-ರೋಜಗಾರ್ ದಿವಸ, ಜನ ಜಾಗೃತಿ ಕಾರ್ಯಕ್ರಮಕ್ಕೆ ಪಿಡಿಒ ಬಾಲಕೃಷ್ಣ ಶೇಳ್ಳಿಗಿ ಚಾಲನೆ
----ಕನ್ನಡಪ್ರಭ ವಾರ್ತೆ ಹುಣಸಗಿ
ತಾಲೂಕಿನ ಮುದನೂರು ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದನೂರು ಬಿ ಗ್ರಾಮದಲ್ಲಿ ವಿಕಸಿತ ಭಾರತ ರೋಜಗಾರ್ ಆ್ಯಂಡ್ ಅಜೀವಿಕ ಮಿಷನ್ ಗ್ರಾಮೀಣ ಯೋಜನೆ ಬಗ್ಗೆ ರೋಜಗಾರ್ ದಿವಸ ಹಾಗೂ ಜನ ಜಾಗೃತಿ ಕಾರ್ಯಕ್ರಮಕ್ಕೆ ಪಿಡಿಒ ಬಾಲಕೃಷ್ಣ ಶೇಳ್ಳಿಗಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರ ಜುಲೈ ಒಂದರಿಂದ ತಾಲೂಕಿನಲ್ಲಿ ವಿಬಿ-ಜಿ ರಾಮಜಿ ಜಿ (ಗ್ರಾಮೀಣ) ಯೋಜನೆ ಜಾರಿಗೆ ಬಂದಿದ್ದು, ಕೂಲಿ ಕಾರ್ಮಿಕರ ದಿನದ ಕೂಲಿ ಮೊತ್ತ 370 ರಿಂದ 382 ರುಪಾಯಿ ಗೆ ಹೆಚ್ಚಿಸಲಾಗಿದೆ. ಪ್ರತಿ ಗ್ಯಾರಂಟಿ ಕಾರ್ಡಿಗೆ ವಾರ್ಷಿಕ ಮಾನವ ದಿನಗಳು ಗುರಿ 100 ರಿಂದ 125 ಗಳ ವರಗೆ ಹೆಚ್ಚಿಸಲಾಗಿದೆ. ಕೂಲಿ ಕೆಲಸಕ್ಕೆ ಬರುವ ಕಾರ್ಮಿಕರಿಗಾಗಿ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯತಿಯಿಂದ ತಾಲೂಕಿನ ವಿವಿಧ ಗ್ರಾಮದಲ್ಲಿ ವ್ಯಾಪಕ ಪ್ರಚಾರ ಕಾರ್ಯಕ್ರಮ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಜನರ ಜೀವಾಳದ ವಿಬಿ-ಬಿ ರಾಮ್ -ಜಿ ಯೋಜನೆಯಲ್ಲಿ ಕಾರ್ಮಿಕರು ಭಾಗಿಯಾಗುವ ಮೂಲಕ ಸ್ವಾವಲಂಬಿಯಾಗಿ ಬದುಕಬೇಕು ಎಂದರು.
ಇದೆ ವೇಳೆ ತಾಲೂಕು ಐಇಸಿ ಸಂಯೋಜಕ ಮಲ್ಲಿಕಾರ್ಜುನ ಮಾತನಾಡಿ, ಚೆಕ್ ಡ್ಯಾಮ್, ಬೋಲ್ಡರ್ ಚೆಕ್ ಡ್ಯಾಮ್, ಮೀನುಗಾರಿಕೆ, ಸಿಸಿ ರಸ್ತೆ, ಸಮಗ್ರ ಕೆರೆ ಅಭಿವೃದ್ಧಿ, ಗೋಕ-ಟ್ಟೆ, ಕೃಷಿಹೊಂಡ ಹಾಗೂ ವೈಯಕ್ತಿಕ ದನದ ಶೇಡ್, ಕಿರು ಗ್ರಾಮೀಣ ಬಸ್ ನಿಲ್ದಾಣ ಸೇರಿದಂತೆ ಒಟ್ಟು 318 ಕಾಮಗಾರಿಗಳನ್ನು ಈ ಯೋಜನೆಯಲ್ಲಿ ಅಳವಡಿಸಿದ್ದಾರೆ. ತಾಲೂಕಿನಲ್ಲಿ ಕೂಲಿ ಕಾರ್ಮಿಕರಿಗೆ ಗ್ರಾಪಂ ಮುಂಭಾಗ ಕರಪತ್ರಗಳನ್ನು ವಿತರಿಸಿ ಕಾಮಗಾರಿಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ, ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು, ರೈತರು ಯೋಜನೆ ಲಾಭಪಡೆಯಲು ತಿಳಿಸಲಾಯಿತು.
ಈ ವೇಳೆ ಕಾರ್ಯದರ್ಶಿ ಅಪ್ಸನಾ ಬಡೆಘರ್, ಟಿಐಇಸಿ ಮಲ್ಲಿಕಾರ್ಜುನ ಕರ ವಸೂಲಿಗಾರರು ಗ್ರಾಮ ಪಂಚಾಯಿತಿ ಸದ್ಯಸರು, ಮುಖಂಡರು, ಗ್ರಾಪಂ ಸಿಬ್ಬಂದಿ, ಕೂಲಿ ಕಾರ್ಮಿಕರು ಗ್ರಾಮಸ್ಥರು ಇದ್ದರು.