ಸದನದಲ್ಲಿ ಕಾಂಗ್ರೆಸ್‌ ಸರ್ಕಾರ ಸೊಕ್ಕು ಮುರಿಯುವೆವು

| Published : Dec 01 2023, 12:45 AM IST

ಸದನದಲ್ಲಿ ಕಾಂಗ್ರೆಸ್‌ ಸರ್ಕಾರ ಸೊಕ್ಕು ಮುರಿಯುವೆವು
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಮತಿ ತಾಲೂಕಿನ ಸವಳಂಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ । ಬೃಹತ್ ಸೇಬು ಹಾರ ಹಾಕಿ ಅದ್ಧೂರಿ ಸ್ವಾಗತ

ನ್ಯಾಮತಿ ತಾಲೂಕಿನ ಸವಳಂಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ । ಬೃಹತ್ ಸೇಬು ಹಾರ ಹಾಕಿ ಅದ್ಧೂರಿ ಸ್ವಾಗತ

ಕನ್ನಡಪ್ರಭ ವಾರ್ತೆ ದಾವಣಗೆರೆ/ ಹೊನ್ನಾಳಿ

ಉತ್ತರ ಕರ್ನಾಟಕದ ಅಭಿವೃದ್ಧಿ ಮರೆತ, ಕಬ್ಬು ಬೆಳೆಗಾರರ ಬಾಕಿ ಹಣ ನೀಡದ, ಜಾತಿಗಣತಿ ಮುಂದಿಟ್ಟು ಆಟವಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಬಗ್ಗೆ ಸದನದಲ್ಲಿ ಸೊಕ್ಕು ಮುರಿಯುವ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದರು.

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಇದೇ ಮೊದಲ ಬಾರಿ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಅದ್ಧೂರಿ ಸ್ವಾಗತ, ಕ್ರೇನ್ ಸಹಾಯದಿಂದ ಬೃಹತ್ ಸೇಬು ಹಣ್ಣಿನ ಹಾರದ ಸನ್ಮಾನ ನಂತರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸದನದ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಸರ್ಕಾರದ ಆಡಳಿತದ ವೈಫಲ್ಯದ ಬಗ್ಗೆ ಧ್ವನಿ ಎತ್ತುತ್ತೇವೆ. ಜಾತಿ ಗಣತಿ ಕೈಗೊಂಡ ಕಾಂತರಾಜ ವರದಿಯ ವಿಚಾರದಲ್ಲೂ ಕಾಂಗ್ರೆಸ್ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆಯೆಂಬುದು ಕಾಣುತ್ತಿದೆ. ಈ ಎಲ್ಲಾ ವಿಚಾರ ಮುಂದಿಟ್ಟು ಸದನದಲ್ಲಿ ಸರ್ಕಾರದ ಸೊಕ್ಕು ಮುರಿಯುವ ಕೆಲಸ ಮಾಡುತ್ತೇವೆ ಎಂದರು.

ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಪಕ್ಷ ಕಟ್ಟುವೆ:

ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಧಿಕಾರವಹಿಸಿದ ನಂತರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದು ಮುಂದೆ ರಾಜ್ಯದೆಲ್ಲೆಡೆ ಜಿಲ್ಲಾ ಪ್ರವಾಸ ಮಾಡಿ ಪಕ್ಷ ಅಧಿಕಾರಕ್ಕೆ ತರುವುದೇ ಪರಮ ಗುರಿ. ತಂದೆ ಬಿ.ಎಸ್‌.ಯಡಿಯೂರಪ್ಪ ಪಕ್ಷ ಬಲಿಷ್ಠಗೊಳಿಸಬೇಕು ಎಂದು ಅಪೇಕ್ಷೆ ಪಟ್ಟ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಲಿದ್ದೇನೆ ಎಂದು ಹೇಳಿದರು.

ಇಡೀ ದೇಶ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂದು ಬಯಸುತ್ತಿದೆ. ಪ್ರಜ್ಞಾವಂತ ಮತದಾರರ ಆಸೆ ಕೂಡ ಇದಾಗಿದ್ದು ಇದಕ್ಕೆ ಪೂರಕವಾಗಿ ಬಿಜೆಪಿಯ ಪ್ರತಿಯೊಬ್ಬರೂ ಶ್ರಮವಹಿಸಿ ಕೆಲಸ ಮಾಡಬೇಕು ಎಂದರು.

