ಮಾದಕ ವಸ್ತು ಮಾರಾಟ ಜಾಲ ಬುಡ ಸಹಿತ ಕೀಳುತ್ತೇವೆ

| Published : Oct 27 2024, 02:40 AM IST

ಸಾರಾಂಶ

ರಾಜ್ಯದಲ್ಲಿ ಗಾಂಜಾ ಹಾಗೂ ಮಾದಕ ದ್ರವ್ಯಗಳ ಮಾರಾಟ ಜಾಲವನ್ನು ಬುಡ ಸಹಿತ ಕಿತ್ತುಹಾಕಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯದಲ್ಲಿ ಗಾಂಜಾ ಹಾಗೂ ಮಾದಕ ದ್ರವ್ಯಗಳ ಮಾರಾಟ ಜಾಲವನ್ನು ಬುಡ ಸಹಿತ ಕಿತ್ತುಹಾಕಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಜಾ ನಿಯಂತ್ರಣಕ್ಕೆ ಮತ್ತು ಸಂಪೂರ್ಣ ನಾಶಕ್ಕೆ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಎಲ್ಲಾ ಠಾಣಾ ವ್ಯಾಪ್ತಿ ಹಾಗೂ ಎಸ್‌ಪಿ, ಡಿಸಿಪಿಯವರ ವ್ಯಾಪ್ತಿಯಲ್ಲಿ ಗಾಂಜಾ ಕೇಸುಗಳು ಮಿತಿಮೀರಿದರೆ ಅವರನ್ನೇ ಹೊಣೆಯಾಗಿಸುವುದಾಗಿ ಈಗಾಗಲೇ ಅಧಿಸೂಚನೆ ನೀಡಿದ್ದೇನೆ. ಗಾಂಜಾ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಬೆಂಗಳೂರಿನಲ್ಲಿ ನಿನ್ನೆಯಷ್ಟೆ ಒಂದೂವರೆ ಕೋಟಿ ರು.ಗಳ ಗಾಂಜಾ ವಶಪಡಿಸಿಕೊಂಡು ನೈಜೀರಿಯ ಪ್ರಜೆಯನ್ನು ಬಂಧಿಸಲಾಗಿದೆ. ವಾರದ ಹಿಂದೆ ₹5 ಕೋಟಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶಾಸಕ ಎಸ್.ಟಿ. ಸೋಮಶೇಖರ್ ಅವರು ಬಿಜೆಪಿ 8 ಶಾಸಕರು ಕಾಂಗ್ರೆಸ್ಸಿಗೆ ಬರುತ್ತಾರೆ ಎಂದು ಹೇಳಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೋಮಶೇಖರ್ ಗೆ ಈ ಪ್ರಶ್ನೆ ಕೇಳಿದರೆ ಇನ್ನೂ ಹೆಚ್ಚಿನ ಮಾಹಿತಿ ಸಿಗುತ್ತದೆ. ಜಾತಿಗಣತಿ ವರದಿ ಮಂಡನೆ ಮುಂದಿನ ಸಂಪುಟದಲ್ಲಿ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಉತ್ತರಿಸಿದರು.

ಈ ಸಂದರ್ಭದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು, ಮಂಜುನಾಥ್ ಭಂಡಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್ ಇದ್ದರು.ಶರಾವತಿ ನೀರು ಬೆಂಗಳೂರಿಗೆ ಒಯ್ಯುವ ಬಗ್ಗೆ ಚರ್ಚೆ ಅಷ್ಟೇ

ಎಚ್.ಎಂ.ಟಿ. ಕಾರ್ಖಾನೆಗೆ ನೀಡಿದ ಜಾಗ ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ಅರಣ್ಯ ಇಲಾಖೆಯ ಜಾಗವನ್ನು ಎಚ್.ಎಂ.ಟಿ. ಕಾರ್ಖಾನೆಗೆ ನೀಡಲಾಗಿತ್ತು. ಈಗ ಕಾರ್ಖಾನೆ ನಿಂತಿದೆ. ಹಾಗಾಗಿ ಕಾನೂನಿನ ಪ್ರಕಾರ ಆ ಜಾಗವನ್ನು ಮತ್ತೆ ಅರಣ್ಯ ಇಲಾಖೆ ವಾಪಾಸ್ಸು ಪಡೆಯುತ್ತದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಪ್ರತಿಕ್ರಿಯಿಸಿದರು. ಹಿಂದೆ ನಾನು ಉಪಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನ ಜನರಿಗೆ ತೀವ್ರ ಕುಡಿಯುವ ನೀರಿನ ಸಮಸ್ಯೆ ಇತ್ತು. ಬೆಂಗಳೂರಿಗೆ ನೀರಿನ ವಿವಿಧ ಮೂಲಗಳಿಂದ ನೀರು ಸರಬರಾಜು ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಹಾಗೇ ಶರಾವತಿ ನೀರು ಬೆಂಗಳೂರಿಗೆ ಒಯ್ಯುವ ಬಗ್ಗೆಯೂ ವಿಸ್ತಾರ ಚರ್ಚೆ ನಡೆದಿತ್ತು. ಆದರೆ, ಮುಂದಿನ ಯಾವುದೇ ಕ್ರಮವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ಯಾವುದೇ ಸಂಶಯಬೇಡ. ಈಗಾಗಲೇ ಆಂತರಿಕ ವರದಿ ಗೆಲುವಿನ ಬಗ್ಗೆ ಖಚಿತವಾಗಿ ತಿಳಿಸಿದೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದರು. ಕಾಂಗ್ರೆಸ್‌ನ ಜನಪ್ರಿಯ ಗ್ಯಾರಂಟಿಗಳು ಮತ್ತು ಅಭಿವೃದ್ಧಿ ಕಾರ್ಯಗಳು ಗೆಲುವು ತರಲಿದೆ. ಶಿಗ್ಗಾಂವಿಯಲ್ಲೂ ಕೂಡ ಖಾದ್ರಿಯವರು ತಮ್ಮ ನಾಮಪತ್ರ ಹಿಂತೆಗೆದು ಕೊಂಡಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಸೋಲು ನಿಶ್ಚಿತ ಎಂದು ಭವಿಷ್ಯ ನುಡಿದರು.

ಡಾ. ಜಿ. ಪರಮೇಶ್ವರ್ ಗೃಹ ಸಚಿವ