ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಕೇರಳ ಮತ್ತು ಕೊಡಗಿನಲ್ಲಿ ನಿರೀಕ್ಷೆಯಂತೆ ಮುಂಗಾರು ಮಳೆಯಾಗದಿರುವುದರಿಂದ ಕೃಷ್ಣರಾಜಸಾಗರ ಜಲಾಶಯದ ಒಳಹರಿವಿನ ಪ್ರಮಾಣ ಕುಸಿತಗೊಂಡಿದೆ. ನಿತ್ಯವೂ ಮೋಡಗಳ ಕಣ್ಣಾಮುಚ್ಚಾಲೆಯಾಟ ನಡೆದಿದ್ದು, ಮಳೆ ನಿರೀಕ್ಷೆಯಂತೆ ಬಾರದಿರುವುದು ರೈತರ ಆತಂಕಕ್ಕೂ ಕಾರಣವಾಗಿದೆ.
ಕೃಷ್ಣರಾಜಸಾಗರ ಜಲಾಶಯದ ಗರಿಷ್ಠ ಮಟ್ಟ ೧೨೪.೮೦ ಅಡಿ ಇದ್ದು, ಪ್ರಸ್ತುತ ೮೭.೬೨ ಅಡಿಯಷ್ಟು ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ೧೨೧೪ಕ್ಯುಸೆಕ್ ನೀರು ಹರಿದುಬರುತ್ತಿದ್ದು, ೯೮೩ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ ೧೪.೫೬೮ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.ಕಳೆದ ವರ್ಷ ತೀವ್ರ ಬರಗಾಲ ಎದುರಾಗಿ ರೈತ ಸಮೂಹವನ್ನು ಸಂಕಷ್ಟಕ್ಕೆ ದೂಡಿತ್ತು. ಈ ಬಾರಿ ಉತ್ತಮ ಮಳೆಯಾಗುವ ಆಶಾಭಾವನೆಯೊಂದಿಗೆ ಮುಂಗಾರನ್ನು ಎದುರುನೋಡುತ್ತಿದ್ದಾರೆ. ಆದರೆ, ಮುಂಗಾರು ರೈತರ ನಿರೀಕ್ಷೆಯಂತೆ ಬೀಳದಿರುವುದು ಬೇಸರವನ್ನು ಮೂಡಿಸಿದೆ. ಮೇ ತಿಂಗಳಲ್ಲಿ ಪೂರ್ವ ಮುಂಗಾರು ಆಶಾದಾಯಕವಾಗಿದ್ದು, ಮುಂಗಾರು ಮಳೆ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸುವಂತೆ ಮಾಡಿತ್ತು. ಆದರೆ, ಕೇರಳ ಮತ್ತು ಕೊಡಗಿನಲ್ಲಿ ಭಾರೀ ಮಳೆಯಾಗದಿರುವುದರಿಂದ ಕಾವೇರಿ ಕಣಿವೆ ಜಲಾಶಯಗಳಿಗೆ ಹರಿದುಬರುವ ನೀರಿನ ಪ್ರಮಾಣವೂ ಕುಂಠಿತಗೊಂಡಿದೆ.
ನೀರಿಗೆ ಬೇಡಿಕೆ:ಕಳೆದ ವರ್ಷ ಎದುರಾದ ಬರಗಾಲ, ಬೇಸಿಗೆ ಬೆಳೆಗಳಿಗೆ ನೀರು ಹರಿಸದಿರುವುದರಿಂದ ರೈತರು ಆಕ್ರೋಶಗೊಂಡಿದ್ದಾರೆ. ಈಗಾಗಲೇ ನಾಲೆಗಳಿಗೆ ನೀರು ಹರಿಸುವಂತೆ ಬೇಡಿಕೆ ಇಡುತ್ತಿದ್ದಾರೆ. ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯ ನೂರರ ಗಡಿ ದಾಟಿದರೆ ನಾಲೆಗಳಿಗೆ ನೀರು ಹರಿಸಿ ರೈತರನ್ನು ಸಮಾಧಾನಪಡಿಸಬಹುದೆಂಬ ನಿರೀಕ್ಷೆಯಲ್ಲಿ ಸರ್ಕಾರ ಇತ್ತು. ಆದರೆ, ಕಾವೇರಿ ಕಣಿವೆ ಪ್ರದೇಶದಲ್ಲಿ ನಿರೀಕ್ಷೆಯಂತೆ ಮಳೆಯಾಗದೆ ನಾಲ್ಕೂ ಜಲಾಶಯಗಳ ಒಳಹರಿವು ನೀರಸವೆನಿಸುವಂತಿದೆ. ಇನ್ನೊಂದು ವಾರ ಕಳೆದರೆ ಬಿತ್ತನೆ ಚಟುವಟಿಕೆಗಳು ಆರಂಭವಾಗುವುದರಿಂದ ನೀರಿಗೆ ಬೇಡಿಕೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಗಳಿವೆ.
