ಮದುವೆ ಊಟ: ಮದುಮಕ್ಕಳ ಸಹಿತ 500ಕ್ಕೂ ಅಧಿಕ ಮಂದಿ ಅಸ್ವಸ್ಥ!

| Published : Apr 26 2024, 12:53 AM IST / Updated: Apr 26 2024, 08:11 AM IST

ಮದುವೆ ಊಟ: ಮದುಮಕ್ಕಳ ಸಹಿತ 500ಕ್ಕೂ ಅಧಿಕ ಮಂದಿ ಅಸ್ವಸ್ಥ!
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರ ಸಮೀಪದ ಕೊಪ್ಪದ ಖಾಸಗಿ ರೆಸಾರ್ಟ್‌ನಲ್ಲಿ ಬೀಗರ ಊಟ ನಡೆದಿದ್ದು,   ಆಹಾರ ಸೇವಿಸಿದ ಮಂದಿಯಲ್ಲಿ ವಾಂತಿ ಭೇದಿ ಸಮಸ್ಯೆ ಕಂಡುಬಂತು. 

  ಕುಶಾಲನಗರ : ವಿವಾಹ ಸಮಾರಂಭದ ಬೀಗರ ಊಟದಲ್ಲಿ ಪಾಲ್ಗೊಂಡ ನೂರರು ಮಂದಿ ವಾಂತಿ ಭೇದಿಗೆ ತುತ್ತಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣ ಕುಶಾಲನಗರ ಸಮೀಪದ ಕೊಪ್ಪದಲ್ಲಿ ಗುರುವಾರ ಸಂಜೆ ನಡೆದಿದೆ. ಮದು ಮಕ್ಕಳೂ ಆಹಾರ ಸೇವಿಸಿ ಅನಾರೋಗ್ಯಕ್ಕೀಡಾಗಿದ್ದು, ಪೋಷಕರ ಸಹಿತ ಪಿರಿಯಾಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಪ್ಪದ ಖಾಸಗಿ ರೆಸಾರ್ಟ್‌ನಲ್ಲಿ ಬೀಗರ ಊಟ ನಡೆದಿದ್ದು, ಸಮಾರಂಭದಲ್ಲಿ ಸಾವಿರಕ್ಕೂ ಅಧಿಕ ಅತಿಥಿಗಳು ಪಾಲ್ಗೊಂಡಿದ್ದರು. ಸಂಜೆ ಸುಮಾರು 5 ಗಂಟೆ ವೇಳೆಗೆ ಆಹಾರ ಸೇವಿಸಿದ ಮಂದಿಯಲ್ಲಿ ವಾಂತಿ ಭೇದಿ ಸಮಸ್ಯೆ ಕಂಡುಬಂತು. 

ವೃದ್ಧರು, ಮಹಿಳೆಯರು, ಮಕ್ಕಳ ಸಹಿತ ಅಸ್ವಸ್ಥಗೊಂಡವರನ್ನು ಕುಶಾಲನಗರ, ಪಿರಿಯಾಪಟ್ಟಣ ಸೇರಿದಂತೆ ಪರಿಸರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಕೆಲ ಮಕ್ಕಳು ಪ್ರಜ್ಞಾಹೀನರಾಗಿದ್ದರು ಎಂದು ತಿಳಿದುಬಂದಿದೆ. ಹಲವು ಮಂದಿ ಅಸ್ವಸ್ಥರಿಗೆ ಡ್ರಿಪ್ಸ್‌ ನೀಡಿ ಚಿಕಿತ್ಸೆ ಮುಂದುವರಿಸಲಾಯಿತು. ಅಸ್ವಸ್ಥರಿಗೆ ಕುಶಾಲನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಚಿಕಿತ್ಸೆ ನೀಡಿದರು. 

ತಡರಾತ್ರಿ ತನಕವೂ ಅಸ್ವಸ್ಥರಿಗೆ ಚಿಕಿತ್ಸೆ ಮುಂದುವರಿಯಿತು. ಅಸ್ವಸ್ಥರಾಗಿರುವ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರನ್ನು ಮೈಸೂರು ಹಾಗೂ ಮಡಿಕೇರಿಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.ಕುಶಾಲನಗರವೊಂದರಲ್ಲೇ ಸುಮಾರು 300ರಷ್ಟು ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಈ ಪೈಕಿ ಶೇ.10ರಷ್ಟು ಮಂದಿ ಹೆಚ್ಚು ಆತಂಕಕ್ಕೆ ಈಡಾಗಿದ್ದರು. 

ಬೀಗರೂಟದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳೂ ಕೂಡಾ ಪಾಲ್ಗೊಂಡಿದ್ದರು. ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಕೂಡಾ ಪಾಲ್ಗೊಂಡಿದ್ದರು. ಅವರ ಕ್ಷೇಮವಾಗಿದ್ದಾರೆ ಎಂದು ಅವರ ಆಪ್ತ ಸಹಾಯಕರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಐಸ್‌ಕ್ರೀಂ ತಿಂದವರಿಗೆ ಸಮಸ್ಯೆ?:ಸಮಾರಂಭದಲ್ಲಿ ಶಾಖಾಹಾರಿ ಹಾಗೂ ಮಾಂಸಾಹಾರಿ ಎರಡೂ ರೀತಿಯ ಊಟ ಮಾಡಿದವರಿಗೂ ಅನಾರೋಗ್ಯ ಉಂಟಾಗಿದೆ. ಮುಖ್ಯವಾಗಿ ಐಸ್‌ಕ್ರೀಂ ಅಥವಾ ಸಿಹಿ ಸೇವಿಸಿದವರಲ್ಲಿ ಸಮಸ್ಯೆ ಕಂಡುಬಂದಿರುವುದಾಗಿ ತಿಳಿದುಬಂದಿದೆ.