ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಎಚ್.ಡಿ.ದೇವೇಗೌಡರು ಈ ರಾಷ್ಟ್ರದ ಮಾಜಿ ಪ್ರಧಾನಿ ಎನಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ನನ್ನ ಕಾಂಗ್ರೆಸ್ ಪಕ್ಷ ಕಾರಣ ಎಂದು ಎದೆ ಮುಟ್ಟಿ ಹೇಳುತ್ತೇನೆ. 16 ಸ್ಥಾನ ಇದ್ದವರಿಗೆ ಪ್ರಧಾನ ಮಂತ್ರಿ ಕೊಟ್ಟರೂ ಅಪ್ಪ-ಮಕ್ಕಳು ದಿನಬೆಳಗಾದರೆ ಬಾಯಿಗೆ ಬಂದಂತೆ ಟೀಕೆ ಮಾಡುವುದು ಯಾವ ಧರ್ಮ ಎಂದು ಕೋಟೆಬೆಟ್ಟದ ನರಸಿಂಹಸ್ವಾಮಿಗೆ ಒಪ್ಪಿಸಿ ಹೋಗುತ್ತೇನೆಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಜೆಡಿಎಸ್ ನಾಯಕರ ವಿರುದ್ಧ ಗುಡುಗಿದರು.ತಾಲೂಕಿನ ಕೋಟೆಬೆಟ್ಟದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನನ್ನ ಮಂತ್ರಿಗಿರಿಯನ್ನೂ ಕಳೆದ ಕುಮಾರಣ್ಣ ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಅತ್ತಿಂದಿತ್ತ ಇತ್ತಿಂದತ್ತ ಚೆಂಡಾಟಕ್ಕೆ ನಿಂತಿದ್ದಾರೆ ಎಂದು ಜರಿದರು.
ಅವರು ಯಾವತ್ತಾದರೂ ಒಬ್ಬರಿಗೆ ಒಳ್ಳೆಯದು ಮಾಡಿದ್ದಾರಾ. ಅವರ ಏಟು ಬೀಳುವವರೆಗೂ ಚಲುವಣ್ಣನಿಗೂ ಗೊತ್ತಾಗಲಿಲ್ಲ. ಈಗ ಅವರ ಏಟಿನ ರುಚಿ ಚಲುವಣ್ಣಗೆ ಗೊತ್ತಾಗುತ್ತಿದೆ. ಅವರ ಏಟು ಏನೆಂದು ನಾನು ಮೊದಲಿನಿಂದಲೂ ನೋಡಿದ್ದೇನೆ. ಹಾಗಾಗಿ ನಾನು ಅವರ ಏಟಿಗೆ ಕೇರೂ ಮಾಡಲ್ಲ, ಬಗ್ಗುವುದೂ ಇಲ್ಲ ಎಂದರು.ಆ ಕಪಟ ನಾಟಕದ ತೆರೆ ಎಳೆದಿದೆ ಮನೆ ಮಂದಿಯ ಎಲ್ಲಾ ಚಿತ್ರಣವೂ ಆಚೆ ಬಂದಿದೆ. ಅದರ ಬಗ್ಗೆ ಮಾತಾಡಿ ಬಾಯಿ ಹೊಲಸು ಮಾಡಿಕೊಳ್ಳುವುದಿಲ್ಲ. ಹಿರಿಯರು ಹೇಳುತ್ತಿದ್ದಂತೆ ಸತ್ಯಹೊರ ಬಂದಿದೆ ಎಂದು ಎಚ್ಡಿಕೆ ವಿರುದ್ಧ ಹರಿಹಾಯ್ದರು.
ವೇದಿಕೆಯಲ್ಲಿ ಇತ್ತೀಚಿಗೆ ಕಾಶ್ಮೀರದ ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ಕೃತ್ಯಕ್ಕೆ ಬಲಿಯಾದ 26 ಮಂದಿ ಭಾರತೀಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ತಾಲೂಕಿನಿಂದ ಮನ್ಮುಲ್‌ಗೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಎನ್.ಅಪ್ಪಾಜಿಗೌಡ ಮತ್ತು ಲಕ್ಷ್ಮೀನಾರಾಯಣ ಅವರನ್ನು ಸನ್ಮಾನಿಸಲಾಯಿತು.ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಮತ್ತು ಅಪ್ಪಾಜಿಗೌಡ ಮಾತನಾಡಿದರು. ಶಾಸಕರಾದ ಪಿ.ರವಿಕುಮಾರ್, ರಮೇಶ ಬಂಡಿಸಿದ್ದೇಗೌಡ, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ, ಮಧು ಮಾದೇಗೌಡ, ಮಾಜಿ ಶಾಸಕರಾದ ಎಚ್.ಬಿ.ರಾಮು, ಪ್ರಕಾಶ್, ಕೆ.ಬಿ.ಚಂದ್ರಶೇಖರ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಸಮಾಜ ಸೇವಕ ಸ್ಟಾರ್ ಚಂದ್ರು, ಬ್ರಹ್ಮದೇವರಹಳ್ಳಿ ಪಿಎಸಿಎಸ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ದಿವಾಕರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಉಪಾಧ್ಯಕ್ಷೆ ನೀಲಾಮೂರ್ತಿ, ಮುಖಂಡರಾದ ಎನ್.ಲಕ್ಷ್ಮೀಕಾಂತ್, ರೇವಣ್ಣ, ತ್ಯಾಗರಾಜು, ಮಾವಿನಕೆರೆ ಸುರೇಶ್, ಉದಯಕಿರಣ್ ಸೇರಿದಂತೆ ಕೈ ಪಕ್ಷದ ಸಹಸ್ರಾರು ಮಂದಿ ಕಾರ್ಯಕರ್ತರು ಇದ್ದರು.