇಶಕ ಸ್ಥಾನದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಟ್ಟಿಯನ್ನು ಸಚಿವ ಎನ್.ಚಲುವರಾಯಸ್ವಾಮಿ ಭಾನುವಾರ ಪ್ರಕಟಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಡಿಸಿಸಿ ಬ್ಯಾಂಕ್‌ಗೆ ನವೆಂಬರ್ ೨ರಂದು ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಕೈಗಾರಿಕಾ ಕ್ಷೇತ್ರದಿಂದ ಹಾಲಿ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಬಳಕೆದಾರರ ಸಂಘದಿಂದ ಹಾಲಹಳ್ಳಿ ಅಶೋಕ್‌ಕುಮಾರ್, ನಾಗಮಂಗಲ, ಪಾಂಡವಪುರ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದಿಂದ ವಿಜಯೇಂದ್ರಮೂರ್ತಿ, ಮಂಡ್ಯ, ಮಳವಳ್ಳಿ, ಮದ್ದೂರು ಹಾಲು ಉತ್ಪಾದಕರ ಸಹಕಾರ ಸಂಘದಿಂದ ಚಲುವರಾಜು, ಎಲ್ಲಾ ತಾಲೂಕು ಕೃಷಿ ಉತ್ಪನ್ನ ಸಹಕಾರ ಸಂಘಗಳಿಂದ ದಿನೇಶ್, ಉಳಿದಂತೆ ಮಂಡ್ಯ ತಾಲೂಕಿನಿಂದ ಎಸ್.ಸತೀಶ್, ಮಳವಳ್ಳಿಯಿಂದ ಪಿ.ಎಂ.ನರೇಂದ್ರಸ್ವಾಮಿ, ಮದ್ದೂರಿನಿಂದ ಸಂದರ್ಶ, ನಾಗಮಂಗಲದಿಂದ ಸಚ್ಚಿನ್ ಚಲುವರಾಯಸ್ವಾಮಿ, ಕೆ.ಆರ್.ಪೇಟೆ ಕ್ಷೇತ್ರದಿಂದ ಅಂಬರೀಶ್, ಪಾಂಡವಪುರ, ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಕ್ಷೇತ್ರಗಳು ಒಳಪಡುವ ಮೂರು ತಾಲೂಕಿನ ಶಾಸಕರು ಒಟ್ಟಾಗಿ ಚರ್ಚಿಸಿ ತೀರ್ಮಾನ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

------------------------------------------

ವರ್ತುಲ ರಸ್ತೆಗೆ ಜಾಗ ಫೈನಲ್ ಆಗಿಲ್ಲ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದಲ್ಲಿ ನಿರ್ಮಾಣವಾಗಲಿರುವ ವರ್ತುಲ ರಸ್ತೆಗೆ ಜಾಗ ಇನ್ನೂ ಫೈನಲ್ ಆಗಿಲ್ಲ. ಅದನ್ನು ಹೊಸದಾಗಿ ಗುರುತಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ವರ್ತುಲ ರಸ್ತೆ ಮಂಡ್ಯ ಮತ್ತು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮೂಲಕ ಹಾದು ಹೋಗುವುದರಿಂದ ಆ ತಾಲೂಕಿನ ಶಾಸಕರ ಅಭಿಪ್ರಾಯವನ್ನೂ ಪಡೆಯಲಾಗುವುದು. ಕಳೆದ ೨೦ ವರ್ಷಗಳ ಹಿಂದೆ ರೂಪಿಸಿರುವ ನೀಲಿ ನಕಾಶೆಯಂತೆ ವರ್ತುಲ ರಸ್ತೆ ನಿರ್ಮಾಣವಾಗುವುದಿಲ್ಲ ಎಂದು ಖಚಿತವಾಗಿ ಹೇಳಿದರು.

ಹಳೆಯ ನೀಲಿ ನಕಾಶೆ ಹಾದುಹೋಗಿರುವ ಜಾಗದಲ್ಲಿರುವ ನಿವೇಶನಗಳನ್ನು ಮಾರುವುದಕ್ಕೆ ಹಾಗೂ ಮನೆ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದವರಿಗೆ ಸೂಚನೆ ನೀಡುವುದಾಗಿ ತಿಳಿಸಿದರು

--------------------------------------------

ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಕ್ರಮ

ಕನ್ನಡಪ್ರಭ ವಾರ್ತೆ ಮಂಡ್ಯ

ನಾಗಮಂಗಲದಲ್ಲಿ ಕಳೆದ ವರ್ಷ ಗಣೇಶ ವಿಸರ್ಜನೆ ಸಮಯದಲ್ಲಿ ಗಲಭೆ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಆದರೂ ಜನರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದ್ದೇನೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಈಗಾಗಲೇ ಗಣೇಶೋತ್ಸವ ಮಾರ್ಗ ಬದಲಾವಣೆ ವಿರೋಧಿಸಿ ಸಾಮಾಜಿಕ ಜಾಲ ತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಸೀದಿ ಮುಂದೆ ಮೆರವಣಿಗೆ ಹಾದುಹೋಗುವುದಕ್ಕೆ ಯಾವುದೇ ಅಡ್ಡಿಪಡಿಸಿಲ್ಲ. ಹಿಂದಿನಿಂದಲೂ ಮಸೀದಿ ಎದುರು ಗಣೇಶ ಮೂರ್ತಿ ಮೆರವಣಿಗೆ ಕೊಂಡೊಯ್ಯುತ್ತಿದ್ದವರಿಗೆ ಅವಕಾಶ ನೀಡಿದ್ದು, ಹೊಸದಾಗಿ ಅವಕಾಶ ಕೇಳಿರುವವರಿಗೆ ಮಾತ್ರ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ಬಾರಿ ಸಂಭವಿಸಿದ್ದ ಗಲಭೆಯನ್ನು ಗಮನದಲ್ಲಿಟ್ಟುಕೊಂಡು ಕ್ಯಾಬಿನೆಟ್ ತೀರ್ಮಾನದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಜನರ ಭಾವನೆಗಳನ್ನೂ ದೃಷ್ಟಿಯಲ್ಲಿಟ್ಟುಕೊಂಡು ಕಠಿಣವಾದ ನಿರ್ಬಂಧಗಳನ್ನು ಹೇರಿಲ್ಲ ಎಂದರು.