ಬದುಕಿನಲ್ಲಿ ಕಲೆ ಅಳವಡಿಸಿಕೊಂಡಾಗ ಹೃದಯ ಅರಳಿಸುತ್ತದೆ-ಸ್ವಾಮೀಜಿ

| Published : Mar 01 2025, 01:06 AM IST

ಬದುಕಿನಲ್ಲಿ ಕಲೆ ಅಳವಡಿಸಿಕೊಂಡಾಗ ಹೃದಯ ಅರಳಿಸುತ್ತದೆ-ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತೊಗಲು ಗೊಂಬೆ ಆಟದ ಭೀಮವ್ವ ಶಿಳ್ಳೇಕ್ಯಾತರ 103 ವರ್ಷದ ಹಿರಿಯ ಜೀವಿಯಾದರೂ ಜೀವನೋತ್ಸಾಹವನ್ನು ಮಾತ್ರ ಕಳೆದುಕೊಂಡಿಲ್ಲ. ಇನ್ನೂ ಆ ಧ್ವನಿಯಲ್ಲಿ ಸುಮಧುರತ್ವ ಇದೆ. ಕಲೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಹೃದಯವನ್ನು ಅರಳಿಸುತ್ತದೆ ಎಂದು ಮುಂಡರಗಿ ತೋಂಟದಾರ್ಯ ಮಠದ ಪೀಠಾಧಿಪತಿ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಮುಂಡರಗಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತೊಗಲು ಗೊಂಬೆ ಆಟದ ಭೀಮವ್ವ ಶಿಳ್ಳೇಕ್ಯಾತರ 103 ವರ್ಷದ ಹಿರಿಯ ಜೀವಿಯಾದರೂ ಜೀವನೋತ್ಸಾಹವನ್ನು ಮಾತ್ರ ಕಳೆದುಕೊಂಡಿಲ್ಲ. ಇನ್ನೂ ಆ ಧ್ವನಿಯಲ್ಲಿ ಸುಮಧುರತ್ವ ಇದೆ. ಕಲೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಹೃದಯವನ್ನು ಅರಳಿಸುತ್ತದೆ ಎಂದು ಮುಂಡರಗಿ ತೋಂಟದಾರ್ಯ ಮಠದ ಪೀಠಾಧಿಪತಿ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು. ಅವರು ಸೋಮವಾರ ಸಂಜೆ ತೋಂಟದಾರ್ಯ ಮಠದಲ್ಲಿ ಜರುಗಿದ 59ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಭೀಮವ್ವ ಶಿಳ್ಳೇಕ್ಯಾತರ ತಮ್ಮ ಬದುಕಿನಲ್ಲಿ ದುಡ್ಡು, ಬೆಳ್ಳಿ, ಬಂಗಾರವನ್ನು ಬೆನ್ನಟ್ಟಿ ಹೋಗದೇ ತೊಗಲು ಗೊಂಬೆಯ ಆಟದಂತಹ ನಮ್ಮ ದೇಶಿ ಕಲೆಯನ್ನು ತನ್ನ ಬದುಕಿನಲ್ಲಿ ಅಳ‍ವಡಿಸಿಕೊಂಡಿರುವುದು ಅದನ್ನು ಉಳಿಸಿ ಬೆಳೆಸಿರುವುದು ವಿಶೇಷ. ಹೀಗಾಗಿ ಕೇಂದ್ರ ಸರ್ಕಾರ ಅವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ನೆರೆಯ ಕೊಪ್ಪಳ ಹಾಗೂ ಗದಗ ಜಿಲ್ಲೆಗೆ ಹೆಮ್ಮೆ ತರುವಂತದ್ದು. ಅವರ ಕಲೆ ಈ ನಾಡಿಗೆ ಇನ್ನೂ ಮುಂದುವರೆಯಲಿ. ಹಿರಿ ವಯಸ್ಸಿನಲ್ಲಿ ಭೀಮವ್ವ ತಾಯಿಯನ್ನು ಕಾಳಜಿಯಿಂದ ನೋಡಿಕೊಳ್ಳಬೇಕು ಎಂದರು. ಬನಹಟ್ಟಿಯ ಹಿರಿಯ ಸಾಹಿತಿ ಪ್ರೊ. ಬಿ.ಆರ್. ಪೋಲೀಸಪಾಟೀಲ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿ, ಜನಪದ ಜ್ಞಾನಪದವಾಗಿದೆ. ವಚನ ಸಂಸ್ಕೃತಿ ನಮ್ಮಲ್ಲಿ ಉಳಿದು ಬೆಳೆದು ಬಂದಿರುವುದಕ್ಕೆ ಜನಪದವೂ ಸಹಕಾರಿಯಾಗಿದೆ. ವಚನ ಸಾಹಿತ್ಯ ಕಟ್ಟುಗಳನ್ನು ಸಂಗ್ರಹಿಸುವಲ್ಲಿ ಅವುಗಳನ್ನು ಉಳಿಸಿ ಬೆಳೆಸಿ ಇಂದು ಎಲ್ಲರಿಗೂ ಬಸವಾದಿ ಶಿವಶರಣರ ವಚನಗಳು ದೊರೆಯುವಂತೆ ಮಾಡಿದ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದರು.

