ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ ಪ್ರಚಾರ ರಥವನ್ನು ಶ್ರೀರಾಮಯೋಗೇಶ್ವರ ಮಠದ ಪೀಠಾಧ್ಯಕ್ಷ ಶಿವಬಸವಸ್ವಾಮಿ, ವೀರಶೈವ ಮುಖಂಡ ಎಸ್.ಎ.ಮಲ್ಲೇಶ್ ನೇತೃತ್ವದಲ್ಲಿ ಮಂಗಳವಾರ ಸಂಜೆ ಸ್ವಾಗತಿಸಿದರು.ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿ ಸಂಜೆ ಮಂಡ್ಯ ತಾಲೂಕಿಗೆ ತಲುಪಿತು. ಪಟ್ಟಣದ ಬನ್ನಾರಿ ಮಾರಿಯಮ್ಮ ದೇವಸ್ಥಾನದ ಆವರಣದಲ್ಲಿ ಪ್ರಚಾರ ರಥವನ್ನು ಸ್ವಾಗತಿಸಿ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಶ್ರೀಶಿವಬಸವಸ್ವಾಮಿ ಮಾತನಾಡಿ, ಮೈಸೂರಿನ ಸುತ್ತೂರು ಕ್ಷೇತ್ರದಲ್ಲಿ ನಡೆಯುವ ಜಾತ್ರಾ ಮಹೋತ್ಸವವು ಪ್ರಸಿದ್ಧವಾಗಿದೆ ಎಂದರು.
ವೀರಶೈವ ಮುಖಂಡ ಎಸ್.ಎ.ಮಲ್ಲೇಶ್ ಮಾತನಾಡಿ, ಜ.26ರಿಂದ 31ರವರೆಗೆ ನಡೆಯುವ ಶ್ರೀಕ್ಷೇತ್ರ ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಚಾರ ನಡೆಸಲು ಪ್ರಚಾರ ರಥವು ಆಗಮಿಸಿದೆ. ಪಾಂಡವಪುರಕ್ಕೂ ಸುತ್ತೂರು ಕ್ಷೇತ್ರಕ್ಕೂ ಅಪಾರವಾದ ಬಾಂಧವ್ಯವಿದೆ ಎಂದರು.ಮೈಸೂರು ಜಿಲ್ಲೆಯಲ್ಲಿಯೇ ನಡೆಯುತ್ತಿದ್ದ ಸುತ್ತೂರು ಜಾತ್ರಾ ಮಹೋತ್ಸವವನ್ನು 2008ರಲ್ಲಿ ಆಗಿನ ಶಾಸಕ ಸಿ.ಎಸ್. ಪುಟ್ಟರಾಜು ಅವರು ಮೊದಲ ಬಾರಿಗೆ ಪಾಂಡವಪುರದ ಕುಂತಿಬೆಟ್ಟದಲ್ಲಿ ಸುತ್ತೂರು ಜಾತ್ರೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡುವ ಮೂಲಕ ಯಶಸ್ವಿಗೊಳಿಸಿದ್ದರು ಎಂದರು.
ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ, ಭಜನಾ ಮೇಳೆ, ವಸ್ತು ಪ್ರದರ್ಶನ, ಕೃಷಿ ಮೇಳೆ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಸಿ ಕ್ರೀಡೆಗಳು ಸೇರಿದಂತೆ ನಿತ್ಯ ದಾಸೋಹ ನಡೆಯಲಿದೆ ಎಂದರು.ಈ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯತ ಸಮುದಾಯದ ಜಿಲ್ಲಾಧ್ಯಕ್ಷ ಎಸ್.ಆನಂದ್, ತಾಲೂಕು ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಜಯಣ್ಣ, ಪ್ರಧಾನ ಕಾರ್‍ಯದರ್ಶಿ ಹರೀಶ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ, ಉಪಾಧ್ಯಕ್ಷ ಅಶೋಕ್, ತಹಸೀಲ್ದಾರ್ ಸಂತೋಷ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಚಲುವರಾಜು, ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ಕ್ಯಾತನಹಳ್ಳಿ ಚೇತನ್, ದ್ಯಾವಪ್ಪ, ಚನ್ನೇಗೌಡ, ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ ಸೇರಿದಂತೆ ಹಾಜರಿದ್ದರು.