ಮಲೇಬೆನ್ನೂರು: ತುಮಕೂರು ವಿಶ್ವವಿದ್ಯಾಲಯದಲ್ಲಿ ಮೇ ೧೪ರಂದು ತುಮಕೂರು ವಿಶ್ವವಿದ್ಯಾಲಯ ಆವರಣದಲ್ಲಿ ನೊಳಂಬ ಸಮುದಾಯದ ಸಂಸ್ಕೃತಿ ಮತ್ತು ಅಧ್ಯಯನ ಪೀಠ ಉದ್ಘಾಟನೆ ನಡೆಯಲಿದೆ. ಸರ್ಕಾರದ ಈ ನಿರ್ಣಯಕ್ಕೆ ನೊಳಂಬ ಸಮಾಜದ ಮುಖಂಡ ಜಿಗಳಿ ಎನ್. ಇಂದೂಧರ್ ಸ್ವಾಗತಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಪಟ್ಟಣದ ನಂದಿ ಸೌಹಾರ್ದ ಸಹಕಾರಿ ಸಂಘದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಾಗಿ ನೊಳಂಬ ಸಮಾಜದವರು ವಾಸ ಮಾಡುತ್ತಿದ್ದಾರೆ. ತುಮಕೂರು ವಿಶವಿದ್ಯಾಲಯದ ಸೆನೆಟ್, ಕುಲಸಚಿವರು, ಉಪಕುಲಪತಿಗಳು ಪುರಾತನ ಜನಾಂಗದ ಅಧ್ಯಯನ ಪೀಠ ಸ್ಥಾಪನೆ ನಿರ್ಧಾರ ತೆಗೆದುಕೊಂಡಿರುವುದು ನಮಗೆಲ್ಲ ಸಂತಸ ಉಂಟುಮಾಡಿದೆ ಎಂದರು.

ಈ ಪೀಠ ಸ್ಥಾಪನೆ ವಿಷಯ 6 ವರ್ಷದಿಂದ ಚರ್ಚೆಯಲ್ಲಿತ್ತು. ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ, ಷಡಕ್ಷರಿ ಮತ್ತು ಇತರೇ ಜನಪ್ರತಿನಿಧಿಗಳ ಅವಿರತ ಶ್ರಮದಿಂದ ಸರ್ಕಾರ ಪೀಠ ಸ್ಥಾಪನೆ ಮಾಡಿದೆ. ಅದೇ ದಿನ ವಿಚಾರ ಸಂಕಿರಣ ಏರ್ಪಡಿಸಿರುವುದು ಸೂಕ್ತವಾಗಿದೆ. ಈ ಕಾರ್ಯಕ್ಕೆ ಮಲೇಬೆನ್ನೂರು ನಂದಿ ಸೌಹಾರ್ದ ಸಹಕಾರಿ ಸಂಘವು ಲಕ್ಷ ರು. ಠೇವಣಿ ನೀಡಿದೆ. ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ ನೊಳಂಬ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಹಾಗೂ ಸಂಘ ಸಂಸ್ಥೆಯವರು ಸಮಾಜದ ಕೇಂದ್ರ ಸಮಿತಿಗೆ ದೇಣಿಗೆ ನೀಡಿ ಯಶಸ್ವಿಗೊಳಿಸಲು ಇಂದೂಧರ್ ಕೋರಿದರು.

ನೊಳಂಬ ಸಮಾಜದ ಮುಖಂಡ ಎನ್‌.ಪಿ. ತಿಮ್ಮನಗೌಡ ಮಾತನಾಡಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ನೊಳಂಬ ಹಿನ್ನೆಲೆಯ ಶಿಲಾಶಾಸನಗಳು ಲಭ್ಯವಿದೆ. ಕರ್ನಾಟಕದಲ್ಲಿ ಸಮಾಜದ ೧೨ ಮಠಗಳಿದ್ದು, ಒಬ್ಬ ಮಠಾಧೀಶರಾಗಲೀ, ಪಿಎಚ್‌.ಡಿ ಪಡೆದ ಪಂಡಿತರಾಗಲೀ, ಸಮಾಜದ ಕುಲಪತಿಗಳಾಗಲೀ ಈ ಪೀಠ ಆರಂಭಿಸಲು ಆಸಕ್ತಿ ತೋರದೇ, ತಾತ್ಸಾರ ಮಾಡಿರುವುದು ಖೇದವೆನಿಸಿದೆ ಎಂದರು.

ಸಮಾಜದ ಮುಖಂಡರಾದ ಎಚ್.ಈರನಗೌಡ, ಬಿಎಚ್ ರವಿಗೌಡ, ಎಂವಿ ನಾಗರಾಜ್, ಕುಬೇರಸ್ವಾಮಿ, ಮಳಗಿ ತಿಮ್ಮನಗೌಡ ಹಾಗೂ ಸದಸ್ಯರು ಇದ್ದರು.