ಸಾರಾಂಶ
ಐದು ವರ್ಷದ ಅವಧಿಯಲ್ಲಿ ಸಂಸದ ಉಮೇಶ ಜಾಧವ ಅಭಿವೃದ್ದಿ ಮಾಡುವುದು ಒಂದು ಕಡೆ ಇರಲಿ ಒಂದು ಬುಟ್ಟಿ ಮಣ್ಣು ಕೂಡಾ ಹಾಕಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.
ಕನ್ನಡಪ್ರಭ ವಾರ್ತೆ ಲಾಡ್ಲಾಪುರ/ಚಿತ್ತಾಪುರ
ಐದು ವರ್ಷದ ಅವಧಿಯಲ್ಲಿ ಸಂಸದ ಉಮೇಶ ಜಾಧವ ಅಭಿವೃದ್ದಿ ಮಾಡುವುದು ಒಂದು ಕಡೆ ಇರಲಿ ಒಂದು ಬುಟ್ಟಿ ಮಣ್ಣು ಕೂಡಾ ಹಾಕಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.ಲಾಡ್ಲಾಪುರ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಪ್ರಚಾರ ನಡೆಸಿ ಅವರು ಮಾತನಾಡುತ್ತಿದ್ದರು.
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ನೀವು ಕಾಂಗ್ರೆಸ್‌ಗೆ ಮತ ನೀಡಿ ಎಂದು ಒತ್ತಿ ಹೇಳಿದ ಖರ್ಗೆ, ಎಲ್ಲಾ ಗ್ಯಾರಂಟಿಗಳನ್ನು ಬಂದ್ ಮಾಡುವಂತೆ ಬಿಜೆಪಿಯವರು ತಕರಾರು ತೆಗೆದಿದ್ದಾರೆ. ಅವರ ಪ್ರಕಾರ ಗ್ಯಾರಂಟಿ ಬಂದ್ ಮಾಡಿದರೆ, ಬಡವರಿಗೆ ತೊಂದರೆಯಾಗುತ್ತದೆ. ಅವರ ಮಾತು ಕೇಳಿ ನಾವು ಬಂದ್ ಮಾಡುವುದಿಲ್ಲ ಎಂದರು.ಗ್ಯಾರಂಟಿಗಳಿಂದ ಬರುವ ಹಣ ಸದ್ಭಳಕೆಯಾಗುತ್ತಿದೆ. ಶಾಲಾ ಮಕ್ಕಳ ಫೀಸು, ಮನೆ ಸಂಸಾರಕ್ಕೆ ಬಳಕೆಯಾಗುತ್ತಿದೆ. ಇದರಿಂದಾಗಿ ಬಹಳಷ್ಟು ಕುಟುಂಬಗಳು ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿದ್ದಾರೆ. ಇದು ನಮ್ಮ ಸರ್ಕಾರದ ಬದ್ದತೆಯಾಗಿದೆ. ಇದನ್ನು ಬಿಜೆಪಿಯವರು ಟೀಕಿಸುತ್ತಾರೆ. ಅವರ ಮಾತಿಗೆ ಬೆಲೆ ಕೊಡದೆ ಕಾಂಗ್ರೆಸ್ ಗೆ ಬೆಂಬಲಿಸಿ ಎಂದು ಖರ್ಗೆ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಬರೀ ಸುಳ್ಳುಗಳನ್ನು ಹೇಳಿಕೊಂಡು ಜನರಿಗೆ ಅನ್ಯಾಯ ಮಾಡಿದೆ. ಈಗ ಮತ್ತೆ ಚುನಾವಣೆ ಬಂದಿದೆ. ಮತ್ತೆ ನಿಮ್ಮಂದ ಮತ ಕೇಳಲು ಬರುತ್ತಿದ್ದಾರೆ. ಅವರಿಗೆ ಮತ ಹಾಕಿದರೆ ಯಾವ ಅಭಿವೃದ್ದಿಯಾಗುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಗೆ ಮತ ಹಾಕಿ ಎಂದು ಮನವಿ ಮಾಡಿದರು.ವೇದಿಕೆಯ ಮೇಲೆ ಭೀಮಣ್ಣ ಸಾಲಿ, ಸಿದ್ದುಗೌಡ ಪಾಟೀಲ್ ಅಫಜಲ್ ಪುರಕರ್, ವೀರನಗೌಡ ಪರಸರೆಡ್ಡಿ ಸೇರಿದಂತೆ ಹಲವರಿದ್ದರು.