ವೆಬ್‌ಕ್ಯಾಸ್ಟಿಂಗ್‌ ಕ್ಯಾಮೆರಾ ಭಯ, ಪರೀಕ್ಷೆಯಿಂದ ದೂರ

| Published : May 29 2024, 12:48 AM IST

ವೆಬ್‌ಕ್ಯಾಸ್ಟಿಂಗ್‌ ಕ್ಯಾಮೆರಾ ಭಯ, ಪರೀಕ್ಷೆಯಿಂದ ದೂರ
Share this Article
  • FB
  • TW
  • Linkdin
  • Email

ಸಾರಾಂಶ

ನಕಲು ಮುಕ್ತ ಪರೀಕ್ಷೆಗಾಗಿ ವೆಬ್‌ಕ್ಯಾಸ್ಟಿಂಗ್‌ ಕ್ಯಾಮೆರಾ ಕಣ್ಗಾವಲು ಇದ್ದುದ್ದರಿಂದ ಹಲವಾರು ಜನರು ಪರೀಕ್ಷೆಯಿಂದ ದೂರ ಉಳಿದಿರುವುದು ಬೆಳಕಿಗೆ ಬಂದಿದೆ. 7ನೇ ತರಗತಿ ಪಾಸಾದ 16 ವರ್ಷದ ಮೇಲ್ಪಟ್ಟ ಅರ್ಹರು ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತುಕೊಳ್ಳಲು ರಾಜ್ಯ ಸರ್ಕಾರ ಅವಕಾಶ ನೀಡಿತ್ತು. ಅದರಂತೆ ಮೇ 20 ರಿಂದ ಮೇ 27 ರವರೆಗೆ ನಡೆಯಬೇಕಾಗಿದ್ದ ಪರೀಕ್ಷೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪರೀಕ್ಷಾರ್ಥಿಗಳು ಹಾಜರಾಗದಿರುವುದಕ್ಕೆ ವೆಬ್‌ಕ್ಯಾಸ್ಟಿಂಗ್‌ ಕ್ಯಾಮೆರಾದ ಭಯವೇ ಪರೀಕ್ಷೆಯ ಗೈರಿಗೆ ಕಾರಣ ಎನ್ನುವುದು ದಾಖಲಾದ ಅಂಕಿ ಸಂಖ್ಯೆಯೇ ಸಾಕ್ಷಿ.