ನಾಲಾ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ:ವಿಶ್ವೇಶ್ವರಯ್ಯ ನಾಲಾ ಜಾಲದ ಎರಡನೇ ಹಂತದ ಕಾಮಗಾರಿ ಪೂರ್ಣಗೊಳ್ಳುವ ಯಾವುದೇ ಸಾಧ್ಯತೆಗಳಿಲ್ಲ. ಒಟ್ಟು ೪೦ ಕಿ.ಮೀ. ಕಾಮಗಾರಿಯಲ್ಲಿ ೧೨ ಕಿ.ಮೀ. ಕಾಮಗಾರಿ ಬಾಕಿ ಇದ್ದು, ಇನ್ನೂ ೪ ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ನೀರು ಹರಿಸದಿರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಿ ನೀರು ಹರಿಸುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ.
ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ನಾಲೆಗಳಿಗೆ ನೀರು ಹರಿಸಿರುವ ಉದಾಹರಣೆಗಳಿಲ್ಲ. ಜುಲೈ ಎರಡನೇ ವಾರದಿಂದ ಬಿತ್ತನೆ ಚಟುವಟಿಕೆಗಳು ಜಿಲ್ಲೆಯಾದ್ಯಂತ ಚುರುಕುಗೊಳ್ಳುವುದರಿಂದ ಆ ಸಮಯದಲ್ಲಿ ನೀರು ಹರಿಸಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ಆ ವೇಳೆಗೆ ಮುಂಗಾರು ಚುರುಕುಗೊಂಡು ಉತ್ತಮ ವರ್ಷಧಾರೆಯಾಗಿ ಜಲಾಶಯಗಳ ಒಳಹರಿವು ಹೆಚ್ಚಾದರೆ ಮುಂಗಾರು ಹಂಗಾಮಿಗೆ ನೀರು ಹರಿಸುವುದಕ್ಕೆ ಯಾವುದೇ ಆಡಚಣೆಯಾಗುವುದಿಲ್ಲ ಎಂದು ನಂಬಲಾಗಿದೆ.ಉಳುಮೆ ಮಾಡಿ ಬಿತ್ತನೆಗೆ ಸಿದ್ಧತೆ:
ರೈತರು ಈಗಾಗಲೇ ಜಮೀನನ್ನು ಉಳುಮೆ ಮಾಡಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿಟ್ಟುಕೊಂಡಿರುವ ರೈತರು ಮಳೆಯ ಜೊತೆಗೆ ನಾಲೆಯಲ್ಲಿ ನೀರು ಹರಿಯುವ ದಿನಗಳಿಗಾಗಿ ಎದುರುನೋಡುತ್ತಿದ್ದಾರೆ. ಕಳೆದ ವರ್ಷದ ಬರಗಾಲದ ಛಾಯೆಯಿಂದ ಹೊರಬಂದು ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗುವ ನಿರೀಕ್ಷೆಯಲ್ಲಿ ರೈತ ಸಮುದಾಯವಿದೆ.ಈ ಬಾರಿ ನಿರೀಕ್ಷೆಯಂತೆ ಜೂ.೧ಕ್ಕೆ ಮುಂಗಾರು ಶುಭಾರಂಂಭವಾಯಿತಾದರೂ ನಂತರದ ದಿನಗಳಲ್ಲಿ ಮಳೆ ಚುರುಕುಗೊಳ್ಳಲಿಲ್ಲ. ಆಗಸದಲ್ಲಿ ಆವರಿಸುವ ದಟ್ಟ ಮೋಡಗಳು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡುತ್ತವೆಯಾದರೂ ನಂತರ ಸಣ್ಣ ಹ ನಿಗಳನ್ನು ಹಾಕಿ ಕಣ್ಮರೆಯಾಗುತ್ತಿರುವುದು ರೈತರಲ್ಲಿ ನಿರಾಸೆ ಮೂಡಿಸುತ್ತಿವೆ. ಒಂದೆಡೆ ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯೂ ಆಗುತ್ತಿಲ್ಲ. ಮತ್ತೊಂದೆಡೆ ಜಲಾಶಯಕ್ಕೆ ಹೆಚ್ಚು ಪ್ರಮಾಣದ ನೀರು ಹರಿದುಬರುತ್ತಲೂ ಇಲ್ಲ. ಹೀಗಾಗಿ ಕೃಷಿ ಅತಂತ್ರ ಸ್ಥಿತಿಯಲ್ಲಿರುವಂತೆ ಕಂಡುಬರುತ್ತಿದೆ.