ವಾರಾಂತ್ಯ: ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಭಾರೀ ಜನಜಂಗುಳಿ

| Published : Mar 24 2024, 01:35 AM IST / Updated: Mar 24 2024, 01:36 AM IST

ಸಾರಾಂಶ

ಸಂಜೆ ೭ ಗಂಟೆಯ ನಂತರ ಹೆಚ್ಚಿನ ನೂಕುನುಗ್ಗಲು ಉಂಟಾಯಿತು. ಮಧ್ಯರಾತ್ರಿ ೨ ಗಂಟೆಯವರೆಗೂ ಜನರು ಜಾತ್ರಾ ಪೇಟೆಯಿಂದ ಹೋಗಲು ಮನಸ್ಸು ಮಾಡಲಿಲ್ಲ.

ಶಿರಸಿ: ರಾಜ್ಯ ಪ್ರಸಿದ್ಧ ಮಾರಿಕಾಂಬಾ ಜಾತ್ರೆಯು ಐದನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ದೂರದ ಊರುಗಳಿಂದ ಪ್ರವಾಸಿಗರು, ಭಕ್ತರು ಬಂದು ದೇವಿಯ ದರ್ಶನ ಪಡೆದುಕೊಂಡರು.

ಶನಿವಾರ, ಭಾನುವಾರ ಸರ್ಕಾರಿ ರಜೆ ಇರುವ ಕಾರಣ ನೌಕರ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವಿಯ ದರ್ಶನ ಪಡೆದು ಸೇವೆ ಸಲ್ಲಿಸಿದರು. ಇದರೊಂದಿಗೆ ಶಿರಸಿ ಮೂಲದವರಾಗಿ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಯುವಕರು ಜಾತ್ರೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಎಂದಿನಂತೆ ಹಣ್ಣುಕಾಯಿ: ನಗರದ ಮಾರಿಕಾಂಬಾ ದೇವಸ್ಥಾನದಿಂದ ಬಿಡ್ಕಿ ಬೈಲಿನ ಜಾತ್ರಾ ಮಂಟಪದವರೆಗೂ ಭಕ್ತರು ಸಾಲುಗಟ್ಟಿ ನಿಂತು ಎಂದಿನಂತೆ ಹಣ್ಣುಕಾಯಿ, ಕಾಣಿಕೆ, ಹರಕೆ, ತುಲಾಭಾರ ಮತ್ತಿತರ ಸೇವೆಗಳನ್ನು ಸಲ್ಲಿಸಿ ಅಮ್ಮನ ಕೃಪೆಗೆ ಪಾತ್ರರಾದರು. ಬೆಳಗ್ಗೆ ೫ರಿಂದ ಆರಂಭವಾದ ಸೇವಾ ಕಾರ್ಯ ಮಧ್ಯಾಹ್ನದವರೆಗೂ ನೂಕುನುಗ್ಗಲಿನಲ್ಲಿಯೇ ನಡೆಯಿತು.

ಮನರಂಜನೆಗೆ ಹೆಚ್ಚಿನ ಜನ: ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಊರುಗಳಲ್ಲಿ ವಾಸವಿರುವ ಶಿರಸಿ ಸ್ಥಳೀಯರು ಜಾತ್ರಾ ಮೋಜಿನಲ್ಲಿ ಮಿಂದೆದ್ದರು. ಎರಡು ದಿನಗಳ ಕಾಲ ರಜಾ ಇರುವ ಕಾರಣ ಬೃಹತ್ ಸಂಖ್ಯೆಯಲ್ಲಿ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಸಂಜೆ ೭ ಗಂಟೆಯ ನಂತರ ಹೆಚ್ಚಿನ ನೂಕುನುಗ್ಗಲು ಉಂಟಾಯಿತು. ಮಧ್ಯರಾತ್ರಿ ೨ ಗಂಟೆಯವರೆಗೂ ಜನರು ಜಾತ್ರಾ ಪೇಟೆಯಿಂದ ಹೋಗಲು ಮನಸ್ಸು ಮಾಡಲಿಲ್ಲ. ತೊಟ್ಟಿಲು, ದೋಣಿ ಸೇರಿದಂತೆ ವಿವಿಧ ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಶನಿವಾರ ರಾತ್ರಿ ಹೆಚ್ಚಿನ ಜನದಟ್ಟಣೆ ಕಂಡು ಒಳ್ಳೆಯ ವ್ಯಾಪಾರ ಮಾಡಿದವು.

ಬಳೆ ಪೇಟೆಯಲ್ಲಿ ಜನಸಂದಣಿ: ಕಳೆದ ನಾಲ್ಕು ದಿನಗಳಿಗೆ ಹೋಲಿಸಿದಲ್ಲಿ ಬಳೆ ಪೇಟೆಯಲ್ಲಿಯೂ ಹೆಚ್ಚಿನ ಜನಸಂದಣಿ ಕಂಡುಬಂದಿತು. ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರು, ನೌಕರ ವರ್ಗದವರಿಂದ ಬಳೆ ಅಂಗಡಿಗಳ ಸಾಲು ತುಂಬಿ ತುಳುಕಿದವು.