ಸಾರಾಂಶ
ಹುಬ್ಬಳ್ಳಿ: ಕೇಂದ್ರ ಸರ್ಕಾರದ ₹180 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಕ್ರೀಡಾ ಸಮುಚ್ಚಯ ಶೀಘ್ರ ಉದ್ಘಾಟನೆಯಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಲೋಹಿಯಾ ನಗರದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾ ಸಂಕೀರ್ಣ ಕಾಮಗಾರಿಯನ್ನು ಸೋಮವಾರ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಸ್ಮಾರ್ಟ್‌ಸಿಟಿ ಯೋಜನೆ ಮತ್ತು ಖೇಲೋ ಇಂಡಿಯಾ ಅನುದಾನದಲ್ಲಿ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಮೊದಲು ಸ್ಮಾರ್ಟ್ ಸಿಟಿ ಯೋಜನೆಯಡಿ ವಾಣಿಜ್ಯ ಮಳಿಗೆ ನಿರ್ಮಿಸುವ ಉದ್ದೇಶವಿತ್ತು. ಬಳಿಕ ಅದನ್ನು ರದ್ದು ಮಾಡಿ ಜಾರ್ಖಂಡನಲ್ಲಿರುವ ಕ್ರೀಡಾಗ್ರಾಮ ಮಾದರಿಯಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸುವ ಯೋಜನೆ ರೂಪಿಸಿದ್ದೆವು. ಆರಂಭದಲ್ಲಿ ಇದಕ್ಕೆ ವಿರೋಧವಿತ್ತು. ನಾನೇ ಮುತುವರ್ಜಿ ವಹಿಸಿ ಅನುದಾನ ಮತ್ತು ಅನುಮತಿ ಕೊಡಿಸಿದ್ದೆ. ಈಗ ಅದರ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. 5-6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು ಎಂದರು.
ಶಾಸಕ ಅರವಿಂದ ಬೆಲ್ಲದ ಕಾಳಜಿ ವಹಿಸಿ ಉತ್ತಮ ಕಾಮಗಾರಿ ನಡೆಯುವಂತೆ ನೋಡಿಕೊಂಡಿದ್ದಾರೆ. ಕಾಮಗಾರಿ ವೇಳೆ ಸ್ಥಳೀಯರೂ ಸಹಕಾರ ನೀಡಿದ್ದಾರೆ ಎಂದು ಶ್ಲಾಘಿಸಿದರು.ಹಾಸ್ಟೇಲ್‌ಗೆ ಜಾಗ ನೀಡಲಿ: ರಾಜ್ಯ ಸರ್ಕಾರ ಕ್ರೀಡಾ ಸಮುಚ್ಚಯದ ಪಕ್ಕದಲ್ಲಿರುವ ಜಾಗ ನೀಡಿದರೆ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಹಾಸ್ಟೇಲ್ ನಿರ್ಮಿಸಲು ಕೇಂದ್ರ ಸಿದ್ಧ. ಅಗತ್ಯ ಭೂಮಿಯನ್ನು ರಾಜ್ಯ ಸರ್ಕಾರ ನೀಡಲಿ ಎಂದು ಮನವಿ ಮಾಡಿದ ಅವರು, ಕ್ರೀಡಾಪಟುಗಳಿಗೆ ಅವಶ್ಯವಿರುವ ತರಬೇತಿ ನೀಡಲು ಕೇಂದ್ರ ಸರ್ಕಾರ ತಯಾರಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಅಧಿಕಾರಿಗಳಲ್ಲಿ ಸಮನ್ವಯತೆ ಕೊರತೆಯಿಂದ ಬೈಪಾಸ್ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳು ವಿಳಂಭವಾಗುತ್ತಿದೆ. ಫಜಲ್ ಪಾರ್ಕಿಂಗ್ ಗುತ್ತಿಗೆ ರದ್ದು ಪಡಿಸುವಂತೆ ಹಲವಾರು ಬಾರಿ ಹೇಳಿದ್ದೇನೆ. ಆದರೆ, ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಗುತ್ತಿಗೆ ರದ್ದು ಪಡಿಸುವುದೇ ಉತ್ತಮ ಎಂದರು.ಇದೇ ವೇಳೆ ಸ್ಮಾರ್ಟ್ ಸಿಟಿ ಯೋಜನೆಗಳ ಲೋಪಗಳ ಕುರಿತಂತೆ ಪತ್ರಕರ್ತರು ಗಮನಸೆಳೆದಾಗ ಅವುಗಳನ್ನು ಶೀಘ್ರ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಈ ವೇಳೆ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಮೇಯರ್ ರಾಮಪ್ಪ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಪ್ರೀತಿ ಲದ್ವಾ ಮತ್ತಿತತರಿದ್ದರು.