ಸಿ.ಎ.ಇಟ್ನಾಳಮಠ/ ಅಣ್ಣಾಸಾಬ ತೆಲಸಂಗ

ಕನ್ನಡಪ್ರಭ ವಾರ್ತೆ ಅಥಣಿ

ನಕಲು ಮುಕ್ತ ಪರೀಕ್ಷೆಗಾಗಿ ವೆಬ್‌ಕ್ಯಾಸ್ಟಿಂಗ್‌ ಕ್ಯಾಮೆರಾ ಕಣ್ಗಾವಲು ಇದ್ದುದ್ದರಿಂದ ಹಲವಾರು ಜನರು ಪರೀಕ್ಷೆಯಿಂದ ದೂರ ಉಳಿದಿರುವುದು ಬೆಳಕಿಗೆ ಬಂದಿದೆ. 7ನೇ ತರಗತಿ ಪಾಸಾದ 16 ವರ್ಷದ ಮೇಲ್ಪಟ್ಟ ಅರ್ಹರು ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತುಕೊಳ್ಳಲು ರಾಜ್ಯ ಸರ್ಕಾರ ಅವಕಾಶ ನೀಡಿತ್ತು. ಅದರಂತೆ ಮೇ 20 ರಿಂದ ಮೇ 27 ರವರೆಗೆ ನಡೆಯಬೇಕಾಗಿದ್ದ ಪರೀಕ್ಷೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪರೀಕ್ಷಾರ್ಥಿಗಳು ಹಾಜರಾಗದಿರುವುದಕ್ಕೆ ವೆಬ್‌ಕ್ಯಾಸ್ಟಿಂಗ್‌ ಕ್ಯಾಮೆರಾದ ಭಯವೇ ಪರೀಕ್ಷೆಯ ಗೈರಿಗೆ ಕಾರಣ ಎನ್ನುವುದು ದಾಖಲಾದ ಅಂಕಿ ಸಂಖ್ಯೆಯೇ ಸಾಕ್ಷಿ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಪ್ರತಿ ವರ್ಷದಂತೆ ಈ ವರ್ಷವೂ 7ನೇ ತರಗತಿ ಪಾಸಾದ 16 ವರ್ಷ ಮೇಲ್ಪಟ್ಟ ಅರ್ಹ ವಿದ್ಯಾರ್ಥಿಗಳು ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎರಡು ಪರೀಕ್ಷಾ ಕೇಂದ್ರಗಳಾದ ಚಿಕ್ಕೋಡಿಯ ಸರ್ಕಾರಿ ಪ್ರೌಢಶಾಲೆ ಹಾಗೂ ಕೆರೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಯಿತು.ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾರದರ್ಶಕ ಮತ್ತು ನಕಲು ಮುಕ್ತ ಪರೀಕ್ಷೆ ನಡೆಸಲು ಸಹಕಾರಿಯಾದ ವೆಬ್ ಕಾಸ್ಟಿಂಗ್ ಕ್ಯಾಮೆರಾ ವ್ಯವಸ್ಥೆಯನ್ನು ಮೊದಲ ಬಾರಿ ಈ ಮುಕ್ತ ಪರೀಕ್ಷೆಗೆ ಅಳವಡಿಸಿದ್ದರಿಂದ ವಿದ್ಯಾರ್ಥಿಗಳು ನಕಲು ಮಾಡಲು ಅವಕಾಶ ಇಲ್ಲವೆಂಬುವುದನ್ನು ಅರಿತು ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗದೇ ಮನೆಗೆ ಮರಳಿದ್ದಾರೆ. ಹಲವು ವರ್ಷಗಳಿಂದ ನಡೆದ ಪರೀಕ್ಷೆಯ ಪಾರದರ್ಶಕತೆಯನ್ನೇ ಬಟಾಬಯಲು ಮಾಡಿದ್ದು, ಶೈಕ್ಷಣಿಕ ಕ್ಷೇತ್ರದ ಉತ್ಕೃಷ್ಠತೆಗೆ ಅಂತಿಮ ಮೊಳೆ ಹೊಡೆದಂತಾಗಿದೆ.ರಾಜ್ಯದ ವಿವಿಧ ಶೈಕ್ಷಣಿಕ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿದಂತೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ 10ನೇ ತರಗತಿ ಪರೀಕ್ಷೆ ಬರೆಯಲು ಚಿಕ್ಕೋಡಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಪರೀಕ್ಷೆಯ ಆರಂಭದ ದಿನವಾದ ಮೇ 20 ರಂದು ಪರೀಕ್ಷಾ ಕೇಂದ್ರಕ್ಕೆ ಪರೀಕ್ಷಾರ್ಥಿಗಳು ಆಗಮಿಸಿದ್ದರು. ಆದರೆ, ಪರೀಕ್ಷಾ ಕೇಂದ್ರದಲ್ಲಿ ವೆಬ್‌ಕಾಸ್ಟಿಂಗ್‌ ಕ್ಯಾಮೆರಾ ಅಳವಡಿಸಿರುವುದು ತಿಳಿದು ಪರೀಕ್ಷೆ ಬರೆಯಲು ಹಿಂಜರಿದಿದ್ದಾರೆ. ನಕಲು ಮಾಡಲು ಅವಕಾಶ ಇಲ್ಲವೆಂಬುವುದನ್ನು ಅರಿತು ಪರೀಕ್ಷೆ ಬರೆಯದೇ ಹೋಗಿದ್ದಲ್ಲದೇ ಮುಂದಿನ ಪರೀಕ್ಷೆಗಳಿಗೆ ಬರೆಯಲು ಅಷ್ಟೊಂದು ಆಸಕ್ತಿ ತೋರಿಸದೇ ಇರುವುದು ಬೆಳಕಿಗೆ ಬಂದಿದೆ.

ಸರ್ಕಾರದ ಮಾರ್ಗಸೂಚಿಯಂತೆ ಮುಕ್ತ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮಾದರಿಯಲ್ಲಿ ಈ ಪರೀಕ್ಷಾ ಕೇಂದ್ರಕ್ಕೂ ವೆಬ್ ಕಾಸ್ಟಿಂಗ್ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದ್ದು, ಪಾರದರ್ಶಕತೆಯಿಂದ ಪರೀಕ್ಷೆ ನಡೆಸುವ ಉದ್ದೇಶದಿಂದ ಸರ್ಕಾರ ವ್ಯವಸ್ಥೆ ಕಲ್ಪಿಸಿದೆ. ಇದನ್ನು ಅನೇಕ ಜನ ವಿದ್ಯಾರ್ಥಿಗಳು ವಿರೋಧಿಸಿ ಪರೀಕ್ಷೆಗೆ ಹಾಜರಾಗಿಲ್ಲ.

-ಮೋಹನ ಕುಮಾರ್ ಹಂಚಾಟಿ, ಡಿಡಿಪಿಐ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ.ಕರ್ನಾಟಕ ಮುಕ್ತ ಶಾಲೆ ಮುಖ್ಯ ಪರೀಕ್ಷೆ ವೇಳಾಪಟ್ಟಿ

ದಿನಾಂಕ-ಭಾಷೆ-ನೋಂದಾಯಿತರು-ಗೈರು

ಮೇ 20-ಪ್ರಥಮ ಭಾಷೆ ಕನ್ನಡ-347-73

ಮೇ 21-ದ್ವಿತೀಯ ಭಾಷೆ ಇಂಗ್ಲಿಷ್‌-331-171

ಮೇ 22-ತೃತೀಯ ಭಾಷೆ ಹಿಂದಿ-327-190

ಮೇ 23-ವಿಜ್ಞಾನ-335-207

ಮೇ 24-ಸಮಾಜ ವಿಜ್ಞಾನ-368-180

ಮೇ 27-ಗಣಿತ-338-135