ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮನಲ್ಲ, ದೇಶದ ರಾಮ

| Published : Jan 13 2024, 01:32 AM IST

ಸಾರಾಂಶ

ಅಯೋಧ್ಯೆಯಲ್ಲಿರುವುದು ಬಿಜೆಪಿಯ ರಾಮನಲ್ಲ, ಶ್ರೀರಾಮ ಅವರು ಇಡೀ ದೇಶದ ದೇವರಾಗಿದ್ದು, ಸ್ವಾರ್ಥಕ್ಕಾಗಿ ರಾಮನನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ ಟೀಕೆ.

ರಾಯಚೂರು: ಅಯೋಧ್ಯೆಯಲ್ಲಿರುವುದು ಬಿಜೆಪಿಯ ರಾಮನಲ್ಲ, ಶ್ರೀರಾಮ ಅವರು ಇಡೀ ದೇಶದ ದೇವರಾಗಿದ್ದು, ಸ್ವಾರ್ಥಕ್ಕಾಗಿ ರಾಮನನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ ನುಡಿದರು.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ನಾಯಕರು ರಾಮ ಮಂದಿರ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಅಲ್ಪಸಂಖ್ಯಾತರ ಒಲೈಕೆ ಎನ್ನುವುದು ತಪ್ಪು. ಅನೇಕ ಮುಸ್ಲಿಮರು ಆಂಜನೇಯ ದೇವಸ್ಥಾನಕ್ಕೆ ಹೋಗುತ್ತಾರೆ. ಅದು ಅವರವರ ನಂಬಿಕೆ. ಶ್ರೀರಾಮ ಕೇವಲ ಬಿಜೆಪಿಗೆ ಸೀಮಿತರಲ್ಲ ಎಂದರು.

ರಾಜ್ಯದಲ್ಲೂ ಕುರಿಗಾಹಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ತೆಲಂಗಾಣ ಮಾದರಿಯ ಯೋಜನೆ ಜಾರಿ ಮಾಡಬೇಕು. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಕುರುಬರು ದೇಶದ ಮೂಲ ನಿವಾಸಿಗಳು. ಕುರುಬರು ಮತ್ತು ಯಾದವರು ಪಶುಪಾಲಕರಿದ್ದಂತೆ. ತೆಲಂಗಾಣದಲ್ಲಿ ಪ್ರತಿ ಕುಟುಂಬಕ್ಕೆ 20 ಕುರಿ, ಒಂದು ಟಗರು ನೀಡುವ ಯೋಜನೆ ಜಾರಿ ಮಾಡಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಯೋಜನೆ ಜಾರಿಗೆ ಸಿಎಂ ಮುಂದಾಗಬೇಕು ಎಂದರು.

ಶೆಪರ್ಡ್ ಸಂಸ್ಥೆ ಉದ್ದೇಶ ಅರ್ಥ ಮಾಡಿಕೊಳ್ಳಬೇಕಿದೆ. ಕುರುಬ ಸಮಾಜದ ಆಳ ಅಗಲ ತಿಳಿಯಬೇಕಿದೆ. ಭಾರತದಲ್ಲಿ 12 ಕೋಟಿ ರು.ಗೂ ಅಧಿಕ ಜನಸಂಖ್ಯೆ ಇದೆ. ವಿವಿಧ ಭಾಷೆ, ಸಂಸ್ಕೃತಿ, ಉಡುಗೆ ತೊಡುಗೆಗಳ ಭಿನ್ನತೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರನ್ನೆಲ್ಲ ಒಂದು ವೇದಿಕೆಯಲ್ಲಿ ತರುವ ಉದ್ದೇಶದಿಂದ ಶೆಪರ್ಡ್ ಆರಂಭಿಸಲಾಗಿದೆ ಎಂದು ತಿಳಿಸಿದರು. ಶೆಫರ್ಡ್ ಇಂಡಿಯಾ ಇಂಟರ್ ನ್ಯಾಶನಲ್ ಸಂಸ್ಥೆ ಕೂಡ ರಾಜಕೀಯ ಶಕ್ತಿಯಾಗಬೇಕು ಎನ್ನುವ ಉದ್ದೇಶ ನಮ್ಮದಾಗಿದೆ. ಕೆಲವು ರಾಜ್ಯದಲ್ಲಿ ಕುರುಬ ಸಮಾವನ್ನು ಎಸ್ಟಿ ಸೇರಿಸಲಾಗಿದೆ ಎಂದರು.

ಶೆಫರ್ಡ್ ಇಂಡಿಯಾ ಇಂಟರನ್ಯಾಶನಲ್ ಸಂಸ್ಥೆಯ ರಾಜ್ಯಾಧ್ಯಕ್ಷ ಸಿ.ಎಂ.ನಾಗರಾಜ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪ್ರೇಮಲತಾ, ಪದಾಧಿಕಾರಿಗಳಾದ ನಾಗರಾಜ್, ಬಾಬು ಜಿದ್ದಿಮನೆ, ರೂಪಾ ಕೃಷ್ಣಪ್ಪ, ಮಂಜುಳಾ ನಾಗರಾಜ ಸೇರಿ ಅನೇಕರಿದ್ದರು.