ರಾಜ್ಯ ಶಿಕ್ಷಣ ನೀತಿ ಸಮಿತಿ ಏನಾಯಿತು: ಬರಗೂರು ರಾಮಚಂದ್ರಪ್ಪ ಪ್ರಶ್ನೆ

| Published : Mar 02 2025, 01:15 AM IST

ರಾಜ್ಯ ಶಿಕ್ಷಣ ನೀತಿ ಸಮಿತಿ ಏನಾಯಿತು: ಬರಗೂರು ರಾಮಚಂದ್ರಪ್ಪ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟುಮಾಡಲಿದೆ ಎಂಬ ಕಾರಣಕ್ಕೆ ಎಸ್‌ಇಪಿ ಜಾರಿಗೆ ಸರ್ಕಾರ ಮುಂದಾಯಿತು. ಅದಕ್ಕಾಗಿ ಒಂದು ಸಮಿತಿಯನ್ನೂ ರಚಿಸಿತು. ಆ ಸಮಿತಿ ನೀಡಿರುವ ೧೪ ಪುಟಗಳ ವರದಿ ವೇಳಾಪಟ್ಟಿಯಂತಿದೆ. ನಂತರದಲ್ಲಿ ಆ ಸಮಿತಿ ಏನಾಯಿತೊ ಗೊತ್ತಿಲ್ಲ. ಇದುವರೆಗೂ ರಾಜ್ಯ ಶಿಕ್ಷಣ ನೀತಿಯನ್ನು ಸರ್ಕಾರದಿಂದ ಜಾರಿಗೆ ತರಲು ಸಾಧ್ಯವಾಗಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಶಿಕ್ಷಣ ನೀತಿ ರೂಪಿಸಲು ರಚಿಸಲಾಗಿದ್ದ ಎಸ್‌ಇಪಿ ಸಮಿತಿ ಎಲ್ಲಿ ಹೋಯಿತೋ ಗೊತ್ತಿಲ್ಲ. ಅದು ನೀಡಿದ ೧೪ ಪುಟಗಳ ಮಧ್ಯಂತರ ವರದಿ ವೇಳಾ ಪಟ್ಟಿಯಂತಿದೆ. ಎಸ್‌ಇಪಿ ಜಾರಿಗೊಳಿಸದಿರುವುದರಿಂದ ಪ್ರಾಥಮಿಕ, ಪ್ರೌಢ ಶಿಕ್ಷಣದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಅಧಿವೇಶನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟುಮಾಡಲಿದೆ ಎಂಬ ಕಾರಣಕ್ಕೆ ಎಸ್‌ಇಪಿ ಜಾರಿಗೆ ಸರ್ಕಾರ ಮುಂದಾಯಿತು. ಅದಕ್ಕಾಗಿ ಒಂದು ಸಮಿತಿಯನ್ನೂ ರಚಿಸಿತು. ಆ ಸಮಿತಿ ನೀಡಿರುವ ೧೪ ಪುಟಗಳ ವರದಿ ವೇಳಾಪಟ್ಟಿಯಂತಿದೆ. ನಂತರದಲ್ಲಿ ಆ ಸಮಿತಿ ಏನಾಯಿತೊ ಗೊತ್ತಿಲ್ಲ. ಇದುವರೆಗೂ ರಾಜ್ಯ ಶಿಕ್ಷಣ ನೀತಿಯನ್ನು ಸರ್ಕಾರದಿಂದ ಜಾರಿಗೆ ತರಲು ಸಾಧ್ಯವಾಗಿಲ್ಲ. ಈ ಕುರಿತಂತೆ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು ಎಂದರು.

ಹಿಂದೆಲ್ಲಾ ಶಿಕ್ಷಕರ ಬೇಡಿಕೆಗಳ ಜೊತೆಗೆ ಶಿಕ್ಷಣದ ವ್ಯವಸ್ಥೆಯ ಬಗ್ಗೆಯೂ ಆಲೋಚಿಸುತ್ತಿದ್ದರು. ಈಗ ಅವರ ಸಂಖ್ಯೆ ಕ್ಷೀಣಿಸಿದೆ. ಶಿಕ್ಷಕರ ಸಮಸ್ಯೆಗಳ ಜೊತೆಗೆ ಶಿಕ್ಷಣದ ಬಗ್ಗೆಯೂ ಆಲೋಚಿಸುವ, ಸರ್ಕಾರದಿಂದ ಪರಿಹಾರ ದೊರಕಿಸುವ ಮನೋಸ್ಥಿತಿ ಬೆಳವಣಿಗೆ ಕಾಣಬೇಕಿದೆ ಎಂದರು.

ತಂತ್ರಜ್ಞಾನ ಶಿಕ್ಷಣ ಬಂದಿದೆ. ಶಿಕ್ಷಣದಲ್ಲಿ ತಂತ್ರಜ್ಞಾನ ಎಷ್ಟು ಬಳಕೆಯಾಗಬೇಕೆಂಬ ಬಗ್ಗೆ ವಿವೇಚನೆಯೇ ಇಲ್ಲ. ಶೈಕ್ಷಣಿಕ ಅಸಮಾನತೆ ತಾಂಡವವಾಡುತ್ತಿದೆ. ಪ್ರಾಥಮಿಕ ಪೂರ್ವ ಶಿಕ್ಷಣದಿಂದಲೇ ಅಂಗನವಾಡಿ-ಪಬ್ಲಿಕ್ ಸ್ಕೂಲ್, ರಾಜ್ಯ, ಕೇಂದ್ರ ಪಠ್ಯಕ್ರಮ, ನವೋದಯ, ಕೇಂದ್ರೀಯ ಹೀಗೆ ವಿವಿಧ ಮಾದರಿಯ ಶಿಕ್ಷಣ ನೀಡಲಾಗುತ್ತಿದೆ. ಈ ಅಸಮಾನತೆ ತೊಡೆದುಹಾಕಿ ಎಲ್ಲಾ ಮಕ್ಕಳಿಗೂ ಸಮಾನ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸುವ ಕಡೆ ಸರ್ಕಾರಗಳು ಗಂಭಿೂಕ್ಷಿ ಪ್ರಯತ್ನ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಶಿಕ್ಷಕರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಿದಾಗ ಸಮಸ್ಯೆ ನಿವಾರಣೆಗೆ ಸಿಎಂ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಪರಿಹಾರಕ್ಕೆ ವೇದಿಕೆಯೂ ಸಿದ್ಧವಾಯಿತು. ಸಮಿತಿ ರಚನೆಯಾಗಿ ನಾಲ್ಕೈದು ತಿಂಗಳಾದರೂ ವರದಿ ಮಾತ್ರ ಇನ್ನೂ ಕೊಟ್ಟಿಲ್ಲ. ಸಿ ಅಂಡ್‌ ಆರ್ ನಿಯಮ ಬದಲಾವಣೆಯಾಗಬೇಕಿದೆ. ಪದವೀಧರ ಶಿಕ್ಷಕರಿಗೆ ನ್ಯಾಯ ದೊರಕಿಸಬೇಕು. ಮುಖ್ಯಶಿಕ್ಷಕರ ಕೆಲಸದ ಒತ್ತಡ ಕಡಿಮೆಯಾಗಬೇಕು. ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ರೂಪಿಸಬೇಕಿದೆ. ಇವೆಲ್ಲಾ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ದೊರಕಿಸಿ ಶಿಕ್ಷಣವನ್ನು ಗ್ಯಾರಂಟಿಯನ್ನಾಗಿ ಕೊಡಬೇಕು ಎಂದರು.