ಫ.ಗು. ಹಳಕಟ್ಟಿಯಂತವರನ್ನು ಸದಾಕಾಲ ನೆನೆಯಬೇಕು. ಬಸವಣ್ಣನವರು ಎಂದರೆ ಕೇವಲ ವ್ಯಕ್ತಿ ಅಲ್ಲ, ಅವರೊಬ್ಬ ಮಹಾನ್ ಶಕ್ತಿ. ಜನಪದ ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿಯಾಗಿದೆ. ಬಸವಣ್ಣನವರು ಕಾಯಕ, ದಾಸೋಹ ಸೇವೆ ತತ್ವ ತಿಳಿಸಿಕೊಟ್ಟರು. ಜನಪದಿಯರು ಬಸವಣ್ಣನವರ ಕುರಿತು ಅದ್ಭುತ ಕಲ್ಪನೆ ಮೂಲಕ ಜನಪದ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ ಎಂದರು. ಬಾಚೆಗೊಂಡನಹಳ್ಳಿಯ ಶಿವಮಹಾಂತ ಸ್ವಾಮೀಜಿ, ವಿಜಯ ದೊಡ್ಡವಾಡ ಮಾತನಾಡಿದರು. ಶಿವಾನುಭವ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆ ಮೋರನಾಳದ ಹಗಲು ಗೊಂಬೆಯಾಟದ ಕಲಾವಿದೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಭೀಮವ್ವ ಶಿಳ್ಳೆಕ್ಯಾತರ ಹಾಗೂ ವಿಜ್ಞಾನವಸ್ತು ಪ್ರದರ್ಶನದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ರಕ್ಷಿತಾ ಚುರ್ಚಿಹಾಳ ಹಾಗೂ ಶಿವಾನುಭವದ ಭಕ್ತಿಸೇವೆ ವಹಿಸಿಕೊಂಡಿದ್ದ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ನಿಜಗುಣಪ್ರಭ ತೋಂಟದಾರ್ಯ ಸ್ವಾಮಿಜಿಯವರ 61ನೇ ಜನ್ಮದಿನೋತ್ಸವದ ಅಂಗವಾಗಿ ಶ್ರೀಮಠದ ಭಕ್ತರು ಸನ್ಮಾನಿಸಿದರು. ಜಯಶ್ರೀ ಅಳವಂಡಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅವರಿಗೆ ಶಿವಕುಮಾರ ಕುಬಸದ ತಬಲಾ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಕೊಟ್ರೇಶ ಅಂಗಡಿ, ಈಶಣ್ಣ ಬೆಟಗೇರಿ, ಎಚ್.ವಿರುಪಾಕ್ಷಗೌಡ, ಓಂಪ್ರಕಾಶ ಲಿಂಗಶೆಟ್ಟರ, ಪವನ ಚೋಪ್ರಾ, ಅಡಿವೆಪ್ಪ ಚಲವಾದಿ, ಶಿವಕುಮಾರ ಬೆಟಗೇರಿ, ವೀರೇಂದ್ರ ಅಂಗಡಿ, ಶಿವಯೋಗಿ ಕೊಪ್ಪಳ, ಗಿರೀಶಗೌಡ ಪಾಟೀಲ, ಬಸಯ್ಯ ಗಿಂಡಿಮಠ, ಸದಾಶಿವಯ್ಯ ಕಬ್ಬೂರಮಠ, ಉಮೇಶ ಹಿರೇಮಠ, ಪಾಲಾಕ್ಷಿ ಗಣದಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ. ನಿಂಗು ಸೊಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ ಉಳ್ಳಾಗಡ್ಡಿ ನಿರೂಪಿಸಿ, ನಾಗೇಶ ಹುಬ್ಬಳ್ಳಿ ಶರಣು ಸಮರ್ಪಣೆ ಮಾಡಿದರು.