ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮನಸ್ಸಿಗೆ ಆನಂದವನ್ನು ನೀಡುವ ಸಾಹಿತ್ಯ ಬೇಕಾಗಿದೆ ಎಂದು ಉಡುಪಿಯ ಕು.ಪವಿತ್ರಾ ಎನ್.ದೇವಾಡಿಗ ಹೇಳಿದರು. ಇಲ್ಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಆದಿ ಚುಂಚನಗಿರಿ ಟ್ರಸ್ಟ್ ಅಡಿಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ 19ನೇ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಸಾಹಿತ್ಯದ ಅಭಿರುಚಿಯನ್ನು ಶಾಲಾ ಹಂತದಲ್ಲಿಯೇ ಬೆಳೆಸಬೇಕಾಗಿದೆ. ಮಕ್ಕಳನ್ನು ಕೇವಲ ಪಠ್ಯಪುಸ್ತಕಗಳ ಹುಳುಗಳನ್ನಾಗಿಸದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸುವಂತೆ ಮಾಡಬೇಕಾಗಿದೆ ಎಂದರು.ಕನ್ನಡ ಸಾಹಿತ್ಯಕ್ಕೆ ಶ್ರೀಮಂತವಾದ ಪರಂಪರೆ ಇದೆ. ಇಂತಹ ಕನ್ನಡ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವಂತಹ ಕೆಲಸ ಆಗಬೇಕಿದೆ. ಉತ್ತಮ ಪರಿಸರವನ್ನುಂಟು ಮಾಡಿದಲ್ಲಿ ಕಲಿಕೆ ಉತ್ತಮವಾಗಲು ಸಾಧ್ಯವಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಮಕ್ಕಳ ಸಾಹಿತ್ಯಕ್ಕೆ ವಿಶೇಷವಾದ ರೀತಿಯಲ್ಲಿ ಕೃಷಿ ಮಾಡುತ್ತಿರುವುದು ಅಭಿನಂದನೀಯ. ಇದು ರಾಜ್ಯಾದ್ಯಾಂತ ವಿಸ್ತರಿಸಬೇಕಾಗಿದೆ. ಸರ್ಕಾರಗಳು ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ ಎಂದು ಹೇಳಿದರು. ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಕೆ.ಪಿ.ಮಾನ್ವಿ ಕರೂರು ಮಾತನಾಡಿ, ಇತಿಹಾಸದ ಪುನರ್ ವಿಮರ್ಶೆ ಆಗಬೇಕಾಗಿದೆ. ನಾವು ಓದಿದ ಇತಿಹಾಸದಲ್ಲಿ ರಾಣಿ ಚನ್ನಬೈರಾದೇವಿ ಹಾಗೂ ಕೆಳದಿ ಚಂಪಕಾಳ ಬಗ್ಗೆಯಾಗಲಿ ಕೆಳದಿ ರಾಣಿ ಚನ್ನಮ್ಮಾಳ ಬಗ್ಗೆಯಾಗಲಿ ಎಲ್ಲಿಯೂ ಸರಿಯಾಗಿ ಬರೆಯಲೆ ಇಲ್ಲ. ಇತಿಹಾಸ ಮತ್ತು ಸಾಹಿತ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಪುರುಷ ಪ್ರಧಾನವಾದ ವ್ಯವಸ್ಥೆಯಲ್ಲಿ ಮಹಿಳೆಯ ಇತಿಹಾಸವನ್ನು ಅಳಿಸಲಾಗಿದೆ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲದೆ ಗುಣಾತ್ಮಕ ಶಿಕ್ಷಣ ಮರೆಮಾಚಿದೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡವರಿಗೆ ಮಾಸಿಕ ಹತ್ತು ಸಾವಿರ ಸಂಬಳ ಕೊಡಲಾಗುತ್ತಿದೆ. ಪ್ರಸ್ತುತ ಹತ್ತು ಸಾವಿರದಲ್ಲಿ ಒಬ್ಬ ಮನುಷ್ಯ ಜೀವನ ಸಾಗಿಸುತ್ತಿರುವುದು ಬಹಳ ಕಷ್ಟಕರವಾಗಿದೆ. ಇದು ಒಂದು ರೀತಿಯ ಸರ್ಕಾರಿ ಜೀತ ಎಂದು ನಾನು ಭಾವಿಸುತ್ತೇನೆ. ಈ ರೀತಿಯ ಜೀತ ಪದ್ದತಿಯಿಂದಾಗಿ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ಅಸಾಧ್ಯವಾದದು ಎಂದರು. ಅರಣ್ಯವಾಸಿ ರೈತರಿಗೆ ನ್ಯಾಯ ಸಿಗಬೇಕಾಗಿದೆ. ಮರ, ಗಿಡ, ಪ್ರಾಣಿ, ಪಕ್ಷಿಗಳು ನಾಶವಾಗುವುದನ್ನು ನಾನು ವಿರೋಧಿಸುತ್ತೇನೆ. ಪಾಶ್ಚಾತ್ಯರಲ್ಲಿ ಅರಣ್ಯ ಎಂದರೆ ಜನವಸತಿ ರಹಿತ ಕಾಡು ಎಂದು ಪರಿಗಣಿಸಲಾಗಿದೆ. ನಮ್ಮಲ್ಲಿ ಕಾಡಿನೊಳಗೇ ಬದುಕು ಕಟ್ಟಿಕೊಂಡ ಸೋಲಿಗರು, ಗೊಂಡರು, ಮಲೆಮಾದಿಗರು, ಹಸಲರು ಹಾಗೇ ನಮ್ಮೂರಿನಲ್ಲಿ ವಾಸಿಸುವ ಕುಣಬಿ ಜನಾಂಗದವರೂ ಇದ್ದಾರೆ. ಇವರ ಜೀವನಕ್ಕೆ ಸರ್ಕಾರ ಇನ್ನೂ ಯಾವುದೇ ದಾರಿ ತೋರಿಸಲಿಲ್ಲ ಎಂದರು. ಅರಣ್ಯದಲ್ಲಿ ವಾಸಿಸುವವರು 75 ವರ್ಷದ ದಾಖಲೆ ಕೊಡಬೇಕು ಎಂಬ ಕಾನೂನು ಹೊರಬಂದಿದೆ. 75 ವರ್ಷದ, ಸ್ವಾತಂತ್ರ‍್ಯ ಪೂರ್ವದ ದಾಖಲೆಗಳು ಸರ್ಕಾರಿ ಕಚೇರಿಗಳಲ್ಲೇ ಇಲ್ಲವಾಗಿದೆ. ಕಾಡಿನಲ್ಲಿ ವಾಸಿಸುವ, ಅಕ್ಷರದ ಅರಿವು ಗೊತ್ತಿರದ ಅನಕ್ಷರಸ್ಥರು 75 ವರ್ಷದ ದಾಖಲೆ ಇಡಲು ಹೇಗೆ ಸಾಧ್ಯ? ಸರ್ಕಾರದ ಈ ಅಧಿನಿಯಮವನ್ನು ಕನಿಷ್ಟ 25 ವರ್ಷಗಳಿಗೆ ಸೀಮಿತಗೊಳಿಸಿ ಅರಣ್ಯವಾಸಿಗಳಿಗೆ ನ್ಯಾಯ ಕೊಡಿ ಎಂದು ಒತ್ತಾಯಿಸಿದರು.
ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಲಿ. ಕನ್ನಡ ಕನ್ನಡ ಎಂದು ಇಂಗ್ಲೀಷನ್ನು ಅಲ್ಲಗಳೆಯುವುದು ಸರಿಯಲ್ಲ. ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಯಲ್ಲಿ ಇಂಗ್ಲೀಷನ್ನು 1ನೇ ತರಗತಿಯಿಂದ ಕಲಿಸುವ ವ್ಯವಸ್ಥೆ ಜಾರಿಯಾಗಬೇಕು. ನನ್ನೂರಿನ ದ್ವೀಪದಂತಹ ಶಾಲೆಗಳಿಗೂ, ಶಿವಮೊಗ್ಗದ ಪಟ್ಟಣದ ಶಾಲೆಯ ಕಲಿಕೆಗೂ ಬಹಳ ಅಂತರವಿದೆ ಎಂದರು. ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಶಿವಮೊಗ್ಗ ಜಿಲ್ಲೆ ಕುವೆಂಪು, ಲಂಕೇಶ್, ಶಿವರುದ್ರಪ್ಪ ಅನಂತಮೂರ್ತಿಗಳಂತಹ ಮಹಾನ್ ಸಾಹಿತಿಗಳ ನೆಲವಾಗಿದೆ ಎಂದರು. ಕಸಾಪ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಈ ಸಂದರ್ಭದಲ್ಲಿ ಭವ್ಯ ಸುಧಾಕರ ಜಗಮನಿ ಇವರ ಪುಟಾಣಿ ಸಂಚಯ ಕೃತಿಯನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆಯ ಶೋಭಾ ವೆಂಕಟರಮಣ, ಅನನ್ಯ ಶಿಕ್ಷಣ ಸಂಸ್ಥೆಯ ಅನನ್ಯ ಗಿರೀಶ್, ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆಯ ಡಿ.ಆರ್.ಶ್ರೀನಿವಾಸ್, ಬಿ.ಜಿ.ಎಸ್.ಶಿಕ್ಷಣ ಸಂಸ್ಥೆಯ ಡಿ.ವಿ.ಸತೀಶ್ ಸುಧಾಮಣಿ ವೆಂಕಟೇಶ್, ಕಸ್ತೂರಿ ಸಾಗರ, ಶಂಕರ್ ಶೇಟ್, ರಾಘವೇಂದ್ರ ನಗರ, ಭಾರತಿ ರಾಮಕೃಷ್ಣ, ಮಧುಸೂದನ್ ಐತಾಳ್, ಭೈರಾಪುರ ಶಿವಪ್ಪಗೌಡ ಉಪಸ್ಥಿತರಿದ್ದರು. ಸಾನ್ವಿ ಮತ್ತು ತಂಡದವರು ನಾಡಗೀತೆ ಹಾಡಿದರು, ತನ್ಮಯ್ ಮತ್ತು ಸಂಗಡಿಗರು ಪ್ರಾರ್ಥಿಸಿದರು, ದರ್ಶಿನಿ ಸ್ವಾಗತಿಸಿ ವಿದ್ಯಾಶ್ರೀ ವಂದಿಸಿ, ಮೌಲ್ಯ ಮತ್ತು ನಿರಂಜನ ನಿರೂಪಿಸಿದರು.