ಸಾರಾಂಶ
ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರ ನೇತೃತ್ವದಲ್ಲಿ ಎದುರಿಸಲಾಗಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದರಿಂದಲೇ ಪ್ರಹ್ಲಾದ ಜೋಶಿ ಗೆಲುವಿನ ಅಂತರ ತೀರಾ ಕಡಿಮೆಯಾಗಿದೆ.
ಧಾರವಾಡ:
ಲೋಕಸಭಾ ಚುನಾವಣೆಯಲ್ಲಿ ಕಲಘಟಗಿ ವಿಧಾನಸಭಾ ಕ್ಷೇತ್ರದ ಮತದಾರರು ಬಿಜೆಪಿ ಪರ ಹೆಚ್ಚಿನ ಮತ ಚಲಾಯಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಮತಗಳು ಕಡಿಮೆ ಬಂದಿವೆ. ಈ ಕುರಿತು ಅವಲೋಕನ ಮಾಡಲಿದ್ದು, ಮತದಾರರನ್ನು ಸೆಳೆಯಲು ನಾವೇನು ತಪ್ಪು ಮಾಡಿದ್ದೇವೆ ಎಂಬುದನ್ನು ಕಂಡುಕೊಂಡು ಜನರಿಗೆ ಹೋರಾಟದ ಮೂಲಕ ಹತ್ತಿರವಾಗುತ್ತೇವೆ ಎಂದು ಉಸ್ತುವಾರಿ ಸಚಿವ, ಕಲಘಟಗಿ ಶಾಸಕ ಸಂತೋಷ ಲಾಡ್ ಹೇಳಿದರು.ಸೋಮವಾರ ಸುದ್ದಿಗಾರರೊದಿಗೆ ಮಾತನಾಡಿದ ಅವರು, ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರ ನೇತೃತ್ವದಲ್ಲಿ ಎದುರಿಸಲಾಗಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದರಿಂದಲೇ ಪ್ರಹ್ಲಾದ ಜೋಶಿ ಗೆಲುವಿನ ಅಂತರ ತೀರಾ ಕಡಿಮೆಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಗ್ಯಾರಂಟಿ ಕೈ ಹಿಡಿದಿದೆ. ಆದರೆ, ನಾವು ನಿರೀಕ್ಷೆ ಮಾಡಿದಷ್ಟು ಮತದಾರರು ನಮ್ಮ ಕೈ ಹಿಡಿದಿಲ್ಲ ಎಂಬ ಬೇಸರವಿದೆ ಎಂದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಕಡಿಮೆಯಾಗುತ್ತಿದೆ ಎನ್ನುವುದಕ್ಕೆ ಅವರ ಗೆಲುವಿನ ಅಂತರವೇ ಸಾಕ್ಷಿ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಶಕ್ತಿ ಹೆಚ್ಚಿಸಿಕೊಂಡಿದೆ. ನರೇಂದ್ರ ಮೋದಿ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇತಿಹಾಸದಲ್ಲೇ ಎರಡು ಭಾರಿ ಪ್ರಧಾನಿಯಾದವರು ಅಷ್ಟು ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎನ್ನುವುದು ಪ್ರಮುಖ ಅಲ್ಲವೇ? ಎಂದರು.ಬರ ಪರಿಹಾರ ವಿತರಣೆಯಲ್ಲಿ ಕೆಲವು ಜನರಿಗೆ ಪರಿಹಾರ ಬಂದಿಲ್ಲ. ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾರಿಗೆ ಪರಿಹಾರ ಬಂದಿಲ್ಲ ಅಂತಹ ರೈತರಿಗೆ ಪರಿಹಾರ ಬಿಡುಗಡೆಗೆ ಸಂಬಂಧಿಸಿದ ಸಚಿವರಿಗೆ ಮನವರಿಕೆ ಮಾಡಲಾಗುವುದು ಎಂದರು.