ಅವಳಿ ತಾಲೂಕಿನ ಜನ ಅದ್ಧೂರಿಯಾಗಿ ಬರಮಾಡುತ್ತಿರುವುದು ಸಂತಸ ತಂದಿದೆ. ಇದು ನನಗಿಂತ ರೇಣುಕಾಚಾರ್ಯ ಅವರ ಬಗ್ಗೆ ಈ ಕ್ಷೇತ್ರದ ಜನತೆಗಿರುವ ಅನನ್ಯ ಅಭಿಮಾನ, ಪ್ರೀತಿ ಎತ್ತಿ ತೋರಿಸುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಪತನ ನಿಶ್ಚಿತ:

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ ಬಿ.ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಕಾಂಗ್ರೆಸ್‌ನಲ್ಲಿ ನಡುಕ ಹುಟ್ಟಿದೆ. ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್‌.ಅಶೋಕ ನೇತೃತ್ವದಲ್ಲಿ ಬಿಜೆಪಿ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ. ರಾಜ್ಯದಲ್ಲಿ ಆಡಳಿತ ವೈಫಲ್ಯದಿಂದ ಕಾಂಗ್ರೆಸ್ ಶಾಸಕರೇ ರಾಜೀನಾಮೆ ನೀಡಿ ಸರ್ಕಾರ ಪತನವಾಗುವುದು ನಿಶ್ಚಿತ. ಬಿಜೆಪಿ ಎಂದಿಗೂ ಅಪರೇಷನ್‌ ಮಾಡುವುದಿಲ್ಲ, ಕಾಂಗ್ರೆಸ್ ಶಾಸಕರೇ ಬೇಸತ್ತು ರಾಜೀನಾಮೆ ನೀಡುತ್ತಾರೆ. ವಿಜಯೇಂದ್ರ ರಾಜಾಧ್ಯಕ್ಷರಾದ ಮೇಲೆ ರಾಜ್ಯದ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ಬೃಹತ್ ಸೇಬುಹಣ್ಣಿನ ಹಾರ:

ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸವಳಂಗದಲ್ಲಿ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಇದೇ ಮೊದಲ ಸಹ ಆಗಮಿಸಿದ್ದ ಬಿ.ವೈ.ವಿಜಯೇಂದ್ರಗೆ ಸೇಬುಹಣ್ಣಿನ ಬೃಹತ್ ಹಾರ ಹಾಕಿ, ಅದ್ಧೂರಿ ಸ್ವಾಗತ ಕೋರಲಾಯಿತು. ನಂತರ ವಿಜಯೇಂದ್ರ ರೋಡ್ ಶೋ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್‌, ಸುರೇಂದ್ರನಾಯ್ಕ, ನೆಲಹೊನ್ನೆ ಮಂಜುನಾಥ್‌, ದಿಡಗೂರು ಫಾಲಾಕ್ಷಪ್ಪ, ಸಿ.ಆರ್‌.ಶಿವಾನಂದ, ಹೊಸಳ್ಳಿ ಶಿವು ಹುಡೇದ್‌, ತರಗನಹಳ್ಳಿ ರಮೇಶ್‌ಗೌಡ, ಬೆನಕನಹಳ್ಳಿ ಮಹೇಶ್‌ಗೌಡ, ನ್ಯಾಮತಿ ರವಿಕುಮಾರ್, ಮಾರುತಿ ನಾಯ್ಕ, ಮಾದೇನಹಳ್ಳಿ ನಾಗರಾಜ್‌, ಗಂಜಿಜನಹಳ್ಳಿ ರುದ್ರಪ್ಪ, ಕೆ.ವಿ.ಶ್ರೀಧರ, ಪೇಟೆ ಪ್ರಶಾಂತ್ ಸೇರಿ ಅ‍ವಳಿ ತಾಲೂಕುಗಳ ಮುಖಂಡರು ಇದ್ದರು.

ಶಾಸಕರಿಗೆ ಅನುದಾನ ಕೊಟ್ಟಿಲ್ಲ

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಕಬ್ಬು ಬೆಳೆಗಾರರಿಗೆ ನೀಡಬೇಕಾದ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಯನ್ನೇ ಸರ್ಕಾರ ಮರೆತಿದೆ. ಶಾಸಕರಿಗೆ ಬಿಡುಗಡೆಯಾಗಬೇಕಾಗಿದ್ದ ಯಾವುದೇ ಅನುದಾನ ನೀಡುತ್ತಿಲ್ಲ. ಈ ವರೆಗೆ ಒಂದು ರುಪಾಯಿ ಅನುದಾನವನ್ನೂ ಶಾಸಕರಿಗೆ ಬಿಡುಗಡೆ ಮಾಡಿಲ್ಲ.

ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