ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ನೇಕಾರಿಕೆ ಉದ್ಯಮ ಸರ್ಕಾರದ ನಿಷ್ಕಾಳಜಿಯಿಂದ ಇಂದು ಅವಸಾನದಂಚಿಗೆ ತಲುಪಿದೆ. ನೇಕಾರರ ದುಡಿಯುವ ಕೈಗಳಿಗೆ ಉದ್ಯೋಗ ಸಿಗದ ಕಾರಣ ಆತ್ಮಹತ್ಯೆಗಳು ನಿರಂತರವಾಗಿ ಸಾಗಿವೆ. ಇದು ಕಳವಳಕಾರಿ ಸಂಗತಿ ಎಂದು ನೇಕಾರ ಧುರೀಣ ಸದಾಶಿವ ಗೋಂದಕರ ಹೇಳಿದರು.ಶನಿವಾರ ಬನಹಟ್ಟಿಯ ಪಿ.ಎಂ.ಬಾಂಗಿ ಪ್ರತಿಮೆಯ ವರ್ತುಲದಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಆಯೋಜಿಸಿದ್ದ ೧೦ನೇ ರಾಷ್ಟ್ರೀಯ ಕೈಮಗ್ಗ ಕೈ ಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ಮತ್ತು ಕೇಂದರ ಸರ್ಕಾರಗಳು ಕೇವಲ ದಿನಾಚರಣೆ ಮಾಡಿ ಕೈತೊಳಕೊಂಡರೆ ಸಾಲದು ಕಿಸಾನ್ ಸಮ್ಮಾನ್ ಯೋಜನೆಯಂತೆ ನೇಕಾರ ಸಮ್ಮಾನ್ ಯೋಜನೆ ಜಾರಿಗೊಳಿಸಿ ಎಲ್ಲ ನೇಕಾರರಿಗೆ ಆರ್ಥಿಕ ನೆರವು ಕಲ್ಪಿಸುವ ಮೂಲಕ ನೇಕಾರರಿಗೂ ಕಾರ್ಮಿಕ ಸೌಲಭ್ಯ ಒದಗಿಸಿ, ದುಡಿಯುವ ಕೈಗಳಿಗೆ ಕಚ್ಚಾ ವಸ್ತುಗಳು ಸಮರ್ಪಕ ಸಿಗುವಂತೆ ಮತ್ತು ಸರ್ಕಾರದ ಎಲ್ಲ ಇಲಾಖೆಗಳ ನೌಕರರು ನಿಗಮದ ನೇಕಾರರು ಉತ್ಪಾದಿಸಿದ ಬಟ್ಟೆಗಳನ್ನೇ ಬಳಸುವಂತೆ ಆದೇಶಿಸಿ ನೇಕಾರಿಕೆ ಉದ್ಯಮ ರಕ್ಷಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ಹಿರಿಯ ನೇಕಾರರಿಗೆ ಸನ್ಮಾನ, ವಾಕಿಂಗ್ ಸ್ಟಿಕ್ ವಿತರಿಸಲಾಯಿತು. ಸಿಎ ಅಭ್ಯಸಿಸುತ್ತಿರುವ ಮಕ್ಕಳಿಗೆ ಸಹಾಯಧನ ನೀಡಲಾಯಿತು.ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ನಿಗಮ ರೋಗಪೀಡಿತವಾಗಿದೆ. ಕೈಮಗ್ಗ ನೇಕಾರರು ಉದ್ಯೋಗವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ನೇಕಾರ ಜೀವಕ್ಕೆ ಕವಡೆ ಕಿಮ್ಮತ್ತಿಲ್ಲ ಎಂಬಂತೆ ಸರ್ಕಾರಗಳು ವರ್ತಿಸುತ್ತಿರುವುದು ಅಕ್ಷಮ್ಯ. ನೇಕಾರಿಕೆ ಉಳಿಕೆಗೆ ಮತ್ತು ನೇಕಾರರು