ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಬಾಹ್ಯಾಕಾಶ ಕ್ಷೇತ್ರಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸಲು, ಹೊಸ ಹೊಸ ಅನ್ವೇಷಣೆಗಳನ್ನು ಕೈಗೊಳ್ಳಲು ಅಂತಾರಾಷ್ಟ್ರೀಯ ವಿಜ್ಞಾನ ಸಪ್ತಾಹವನ್ನು ಆಯೋಜಿಸಲಾಗುತ್ತಿದೆ ಎಂದು ಇಸ್ರೋ ಸಂಸ್ಥೆ ಡೆಪ್ಯುಟಿ ಡೈರೆಕ್ಟರ್ ರಾಮನಗೌಡ ವಿ. ನಾಡಗೌಡ ತಿಳಿಸಿದರು.ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಶನಿವಾರ ಪ್ರಪ್ರಥಮ ಬಾರಿಗೆ ಶ್ರೀ ಲೀಲಾ ನಾಗರಾಜಪ್ಪ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಭಾರತೀಯ ಪ್ರತಿಷ್ಠಿತ ಅಂತರಿಕ್ಷ ಸಂಸ್ಥೆ ಇಸ್ರೋದ 20ಕ್ಕೂ ಹೆಚ್ಚು ವಿಜ್ಞಾನಿಗಳ ಭಾಗಿತ್ವದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಪ್ತಾಹದಲ್ಲಿ ಮಾತನಾಡಿದರು.
ಇಸ್ರೋ ಸಂಸ್ಥೆಯ 20ಕ್ಕೂ ಹೆಚ್ಚು ವಿಜ್ಞಾನಿಗಳು ಸಪ್ತಾಹದಲ್ಲಿ ಪಾಲ್ಗೊಂಡು ಮಕ್ಕಳಿಗೆ ಸ್ಫೂರ್ತಿ ತುಂಬಲು, ವಿಜ್ಞಾನದ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದೇವೆ. ಚರ್ಚಾ ಸ್ಪರ್ಧೆ, ಮಕ್ಕಳ ಬುದ್ಧಿವಂತಿಕೆ ಪರೀಕ್ಷಿಸಲು ಕಾರ್ಯಕ್ರಮಗಳನ್ನು ನಡೆಸಿದ್ದೇವೆ ಎಂದರು.ವಿಶ್ವಾದಾದ್ಯಂತ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಎಲ್ಲಾ ಸಂಘ- ಸಂಸ್ಥೆಗಳು ಸೇರಿ ಮಾಡುವ ಹಬ್ಬವೇ ವಿಶ್ವ ಬಾಹ್ಯಾಕಾಶ ಸಪ್ತಾಹ. ಈ ಕ್ಷೇತ್ರದಲ್ಲಿ ಯಾವ ಕೆಲಸಗಳನ್ನು ಹೇಗೆ ಮಾಡಬೇಕು ಎಂಬ ರೂಪುರೇಷೆಗಳನ್ನು ಮಾಡಿ ಪ್ರಪ್ರಥಮ ಬಾರಿಗೆ ವಿಶ್ವಸಂಸ್ಥೆಯು 1999 ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭ ಮಾಡಿದ್ದು, ಈ ವರ್ಷ ಸಪ್ತಾಹಕ್ಕೆ 25ನೇ ವರ್ಷದ ಬೆಳ್ಳಿ ಹಬ್ಬ ಎಂದು ಹೇಳಿದರು.
