ಸರ್ಕಾರ ರೈತರ ಸಮಸ್ಯೆ ಆಲಿಸುವಲ್ಲಿ ವಿಫಲವಾಗಿದ್ದು ವಿರೋಧಪಕ್ಷದ ನಾಯಕರು ವಿಧಾನಸಭೆಗೆ ಒಳಗಿನಿಂದ ಬೀಗ ಹಾಕಿದರೆ ನಾವು ಹೊರಗಿನಿಂದ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ಎಚ್ಚರಿಸಿದ್ದಾರೆ

ಕನ್ನಡಪ್ರಭ ವಾರ್ತೆ ಕುಣಿಗಲ್

ಸರ್ಕಾರ ರೈತರ ಸಮಸ್ಯೆ ಆಲಿಸುವಲ್ಲಿ ವಿಫಲವಾಗಿದ್ದು ವಿರೋಧಪಕ್ಷದ ನಾಯಕರು ವಿಧಾನಸಭೆಗೆ ಒಳಗಿನಿಂದ ಬೀಗ ಹಾಕಿದರೆ ನಾವು ಹೊರಗಿನಿಂದ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ಎಚ್ಚರಿಸಿದ್ದಾರೆ

ಕುಣಿಗಲ್ ತಾಲೂಕು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕುಂದು ಕೊರತೆ ಸಭೆ ಹಾಗೂ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಧಿವೇಶನ ಪ್ರಾರಂಭವಾಗಿದೆ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷ ರೈತರು ಪರವಾಗಿ ಧ್ವನಿ ಎತ್ತುತ್ತಿಲ್ಲ ಕಬ್ಬಿನ ಬೆಂಬಲ ಬೆಲೆಗಾಗಿ ಹೋರಾಟ ಮಾಡಿದ್ದರೂ ಕೂಡ ರೈತರಿಗೆ ಅನುಕೂಲ ಆಗುತ್ತಿಲ್ಲ. ಏಕೆಂದರೆ ಕಾರ್ಖಾನೆ ಮಾಲೀಕರು ಹೆಚ್ಚು ಶಾಸಕರು ಅಥವಾ ರಾಜಕೀಯ ಮುಖಂಡರೇ ಆಗಿದ್ದಾರೆ . ಕೇವಲ ಮುಖ್ಯಮಂತ್ರಿಗಳು ರೈತರಿಗೆ ಕಣ್ಣುಹೊರೆಸುವ ತಂತ್ರ ಮಾಡುತ್ತಿದ್ದಾರೆ ಅವರಿಂದ ಏನೂ ಪ್ರಯೋಜನ ಆಗಿಲ್ಲ. ಆದ್ದರಿಂದ ಸರ್ಕಾರದ ನಿಲುವನ್ನು ಖಂಡಿಸಿ ಡಿಸೆಂಬರ್ 12ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು. ಮೈಸೂರು ಭಾಗದ ತಂಬಾಕು ಬೆಳೆ ಹಾನಿಯಾಗಿದೆ. ಆನೆ ದಾಳಿ, ಮೇಕೆದಾಟು, ಕಳಸಾ ಬಂಡೂರಿ ಯೋಜನೆಗಳ ಅನುಷ್ಠಾನ ಸೇರಿದಂತೆ ಸಾಕಷ್ಟು ವಿಷಯಗಳಲ್ಲಿ ಸರ್ಕಾರ ಸೋತಿದೆ ಎಂದು ಆರೋಪಿಸಿದರು.

ಕುಣಿಗಲ್ ತಾಲೂಕಿನಲ್ಲಿ ಹಲವಾರು ರೈತರು ಖಾತೆ ಪಾಣಿಗೋಸ್ಕರ ಪ್ರತಿದಿನ ತಹಸೀಲ್ದಾರ್ ಕಚೇರಿ ಸೇರಿದಂತೆ ವಿವಿಧ ಯೋಜನೆಗಳಿಗೆ ಹಲವಾರು ಇಲಾಖೆಗಳಿಗೆ ಸುತ್ತುವ ಪರಿಸ್ಥಿತಿ ನಿರ್ಮಾಣ ಆಗಿದೆ. ಮುಂದಿನ ದಿನಗಳಲ್ಲಿ ಅದು ಮುಂದುವರಿದರೆ ರೈತ ಸಂಘ ಸರಿಯಾದ ಉತ್ತರ ನೀಡಲಿದೆ ಎಚ್ಚರ ಎಂದರು.ನೀರಿನ ವಿಚಾರದಲ್ಲಿ ಸರಿಯಾದ ಹೇಮಾವತಿ ನೀರು ಹಂಚಿಕೆ ಆಗಬೇಕಿದೆ ಕುಣಿಗಲ್ ಗೆ ಬರುವ ನೀರನ್ನು ಸರಿಯಾದ ರೀತಿ ಬಳಸಿಕೊಳ್ಳಲು ಸಮಗ್ರ ನೀರಾವರಿ ಯೋಜನೆ ಅನುಷ್ಠಾನ ಆಗಬೇಕು ಆದರೆ ಇಲ್ಲಿಗೆ ಬರುವ ನೀರು ಪೈಪ್ ಲೈನ್ ಮುಖಾಂತರ ತರುವ ಯೋಜನೆಯನ್ನು ಬದಲಾಯಿಸಿ ತೆರೆದ ಕಾಲುವೆ ಮುಖಾಂತರ ನೀರು ಹರಿಸಿದಾಗ ಅಲ್ಲಿನ ಅಂತರ್ಜಲ ಪ್ರಾಣಿ-ಪಕ್ಷಿಗಳಿಗೆ ನೀರು ಉಳಿಸುವುದರ ಜೊತೆಗೆ ಆ ಭಾಗದ ರೈತರಿಗೂ ಕೂಡ ಒಳಿತಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸಿದ್ಧರಾಮ ಚೈತನ್ಯ ಸ್ವಾಮೀಜಿ, ಆರ್ ಕೆ ರಂಗಸ್ವಾಮಿ, ಮೂಡಲಗಿರಯ್ಯ,ಬೆಟ್ಟಸ್ವಾಮಿ, ಜಿಆರ್ ಕಲ್ಪನಾ ಇತರರಿದ್ದರು.