ಸ್ವಾಭಿಮಾನದಿಂದ ಬದುಕುವತ್ತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಾಮಾಣಿಕವಾಗಿ ಯತ್ನಿಸಬೇಕು. ಕಟ್ಟಡ ಕಾರ್ಮಿಕರಂತೆ ನೇಕಾರರಿಗೂ ಕಾರ್ಮಿಕ ಸೌಲಭ್ಯ ನೀಡುವ, ನೇಕಾರರ ಉತ್ಪಾದನೆಗೆ ನೇರ ಮಾರುಕಟ್ಟೆ ನಿರ್ಮಿಸುವ, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಮಹಾನಗರದಗಳಲ್ಲಿ ಮಾರಾಟ ಮಳಿಗೆ ಒದಗಿಸಬೇಕು. ಸರ್ಕಾರದ ಅನೇಕ ಇಲಾಖೆಗಳಲ್ಲಿ ಮತ್ತು ಮಕ್ಕಳಿಗೆ ವಿತರಿಸುವ ಸಮವಸ್ತ್ರಗಳನ್ನು ಕೈಮಗ್ಗ ನೇಕಾರರಿಂದ ನೇರ ಖರೀದಿಸಬೇಕು. ಇದರಿಂದ ನೇಕಾರರಿಗೆ ನಿರಂತರ ಉದ್ಯೋಗ ಸಿಗುವಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಲವಪ್ಪ ಮರಾಠೆ, ಬಸಪ್ಪ ಅಮಟಿ, ನಾಗಪ್ಪ ಬಾವಲತ್ತಿ, ಹಜರತ ಮುಲ್ಲಾ, ಶಂಕರ ಕೊಣ್ಣೂರ, ಮಹಾದೇವ ಹುನ್ನೂರ, ಮಾಧವಾನಂದ ಪೋರೆ, ರಘುನಾಥ ಪೋರೆ, ಮಹಾದೇವಿ ಮುಗಳೊಳ್ಳಿ, ಶಾಯಿದಾ ಕಿಲ್ಲೇದಾರ, ನೂರಜಾನ್ ಮೋಮಿನ್, ವಾಸಪ್ಪ ಪಾಸ್ತೆ, ಮಹೇಂದ್ರ ಕವಿಶೆಟ್ಟಿ, ಅಕ್ಬರ ಜಮಾದಾರ, ಅಶೋಕ ಮಾಚಕನೂರ, ಶ್ರೀಶೈಲ ಮುಗಳೊಳ್ಳಿ, ಪಂಡಿತಪ್ಪ ಹಟ್ಟಿ, ಬಿ.ಎಂ.ಪಾಟೀಲ ಮುಂತಾದವರಿದ್ದರು.---
ಕೋಟ್ಕೈಮಗ್ಗ ನೇಕಾರರ ಅಭಿವೃದ್ಧಿಗೆಂದು ಸ್ಥಾಪಿತ ಕೈಮಗ್ಗ ಅಭಿವೃದ್ಧಿ ನಿಗಮ ಅಸಹಾಯಕ ಸ್ಥಿತಿಯಲ್ಲಿದೆ. ನಿಗಮದ ನೇಕಾರರಿಗೆ ಸೂಕ್ತ ಸೌಲಭ್ಯ ನೀಡಲಾಗದೇ ತನ್ನದೇ ಅಸ್ತಿತ್ವಕ್ಕೆ ಹೆಣಗಾಡುವಂತಾಗಿದೆ. ಸರ್ಕಾರ ದುಡಿಯುವ ನೇಕಾರ ವರ್ಗದ ಅಭಿವೃದ್ಧಿಗೆ ಮತ್ತು ಉದ್ಯಮದ ಉಳಿವಿಗೆ ಎಲ್ಲ ವೃತ್ತಿಪರ ನೇಕಾರರೊಡನೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ ಅವನತಿಯತ್ತ ಸಾಗುತ್ತಿರುವ ನೇಕಾರಿಕೆ ಉದ್ಯಮ ಮತ್ತು ನಿಗಮದ ಉಳಿಕೆಗೆ ಶಾಶ್ವತ ಸಮರ್ಪಕ ಯೋಜನೆಗಳನ್ನು ಜಾರಿಗೊಳಿಸಬೇಕು.
ಸದಾಶಿವ ಗೋಂದಕರ ನೇಕಾರ ಧುರೀಣ