ಧಾರವಾಡದ ಕಾರ್ಪೊರೇಟ್ ಟ್ರೈನರ್ ಮಹೇಶ್ ಮಸಲ್

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮೊಬೈಲ್ ಅನ್ನು ನಾವು ಬಳಸಬೇಕೆ ಹೊರತು ಮೊಬೈಲೇ ನಮ್ಮನ್ನು ಬಳಸುವಂತಾಗಬಾರದು. ಮೊಬೈಲ್ ನಲ್ಲಿ ಉಪಯೋಗಕ್ಕೆ ಬರುವ ವಿಡಿಯೋಗಳನ್ನು ನೋಡಬೇಕು ಎಂದು ಧಾರವಾಡದ ಕಾರ್ಪೊರೇಟ್ ಟ್ರೈನರ್ ಮಹೇಶ್ ಮಸಲ್ ತಿಳಿಸಿದರು.

ನಗರದ ಒಕ್ಕಲಿಗ ಸಮುದಾಯ ಭವನದಲ್ಲಿ ಸಾಯಿ ಏಂಜಲ್ಸ್ ಶಾಲೆಯಿಂದ ನಡೆದ ಶುಭಾರಂಭ್ 2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮುಂದಿನ ಜಗತ್ತು ನಿಂತಿರುವುದೇ ಮೊಬೈಲ್ ಮೇಲೆ. ಹೀಗಾಗಿ ಮೊಬೈಲ್ ಬಳಕೆ ಮಾಡಬಾರದು ಎಂದು ನಾನು ಹೇಳಲ್ಲ. ಆದರೆ ಸದುದ್ದೇಶಕ್ಕೆ ಮಾತ್ರ ಮೊಬೈಲ್ ಬಳಸಿದಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂದರು.

ಮೊಬೈಲ್ ಎನ್ನುವುದು ಡ್ರಗ್ಸ್ ಇದ್ದಂತೆ. ಅತಿ ಹೆಚ್ಚು ಮೊಬೈಲ್ ನೋಡುವುದರಿಂದ ಮೆದುಳಿನಲ್ಲಿ ಡೊಕೊಮನ್ ಕೆಮಿಕಲ್ ಬಿಡುಗಡೆಯಾಗುತ್ತದೆ. ಡ್ರಗ್ಸ್ ಹಾಗೂ ಗಾಂಜಾ ಸೇವನೆ ಮಾಡಿದಾಗಲೂ ಇದೇ ಡೊಕೊಮನ್ ಕೆಮಿಕಲ್ ಬಿಡುಗಡೆ ಯಾಗುತ್ತದೆ. ಹೀಗಾಗಿ ಪಾಲಕರು ಮಕ್ಕಳಿಗೆ ಮೊಬೈಲ್ ನೋಡಬೇಡ ಎಂದಾಕ್ಷಣ ವ್ಯಗ್ರರಾಗುತ್ತಾರೆ. ಕೆಲ ಪ್ರಕರಣಗಳಲ್ಲಿ ಪಾಲಕರ ಮೇಲೆಯೇ ಹಲ್ಲೆ ನಡೆಸಿರುವ ಉದಾಹರಣೆ ಇವೆ. ಹೀಗಾಗಿ ಮೊಬೈಲ್ ಬಳಕೆ ಬಗ್ಗೆ ಎಚ್ಚರ ವಹಿಸಬೇಕೆಂದು ಸಲಹೆ ನೀಡಿದರು.


ಪದವಿಪೂರ್ವ ಶಿಕ್ಷಣದ ಹಂತದಲ್ಲಿ ಮಕ್ಕಳಲ್ಲಿ ಹಾರ್ಮೋನ್ ಬದಲಾಗುತ್ತವೆ. ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಮಕ್ಕಳು ಬರುವಾಗ ಒಂದಷ್ಟು ಆಕರ್ಷಣೆ ಹೆಚ್ಚಿರುತ್ತವೆ. ಇಂಥ ಕಾಲಘಟ್ಟದಲ್ಲಿ ನಾವು ಉತ್ತಮ ಹವ್ಯಾಸ ಬೆಳೆಸಿ ಕೊಂಡಾಗ ಮಾತ್ರ ಮುಂದೆ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂದರು.

2034ಕ್ಕೆ ಇಂದಿನ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬರುತ್ತಾರೆ. ಸಮಾಜದಲ್ಲಿ ಈಗಾಗಲೇ ದೊಡ್ಡ ಮಟ್ಟದ ಬದಲಾವಣೆ ಗಳು ಆರಂಭಗೊಂಡಿವೆ. ಹೀಗಿರುವಾಗ 2034 ಹೇಗಿರುತ್ತದೆ ಎನ್ನುವುದನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಜಗತ್ತಿನ ಬದಲಾ ವಣೆಗೆ ತಕ್ಕಂತೆ ನಾವು ಬದಲಾದಾಗ ಮಾತ್ರ ಆಧುನಿಕ ಕಾಲಘಟ್ಟಕ್ಕೆ ಹೊಂದಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಸಾಯಿ ಏಂಜಲ್ಸ್ ಶಾಲೆ ಪ್ರಾಚಾರ್ಯ ಯಾಮಿನಿ ಸವೂರ್, ಸಾಯಿ ಏಂಜಲ್ಸ್ ಸಂಸ್ಥೆ ಮುಖ್ಯಸ್ಥ ಕಾರ್ತಿಕ್ ಉಪಸ್ಥಿತರಿದ್ದರು.