1957ನೇ ಇಸವಿಯಲ್ಲಿ ಅಕ್ಟೋಬರ್ 4ರಂದು ಪ್ರಪ್ರಥಮ ಕೃತಕ ಉಪಗ್ರಹ ಸ್ಪೂತ್ನಿಕ್ -1 ಉಡಾವಣೆ ಮಾಡಲಾಯಿತು. 1967ನೇ ಇಸವಿ ಅಕ್ಟೋಬರ್ 10ರಂದು ಬಾಹ್ಯಾಕಾಶ ಕ್ಷೇತ್ರದ ಚಟುವಟಿಕೆಗಳ ಬಗ್ಗೆ ಒಂದು ಒಪ್ಪಂದ ನಡೆಯಿತು. ಈ ಎರಡು ದಿನಗಳ ವಿಶೇಷತೆಯನ್ನು ಸೇರಿಸಿ ಪ್ರತಿವರ್ಷ ಅಕ್ಟೋಬರ್ ತಿಂಗಳ 4 ರಿಂದ 10ನೇ ತಾರೀಖಿನೊಳಗೆ ಸಪ್ತಾಹವನ್ನು ನಡೆಸಲಾಗುತ್ತದೆ ಎಂದರು.ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಜನರ ಜೀವನ ಮಟ್ಟವನ್ನು ಸುಧಾರಿಸುವ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶಕ್ತಿ ಇದೆ. ಕೋಟ್ಯಾಂತರ ಜನರು ಅವಕಾಶ ಪಡೆದು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬಹುದು. ಉದ್ಯೋಗ ಅವಕಾಶ ಪಡೆಯಬಹುದು. ಮೊದಲಿಗೆ ಕೇವಲ ಸ್ವಲ್ಪ ಮಂದಿ ಇಸ್ರೋದ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಈಗ ಹೆಚ್ಚು ಅವಕಾಶಗಳು ಸಿಗುತ್ತಿವೆ ಎಂದು ತಿಳಿಸಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಮಳವಳ್ಳಿ ತಾಲೂಕಿನಲ್ಲಿ ಪ್ರತಿ ಸರ್ಕಾರಿ ಶಾಲೆಗೆ ಟ್ಯಾಬ್ ವಿತರಣೆ, ಇನ್ನೊಂದು ವರ್ಷದಲ್ಲಿ ಪ್ರತಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗುವುದು. ಇಸ್ರೋ ಪುನರ್ ಸಂಪರ್ಕದ ಮೂಲಕ ನೇರವಾಗಿ ಕ್ಲಸ್ಟರ್ ಮಟ್ಟದಲ್ಲಿ ಒಂದೊಂದು ಶಾಲೆ ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಾಗುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರಾಕೆಟ್ ವಿಜ್ಞಾನ, ಅಂತರಿಕ್ಷ ವಿಜ್ಞಾನ, ಇಸ್ರೋ ಸಂಸ್ಥೆಯ ಯಶಸ್ಸಿನ ಹಾದಿ ಮತ್ತು ವಸ್ತು ಪ್ರದರ್ಶನ ಹಾಗೂ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ, ಆಶುಭಾಷಣ ಸ್ಪರ್ಧೆ, ಜ್ಞಾಪಕ ಶಕ್ತಿ ಪರೀಕ್ಷೆ, ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿದ್ದ ಗಣ್ಯರನ್ನು ಕಾರ್ಯಕ್ರಮದ ಆಯೋಜಕ ಎಚ್.ವಿ.ಅಶ್ವಿನ್ ಕುಮಾರ್ ಅಭಿನಂದಿಸಿದರು. ವಿಜ್ಞಾನಿಗಳಾದ ಆನಂದ್, ನಾಗೇಂದ್ರ, ಹಲಗೂರು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ಬಿಇಒ ಉಮಾ ಸೇರಿದಂತೆ ಇತರರು ಇದ್ದರು.------------
5ಕೆಎಂಎನ್ ಡಿ21,22,23ಹಲಗೂರಲ್ಲಿ ನಡೆದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಪ್ತಾಹವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಉದ್ಘಾಟಿಸಿದರು.---
ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಪ್ತಾಹದಲ್ಲಿ ಭಾಗವಹಿಸಿದ್ದ ವಿಜ್ಞಾನಿಗಳನ್ನು ಅಭಿನಂದಿಸಲಾಯಿತು.---
ವಿಜ್ಞಾನ ಸಪ್ತಾಹದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು.