25ರಂದು ಕನ್ನಡ ಜ್ಯೋತಿ ರಥಯಾತ್ರೆಗೆ ಸ್ವಾಗತ

| Published : Oct 24 2024, 12:49 AM IST

25ರಂದು ಕನ್ನಡ ಜ್ಯೋತಿ ರಥಯಾತ್ರೆಗೆ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ನಾಡಿನಾದ್ಯಂತ ಸಂಚರಿಸುತ್ತಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಹಸೀಲ್ದಾರ್ ಪಟ್ಟರಾಜಗೌಡ ಹರಿಹರದಲ್ಲಿ ಹೇಳಿದ್ದಾರೆ.

- ರಾಜ್ಯೋತ್ಸವ ಹಿನ್ನೆಲೆ ಸಿದ್ಧತಾ ಸಭೆಯಲ್ಲಿ ತಹಸೀಲ್ದಾರ್ ಪಟ್ಟರಾಜಗೌಡ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ನಾಡಿನಾದ್ಯಂತ ಸಂಚರಿಸುತ್ತಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಹಸೀಲ್ದಾರ್ ಪಟ್ಟರಾಜಗೌಡ ಹೇಳಿದರು.

ಬುಧವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಕನ್ನಡ ರಥಯಾತ್ರೆ ಸ್ವಾಗತಿಸುವ ಹಾಗೂ ನ.1ರಂದು ರಾಜ್ಯೋತ್ಸವ ಆಚರಣೆ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ಮಂಡ್ಯದಲ್ಲಿ 2024ರ ಡಿಸೆಂಬರ್ 20, 21, ಮತ್ತು 22ರಂದು ಮೂರು ದಿನಗಳ ಕಾಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದು ಕನ್ನಡ ನಾಡಿನ ನುಡಿಹಬ್ಬವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಅ.24ರಂದು ಹಾವೇರಿ ಮೂಲಕವಾಗಿ ದಾವಣಗೆರೆ ಜಿಲ್ಲೆಯ ಜಗಳೂರಿಗೆ ಬರಲಿದೆ. ಅ.24ರಂದು ದಾವಣಗೆರೆ, ಹರಿಹರದಲ್ಲಿ ರಥಯಾತ್ರೆಯನ್ನು ಸ್ವಾಗತಿಸಲಿದ್ದಾರೆ. ಅ.25ರಂದು ಚನ್ನಗಿರಿ ಮೂಲಕ ಹೊನ್ನಾಳಿಗೆ ರಥ ಆಗಮಿಸಲಿದೆ. ಆದ್ದರಿಂದ ಅ.25ರ ಮಧ್ಯಾಹ್ನದ ಹೊತ್ತಿಗೆ ದೇವನಾಯಕನಹಳ್ಳಿಯ ಕನಕದಾಸ ವೃತ್ತದಲ್ಲಿ ರಥಯಾತ್ರೆ ಅದ್ಧೂರಿಯಾಗಿ ಸ್ವಾಗತಿಸಬೇಕಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಎಲ್ಲ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ರೈತ ಮುಖಂಡರು ಹಾಗೂ ಕಂದಾಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯವರು ಹಾಗೂ ಪಟ್ಟಣದ ಹೈಸ್ಕೂಲ್ ವಿದ್ಯಾರ್ಥಿಗಳು ಮಾತ್ರ ರಥಯಾತ್ರೆಯಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಮಾಡಬೇಕಾಗಿದೆ. ರಥಯಾತ್ರೆ ಸ್ವಾಗತಿಸಿದ ನಂತರ, ಮೆರವಣಿಗೆ ನಡೆಸಿ, ಎಚ್.ಕಡದಕಟ್ಟೆ ಕೈಮರದವರೆಗೂ ತೆರಳಿ ಯಾತ್ರೆಗೆ ಬೀಳ್ಕೊಡಬೇಕಾಗಿದೆ ಎಂದು ವಿವರಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಮುರಿಗೆಪ್ಪಗೌಡ, ಉಪಾಧ್ಯಕ್ಷ ಎನ್.ಎಚ್. ಗೋವಿಂದಪ್ಪ, ಖಜಾಂಚಿ ನಿಜಲಿಂಗಪ್ಪ ಹಾಗೂ ಯುವಶಕ್ತಿ ಒಕ್ಕೂಟದ ಕತ್ತಿಗೆ ನಾಗರಾಜ್, ಚಂದ್ರಪ್ಪ ಮಡಿವಾಳ, ಕನ್ನಡಪರ ಸಂಘಟನೆಯ ಮಂಜು, ಹರೀಶ್, ಪ್ರದೀಪ್ ಮಾರಗೊಂಡನಹಳ್ಳಿ ಅಧಿಕಾರಿಗಳು ಉಪಸ್ಥಿತರಿದ್ದರು.

- - -

-23ಎಚ್.ಎಲ್.ಐ2:

ಸಭೆಯಲ್ಲಿ ತಹಸೀಲ್ದಾರ್ ಪಟ್ಟರಾಜಗೌಡ ಮಾತನಾಡಿದರು.